ಬೆಂಗಳೂರು,ಏಪ್ರಿಲ್,4,2021(www.justkannada.in): ಆರೋಪಿಯನ್ನ ರಕ್ಷಿಸಲು ನನ್ನ ವಿರುದ್ದ ಷಡ್ಯಂತ್ರ ಮಾಡಿದ್ದಾರೆ. ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ನನ್ನ ಹೆಸರಿಲ್ಲ. ಆದರೂ ಪಿಜಿಯಲ್ಲಿ ಪರಿಶೀಲನೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಸಿಡಿ ಸಂತ್ರಸ್ತ ಯುವತಿ ಗಂಭೀರ ಆರೋಪ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಪತ್ರ ಬರೆದಿದ್ದಾರೆ.
ಈ ಕುರಿತು ಪೊಲೀಸ್ ಕಮಿಷನರ್ ಗೆ ಮೂರು ಪುಟಗಳ ಪತ್ರ ಬರೆದಿರುವ ಸಿಡಿ ಸಂತ್ರಸ್ತ ಯುವತಿ, ಆರೋಪಿಯನ್ನ ಕೇವಲ 3 ಗಂಟೆ ವಿಚಾರಣೆ ಮಾಡಿದ್ದಾರೆ. ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಹೇಳಿ ವಾಪಸ್ ಕಳಿಸಿದ್ದಾರೆ. ಅವರು ಮುಕ್ತವಾಗಿ ಓಡಾಡಲು ಎಸ್ ಐಟಿ ಅವಕಾಶ ಮಾಡಿಕೊಟ್ಟಿದೆ. ಆದರೆ ನನ್ನನ್ನ ಒಂದು ದಿನವೂ ಬಿಡದೇ ವಿಚಾರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಇದುವರೆಗೂ ನನ್ನನ್ನು ತೇಜೋವಧೆ ಮಾಡುವ, ನನ್ನ ವಿರುದ್ಧ ಕಪೋಲಕಲ್ಪಿತ ವಿಷಯಗಳು ಪ್ರಸಾರವಾಗುತ್ತಿವೆ. ನಾನು ಪ್ರಕರಣದ ದೂರುದಾರರಾಗಿದ್ದರೂ ನನ್ನ ಚಾರಿತ್ರ್ಯವಧೆ ಮಾಡುವ ಷಡ್ಯಂತ್ರ ನಡೆಸಲಾಗಿದೆ. ದೂರಿನಲ್ಲಿ ನನ್ನ ಹೆಸರು ಉಲ್ಲೇಖವಾಗದಿದ್ದರೂ ಪಿಜಿಯಲ್ಲಿ ಪರಿಶೀಲನೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಸಿಎಂ ಯಡಿಯೂರಪ್ಪ ವಿರುದ್ಧವೇ ಸಂತ್ರಸ್ತ ಯುವತಿ ಆರೋಪ ಮಾಡಿದ್ದು, ರಮೇಶ ಜಾರಕಿಹೊಳಿ ಆರೋಪ ಮುಕ್ತರಾಗಿ ಬರುತ್ತಾರೆ ಎಂಬ ಸಿಎಂ ಹೇಳಿಕೆ ನನಗೆ ತೀವ್ರ ಆತಂಕ ಮೂಡಿಸಿದೆ. ನನ್ನ ಸಹಮತ ಪಡೆಯದೆ ಪಿಪಿ ನೇಮಕ ಮಾಡಲಾಗಿದೆ. ಇಡೀ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ. ಈ ಪ್ರಕರಣದ ತನಿಖೆಯ ಮೇಲೆ ನನಗೆ ನಂಬಿಕೆ ಇಲ್ಲವಾಗಿದೆ. ಸರ್ಕಾರದ ಒತ್ತಡಕ್ಕೆ ಮಣಿಯದೆ ನನಗೆ ನ್ಯಾಯ ಕೊಡಿಸಿ. ನ್ಯಾಯಸಮ್ಮತ ವಿಚಾರಣೆ ನಡೆಸಬೇಕು ಎಂದು ಯುವತಿ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
Key words: ramesh jarkiholi- CD case- Evidence-young woman-CD victim – letter –police Commissioner-serious allegations