ಬೆಂಗಳೂರು, ಮೇ 08, 2019 : 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ನಟಿ, ರಾಜಕಾರಣಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಏಷ್ಯಾನೆಟ್ ಮತ್ತು ಸುವರ್ಣ ನ್ಯೂಸ್ ಸುದ್ದಿವಾಹಿನಿಗೆ ಬೆಂಗಳೂರು ಸಿವಿಲ್ ಕೋರ್ಟ್ 50 ಲಕ್ಷ ರೂ. ದಂಡ ವಿಧಿಸಿದೆ.
ಮ್ಯಾಚ್ ಫಿಕ್ಸಿಂಗ್/ ಸ್ಪಾಟ್ ಫಿಕ್ಸಿಂಗ್ ಪ್ರಕರಣಲ್ಲಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಈ ಸುದ್ದಿ ವಾಹಿನಿ ಕಾರ್ಯಕ್ರಮ ಪ್ರಸಾರ ಮಾಡಿದ್ದು, ಇದರ ವಿರುದ್ಧ ರಮ್ಯಾ ಮಾನಹಾನಿ ಮೊಕದ್ದಮೆ ಹೂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸ್ಪಾಟ್ ಫಿಕ್ಸಿಂಗ್‌ನಲ್ಲಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಬಿಂಬಿಸುವ ಯಾವುದೇ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಸುದ್ದಿವಾಹಿನಿಗೆ ತಾಕೀತು ನೀಡಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್ 2013 ಮೇ ತಿಂಗಳಲ್ಲಿ ಕನ್ನಡದ ನಟಿಯೊಬ್ಬರು ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಅದರಲ್ಲಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದ ರಮ್ಯಾ ಅವರ ಫೋಟೊವನ್ನು ತೋರಿಸಲಾಗಿತ್ತು.
ಆದರೆ 2013ರಲ್ಲಿ ತಾನು ಯಾವುದೇ ರೀತಿಯಲ್ಲಿ ಐಪಿಎಲ್ ಜತೆ ಸಂಬಂಧ ಹೊಂದಿರಲಿಲ್ಲ, ಆ ಹೊತ್ತಲ್ಲಿ ತಾನು ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ ಎಂದು ರಮ್ಯಾ ಹೇಳಿದ್ದರು. ತಾನು ಹಗರಣವೊಂದರಲ್ಲಿ ಭಾಗಿಯಾಗಿದ್ದೇನೆ ಎಂದು ಮಿಥ್ಯಾರೋಪ ಮಾಡಿದ್ದಕ್ಕಾಗಿ ರಮ್ಯಾ ಸುವರ್ಣವಾಹಿನಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.
ಕೃಪೆ : ಪ್ರಜಾವಾಣಿ
Ramya defamation case: Rs 50 lakh fine imposed to Asianet Suvarna News by high court of karnataka