ಮೈಸೂರು, ಮೇ 11, 2022 (www.justkannada.in news ) ಕರ್ನಾಟಕ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ (ಎಫ್ವಿಸಿಕೆ), ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ, ೨೦೦೦ಕ್ಕೆ ತಿದ್ದುಪಡಿ ತರುವ ರಾಜ್ಯ ಸರ್ಕಾರದ ತೀರ್ಮಾವನ್ನು ಸ್ವಾಗತಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಶಿಫಾರಸ್ಸುಗಳಿಗೆ ಅನುಗುಣವಾಗಿ ರಾಜ್ಯದ ವಿಶ್ವವಿದ್ಯಾಲಯಗಳ ರಚನೆ ಹಾಗೂ ಕಾರ್ಯನಿವಹಣೆಗಳಲ್ಲಿ ಬದಲಾವಣೆಗಳನ್ನು ತರಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ವೇಧಿಕೆ ಅಧ್ಯಕ್ಷ ಪ್ರೊ.ಕೆ,ಎಸ್.ರಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.
ಎಫ್ವಿಸಿಕೆನ ಈ ಕೆಳಕಂಡ ಸಲಹೆಗಳನ್ನು ಅಳವಡಿಸಿಕೊಳ್ಳುವಂತೆ ಸರ್ಕಾರವನ್ನು ಕೋರಿದೆ.
• ಸಿಬ್ಬಂದಿಗಳ ಹಾಲಿ ಸಂಖ್ಯೆಯನ್ನು (೪೫-೫೦%) ಆದ್ಯತೆಯ ಮೇರೆಗೆ ಅರ್ಹ ಅಭ್ಯರ್ಥಿಗಳಿಂದ ತುಂಬುವುದು.
• ಅಭಿವೃದ್ಧಿ ಅನುದಾನವನ್ನು ಒದಗಿಸುವ ಮೂಲಕ ಹಳೆಯ ಹಾಗೂ ಹೊಸ ವಿಶ್ವವಿದ್ಯಾಲಯಗಳ ಮೂಲಭೂತಸೌಕರ್ಯಗಳನ್ನು ಬಲಪಡಿಸುವುದು ಹಾಗೂ ಆಂತರಿಕ ಸಂಪನ್ಮೂಲಗಳನ್ನು ವೃದ್ಧಿಸಲು ಪ್ರೋತ್ಸಾಹ ನೀಡುವುದು. ಇಂದಿನ ಜ್ಞಾನ ವ್ಯವಸ್ಥೆಗಳಿಗೆ ನಮಗೆ ಇಂದಿನ ಸಾಧನಗಳು ಹಾಗೂ ತಂತ್ರಜ್ಞಾನಗಳ ಅಗತ್ಯವಿದೆ, ಹಳೆಯದಲ್ಲ.
• ಸಿಂಡಿಕೇಟ್ ಎನ್ನುವ ಹೆಸರನ್ನು ಬೋರ್ಡ್ ಆಫ್ ಗೌವರ್ನರ್ಸ್ (BOG)’ ಎಂಬ ಹೆಸರಿಗೆ ಬದಲಾಯಿಸುವುದು. ಈ ಮಂಡಳಿಗೆ, ಕುಲಪತಿಗಳನ್ನು ನೇಮಕ ಮಾಡುವುದೂ ಒಳಗೊಂಡಂತೆ ವಿಸ್ತೃವಾದ ಅಧಿಕಾರವಿರಬೇಕು. ಈ ನಿಟ್ಟಿನಲ್ಲಿ ಐಐಎಂ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್) ಮಾದರಿಯನ್ನು ಅನುಸರಿಸುವುದು ಉತ್ತಮ.
• ನೂರಾರು ಸಂಯೋಜಿತ ಕಾಲೇಜುಗಳಿರುವಂತಹ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ, ಅಂಗಸಂಸ್ಥೆಗಳು, ಪರೀಕ್ಷೆಗಳು, ಕಾನೂನುಕಟ್ಟಳೆಗಳು ಹಾಗೂ ವಿದ್ಯಾರ್ಥಿ ಕಲ್ಯಾಣ ಚಟುವಟಿಕೆಗಳನ್ನು ನೋಡಿಕೊಳ್ಳಲು ಪ್ರೋ-ಚಾನ್ಸೆಲರ್ ಹುದ್ದೆ ಸೃಷ್ಟಿಸುವುದು ಒಳಿತು (ಕುಲಪತಿಗಳನ್ನು ಇದರಿಂದ ಮುಕ್ತಗೊಳಿಸಬೇಕು).
