ಬೆಳಗಾವಿ,ಜನವರಿ,15,2025 (www.justkannada.in): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಂಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರಮೇಶ್ ಜಾರಕಿಹೊಳಿ, ಮಗನ ಸ್ಥಾನ ಭದ್ರ ಮಾಡೋಕೆ ಮಾಡ್ತಿದಾರಾ? ಅಥವಾ ಪಕ್ಷ ಭದ್ರ ಮಾಡೋಕೆ ರಾಜ್ಯ ಪ್ರವಾಸ ಮಾಡುತ್ತಿದ್ದಾರಾ ಅದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ನಾವು ಹೋರಾಟ ಮಾಡಿದ್ದು ನಿಜ. ಈ ಬಗ್ಗೆ ಹೈಕಮಾಂಡ್ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧ. ಯಡಿಯೂರಪ್ಪರವರ ಬಗ್ಗೆ ನಮಗೆ ಅಪಾರವಾದ ಗೌರವ ಇದೆ. ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ಸ್ವಾಗತ.ಆದರೆ ಯಾಕೆ ಪ್ರವಾಸ ಮಾಡುತ್ತಿದ್ದಾರೆ ಅದನ್ನ ಸ್ಪಷ್ಟಪಡಿಸಬೇಕು. ಮಗನ ಸ್ಥಾನ ಭದ್ರ ಮಾಡೋಕೆ ಮಾಡ್ತಿದಾರಾ? ಪಕ್ಷ ಭದ್ರ ಮಾಡೋಕೆ ಮಾಡ್ತಿದಾರಾ ಅದನ್ನು ಸ್ಪಷ್ಟಪಡಿಸಬೇಕು ಯಡಿಯೂರಪ್ಪರವರೇ ನಿಮ್ಮ ಬಗ್ಗೆ ಗೌರವ ಇದೆ, ವಯಸ್ಸಾಗಿದೆ ಪಕ್ಷ ಎಲ್ಲ ನಿಮಗೆ ಕೊಟ್ಟಿದೆ ದಯವಿಟ್ಟು ಪಕ್ಷವನ್ನು ಬ್ಲ್ಯಾಕ್ ಮೇಲ್ ಮಾಡಬೇಡಿ!ವಿಜಯೇಂದ್ರ ಬೆನ್ನು ಹತ್ತಿದ್ರೆ ನೀವೂ ಹಾಳಾಗುತ್ತೀರಿ!ಮಗನಾಗಿ ನೋಡಬೇಡಿ, ಫೇಲಾದ ಅಧ್ಯಕ್ಷ ಅಂತಾ ನೋಡಿ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಹಕಾರ ಕೊಡಿ ಎಂದರು.
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪ ವಿಚಾರ ಕುರಿತು ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಅದು ಕಾಂಗ್ರೆಸ್ ಆಂತರಿಕ ಸಮಸ್ಯೆ, ಆ ಬಗ್ಗೆ ನನಗೆ ಸಂಬಂಧ ಇಲ್ಲ. ನಾನು ಬಿಜೆಪಿ ನಿಷ್ಠಾವಂತ ಎಂಎಲ್ ಎ, ಕಾರ್ಯಕರ್ತ. ಕಚೇರಿ ನಿರ್ಮಾಣದಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ದೊಡ್ಡದಿತ್ತು ಎಂಬುದು ನಿಜ. ಇಂದು ಬೆಳಗಾವಿಯಲ್ಲಿ ಬಿಜೆಪಿ ಕಚೇರಿ ನಿರ್ಮಾಣ ಆಗಲು ಜಾಗ ಕೊಡಿಸಲು ನಾನು ಓಡಾಡಿದ್ದೇನೆ. ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸತೀಶ್ ಜಾರಕಿಹೊಳಿ ಕೊಡುಗೆ ಇದೆ. ಅರ್ಧ ಕಾಮಗಾರಿ ಆಗಿದ್ದ ಕಟ್ಟಡ ಪೂರ್ಣಗೊಳಿಸಿದ್ದಾರೆ. ಇಂದಿಗೂ ಕಚೇರಿ ನಿರ್ವಹಣೆಗೆ ಸತೀಶ್ ಜಾರಕಿಹೊಳಿ ದುಡ್ಡು ನೀಡುತ್ತಿದ್ದಾರೆ ಅಂತಾ ಕೇಳಿದ್ದೇನೆ. ಕಾಂಗ್ರೆಸ್ ಕಚೇರಿ ಕಾಮಗಾರಿ ಪೂರ್ಣಗೊಳ್ಳಲು, ನಿರ್ವಹಣೆಗೆ ಸತೀಶ್ ಜಾರಕಿಹೊಳಿ ಕೊಡುಗೆ ಇದೆ ಎಂದು ತಿಳಿಸಿದರು.
ನಾನು ಜಿಲ್ಲಾ ಉಸ್ತುವಾರಿ ಸಚಿವನಿದ್ದಾಗ ಬೆಳಗಾವಿ ರಾಜಕಾರಣಕ್ಕೆ ಡಿಕೆ ಶಿವಕುಮಾರ್ ಎಂಟ್ರಿ ಆಗಲು ಕೊಟ್ಟಿಲ್ಲ, ಅಲ್ಲೇ ಅವನನ್ನು ಬ್ಲಾಕ್ ಮಾಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಶಾಸಕ, ಮಂತ್ರಿಯಾಗಿ ಇದ್ದಾಗ ಆತನನ್ನು ಇಲ್ಲಿ ಬರಲು ಕೊಟ್ಟಿರಲಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ಮಟ್ಟದಲ್ಲಿ ಅಂದು ಡಿಕೆಶಿ ಸಲಹೆ ಸ್ವೀಕಾರ ಮಾಡಿದ್ದೀನಿ. ಕಟ್ಟಡ ನಿರ್ಮಾಣ ಆಗುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷರಿದ್ದರು. ಆ ವೇಳೆ ಏನು ಲೆಕ್ಕ ಪತ್ರ ಮಾಡಿದ್ದಾರೆ ದೇವರಿಗೆ ಗೊತ್ತು. ಈಗಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ ಕೇಳಿ, ಯಾರು ಯಾರು ಗೋಲ್‌ಮಾಲ್ ಮಾಡಿದ್ದಾರೆ ಅಂತಾ ನನಗೆ ಹೇಳಿದ್ದಾರೆ ನಾನು ಬಹಿರಂಗಪಡಿಸಲ್ಲ. ಆ ಹಣದಲ್ಲಿ ಯಾರೂ ಕಾರು ಖರೀದಿಸಿದ್ದಾರೆ ವಿನಯ್ ನನ್ನು ಕೇಳಿ ಎಂದು ರಮೇಶ ಜಾರಕಿಹೊಳಿ ತಿಳಿಸಿದರು.
ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ಕ್ರೆಡಿಟ್ ವಾರ್: ನಾನು 1.27 ಕೋಟಿ ರೂ. ಕೊಟ್ಟಿದ್ದೀನಿ
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ವಿಚಾರಕ್ಕೆ ಕ್ರೆಡಿಟ್ ವಾರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಕಚೇರಿ ಇರುವ ಜಾಗ ಮಾಜಿ ಕೇಂದ್ರ ಸಚಿವ ಬಿ.ಶಂಕರಾನಂದ ಹೆಸರಲ್ಲಿತ್ತು. ಬಿ.ಶಂಕರಾನಂದ ಮಕ್ಕಳನ್ನು ಆ ಜಾಗ ಕಚೇರಿಗೆ ಬಿಟ್ಟು ಕೊಡಲು ಮನವೊಲಿಸಿದೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಕಟ್ಟಡಕ್ಕೆ ಜಾಗ ಮಂಜೂರಾಯಿತು. ಜಾಗ ಫ್ರೀ ಆಗಿ ಕೊಡಬಹುದಿತ್ತು, ಆದರೆ ಆ ಜಾಗಕ್ಕೆ 54 ಲಕ್ಷ ರೂ.ನಿಗದಿ ಮಾಡಿದರು. ಈ ಹಣ ಕಡಿಮೆ ಮಾಡಲು ಪ್ರಯತ್ನ ಪಟ್ಟೆ ಆದರೂ ಆಗಲಿಲ್ಲ. ಆಗ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಣ ತುಂಬಲು ಮನವಿ ಮಾಡಿದರು. ಒಂದೇ ಹಂತದಲ್ಲಿ ಕಾಂಗ್ರೆಸ್ ಕಚೇರಿಗೆ 54 ಲಕ್ಷ ರೂಪಾಯಿ ಕಟ್ಟಬೇಕಿತ್ತು. ಅದು ಬಹಳ ಆಗುತ್ತದೆ, ಎರಡು ಹಂತದಲ್ಲಿ ಹಣ ಪಾವತಿಗೆ ಮನವಿ ಮಾಡಿದ್ದೆ. ಬಳಿಕ ಮೊದಲ ಕಂತು 27 ಲಕ್ಷ ಹಣವನ್ನು ನಾನು ತುಂಬಿದೆ. ಜಾಗ ಖರೀದಿ ಆಯಿತು, ಕಟ್ಟಡ ಕಾಮಗಾರಿ ಆರಂಭವಾಗಿರಲಿಲ್ಲ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ಕೊಟ್ಟೆ. ಒಟ್ಟು ಒಂದು ಕೋಟಿ 27 ಲಕ್ಷ ರೂಪಾಯಿ ನಾನು ಸ್ವಂತ ಕೊಟ್ಟಿದ್ದೀನಿ. ಕಟ್ಟಡ ನಿರ್ಮಾಣದಲ್ಲಿ ಗೋಲ್‌ಮಾಲ್ ಆಗಿದೆ, ಮುಂದಿನ ದಿನಗಳಲ್ಲಿ ಹೇಳುತ್ತೀನಿ. ಕಾಂಗ್ರೆಸ್ ಕಚೇರಿ ನಾನೇ ನಿರ್ಮಾಣ ಮಾಡಿದ್ದು ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಹೇಳುತ್ತಿರೋದು ತಪ್ಪು. ಆಗ ಇದ್ದಂತಹ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು 20 ರಿಂದ 25 ಲಕ್ಷ ಹಣ ನೀಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಹಣ ಕೊಟ್ಟಿದ್ದಾರೆ ಅಂತಾ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿದ್ದಾರೆ. ಇದನ್ನ ಖಂಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
Key words: MLA, Ramesh Jarkiholi, Former cm, BSY