• ಮಾಹಿತಿ ಹಕ್ಕು ಕಾಯ್ದೆ ಪರಿಚಯಿಸಿರುವ ಹಾಲಿ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿವಿಧ ಚಟುವಟಿಕೆಗಳ ಕಡೆ ಗಮನಕೇಂದ್ರೀಕರಿಸಲು ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್ಒ) ಹುದ್ದೆ ಸೃಷ್ಟಿಸುವುದು ಸಮಂಜಸ.
• ಸರ್ಕಾರದಿಂದಾಗಲೀ ಅಥವಾ ಕುಲಪತಿಗಳಿಂದಾಗಲೀ ಎಲ್ಲಾ ನಾಮನಿರ್ದೇಶನಗಳನ್ನೂ ಸಹ BOG ಹಾಗೂ VC ಅವರ ಶಿಫಾರಸ್ಸಿನ ಮೇಲೆ ಮಾಡಬೇಕು. ಸಮರ್ಥ ಆಡಳಿತಕ್ಕಾಗಿ ಸಂಘಟಿತ ಜ್ಞಾನವನ್ನು ಒದಗಿಸುವ ಸುಸಂಬದ್ಧ ತಂಡವನ್ನು ಹೊಂದುವುದು ಇದರ ಉದ್ದೇಶ.
• ಹಣಕಾಸಿಗೆ ಸಂಬಂಧಪಟ್ಟ ಇತರೆ ಅನೇಕ ವಿಷಯಗಳಲ್ಲಿ BOG ಗೆ ಅನಿಯಂತ್ರಿತ ಸ್ವಾಯತ್ತತೆ ಇರಬೇಕು. ಉದಾಹರಣೆಗೆ, ಸಂಯೋಜನೆ ಹೊಂದುವುದು ಹಾಗೂ ರದ್ದುಪಡಿಸುವುದನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯ ನಿರ್ಧರಿಸಬೇಕು.
• ಪ್ರಾಯೋಗಿಕವಾಗಿ, ವಿಶ್ವದರ್ಜೆಯ ಉತ್ತಮ ವಿಶ್ವವಿದ್ಯಾಲಯಗಳಂತೆ, ನಾವೀನ್ಯತೆ, ಕ್ರಿಯಾಶೀಲತೆಯನ್ನು ತರಲು ಕೆಲವು ವಿಶ್ವವಿದ್ಯಾಲಯಗಳನ್ನು ರಾಜ್ಯದ ಉತ್ಕೃಷ್ಟ ಸಂಸ್ಥೆಗಳಂತೆ ಗುರುತಿಸಿ ಅವುಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಬೇಕು. ಉತ್ತಮ ಶೈಕ್ಷಣಿಕ ಅಭ್ಯಾಸಗಳನ್ನು ಹೊಂದಲು ಇಂತಹ ಮಾದರಿಗಳು ನಮಗೆ ಅಗತ್ಯ.
• ಸರ್ಕಾರದ ಹೊಸ ಪಾತ್ರ, ನಿಯಂತ್ರಕನಂತಲ್ಲದೆ ಸುಗಮಗಾರಿಕೆಯನ್ನು ಕಲ್ಪಿಸುವಂಥಿರಬೇಕು. ಅನೇಕ ನಿಬಂಧನೆಗಳಿದ್ದರೆ ಉತ್ಪಾದಕತೆಯ ಮೇಲೆ ಪರಿಣಾಮ ಉಂಟಾಗುತ್ತದೆ. ನಮ್ಮ ವಿಶ್ವವಿದ್ಯಾಲಯಗಳು ಶಿಕ್ಷಣ ಕ್ಷೇತ್ರದೊಂದಿಗೆ ಸಮಾಲೋಚಿಸಿ, BOG ಒದಗಿಸುವ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸುವಂತಾಗಲಿ. ಒಂದು ವೇಳೆ ಏನಾದರೂ ದೊಡ್ಡ ಮಟ್ಟದ ಲೋಪಗಳು, ಭ್ರಷ್ಟಾಚಾರಗಳು ಉಂಟಾದರೆ ಸರ್ಕಾರ ಮಧ್ಯಸ್ಥಿಕೆ ವಹಿಸಬಹುದು.
key words : rangappa-former-vice.chanceloors-forum