ಶಿವಮೊಗ್ಗ,ಮೇ,28,2021(www.justkannada.in):
ಪ್ರಖ್ಯಾತ ಬ್ರೆಜಿಲ್ ಕಾದಂಬರಿಕಾರ ಪಾವ್ಲೋ ಕೊಯೆಲ್ಲೋನ (Paulo Coelho) ಆಲ್ಕೆಮಿಸ್ಟ್-ರಸವಾದಿ (Alchemist) ಕಾದಂಬರಿಯ ಒಂದು ಪ್ರಸಂಗ ನನ್ನ ಮನಸ್ಸಿನಲ್ಲಿ ಯಾವಾಗಲೂ ಸುಳಿದಾಡುತ್ತಿರುತ್ತದೆ. ಆ ಕಥೆಯ ವಿಶ್ಲೇಷಣೆ ಮಾಡಲು ಹೊರಟರೆ ಬಹಳ ಅರ್ಥಗಳು ಸ್ಫುರಿಸುತ್ತವೆ. ದಿನನಿತ್ಯದ ಜೀವನದಲ್ಲಿ ವಿವಿಧ ಸನ್ನಿವೇಶಗಳನ್ನು ಎದುರಿಸಬೇಕಾದಾಗ ಈ ಕಥೆ ನೆನಪಾಗುತ್ತಲೇ ಇರುತ್ತದೆ. ‘ಯಶಸ್ಸು’ ನಮ್ಮ ಗುರಿ-ಗಮ್ಯಸ್ಥಾನ ಎಂದು ಅದನ್ನು ಬೆನ್ನಟ್ಟುತ್ತಲೇ ಇರುತ್ತೇವೆ. ಗುರಿ ತಲುಪಿದ ಮೇಲೆ ಏನಿದೆ? ಪಯಣ ನಿರಂತರ, ಇನ್ನೂ ಏನಿದೆ ಎಂಬುದನ್ನು ಅರಸುತ್ತಾ ಪಯಣ ಸಾಗುತ್ತದೆ. ಇಂತಹ ಕಥೆಗಳು ವ್ಯಕ್ತಿತ್ವ ವಿಕಸನಕ್ಕೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿರುತ್ತವೆ. ಬದುಕಿನ ಬಗೆಗೆ ಚಿಂತನೆಗೆ ಹಚ್ಚಿ ದರ್ಶನವನ್ನು ಹೊಳೆಯಿಸುತ್ತದೆ. ಕಥೆ ಹೇಳುವ ಮೊದಲು ಇಷ್ಟೆಲ್ಲಾ ಹೇಳಿ ‘ಮೂಗಿಗಿಂತ ಮೂಗುತಿ ಭಾರ’ ಎಂದು ಅನ್ನಿಸಬಹುದು. ಹಾಗಾಗಿ ನೇರ ಕಥೆಗೇ ಬರೋಣ.
ವರ್ತಕನೊಬ್ಬ ‘ಸಂತೋಷದ ರಹಸ್ಯವೇನು’ ಎಂಬುದನ್ನು ಅರಿತುಕೊಳ್ಳಲು ತನ್ನ ಮಗನನ್ನು ಜ್ಞಾನಿಯೊಬ್ಬನ ಬಳಿ ಕಳುಹಿಸುತ್ತಾನೆ. ಆ ಯುವಕ ನಲುವತ್ತು ದಿನಗಳ ಕಾಲ ಮರಳುಗಾಡಿನಲ್ಲಿ ಓಡಾಡಿದ ನಂತರ ಅವನಿಗೆ ಒಂದು ದಿನ ಸುಂದರವಾದ ಕೋಟೆ ಕಾಣುತ್ತದೆ. ಅಲ್ಲಿ ಒಬ್ಬ ಪ್ರಾಜ್ಞ ವಾಸಿಸಿದ್ದನು. ಅಲ್ಲಿನ ಒಂದು ಕೊಠಡಿಗೆ ಯುವಕ ಪ್ರವೇಶಿಸಿದಾಗ ಅದು ಚಟುವಟಿಕೆಗಳಿಂದ ಗಿಜಿಗುಡುತ್ತಿತ್ತು. ವರ್ತಕರು ಒಂದೇ ಸಮನೆ ಒಳಬರುವುದು, ಹೊರಹೋಗುವುದು, ಅಲ್ಲಲ್ಲೇ ನಿಂತು ಹರಟೆ ಹೊಡೆಯುವುದು ನಡೆದಿತ್ತು. ಸುಮಧುರವಾದ ಸಂಗೀತ ಕಛೇರಿ ಜಾರಿಯಲ್ಲಿತ್ತು. ಮೇಜಿನಲ್ಲಿ ಆ ಪ್ರದೇಶದ ರುಚಿರುಚಿಯಾದ ತಿಂಡಿತಿನಸುಗಳನ್ನು ತಯಾರಿಸಿಡಲಾಗಿತ್ತು. ಈ ಯುವಕ ತನ್ನ ಸರದಿಗಾಗಿ ಎರಡು ಗಂಟೆ ಕಾಯಬೇಕಾಯಿತು.
ಆ ಜ್ಞಾನಿ ಹುಡುಗನ ಭೇಟಿಯ ಉದ್ದೇಶವೇನು ಎಂಬುದನ್ನು ಅಪಾರವಾದ ತಾಳ್ಮೆಯಿಂದ ಕೇಳಿಸಿಕೊಂಡ. ‘ಸಂತೋಷದ ರಹಸ್ಯ’ವನ್ನು ವಿವರಿಸಲು ಸದ್ಯಕ್ಕೆ ತನಗೆ ಸಮಯವಿಲ್ಲ ಎನ್ನುತ್ತಾ, ಅರಮನೆಯನ್ನು ಎರಡು ಗಂಟೆಯೊಳಗೆ ಸುತ್ತಾಡಿ ಬರಲು ಹೇಳಿದ. ಅಮೇಲೆ ಹೇಳಿದ, ”ನನಗೊಂದು ಸಹಾಯ ಮಾಡಬೇಕು ನೀನು” ಎಂದು. ಒಂದು ಚಮಚವನ್ನು ಕೊಟ್ಟು ಅದಕ್ಕೆ ಎರಡು ಹನಿ ಎಣ್ಣೆ ಹಾಕಿದ. “ ನೀನು ಸುತ್ತಾಡುವಾಗ ಈ ಚಮಚ ತೆಗೆದುಕೊಂಡು ಹೋಗು, ಆದರೆ ಎಣ್ಣೆ ಚೆಲ್ಲಬೇಡ” ಎಂದನು.
ಆ ತರುಣ ಅರಮನೆಯ ಮೆಟ್ಟಿಲು ಹತ್ತಿದ, ಇಳಿದ. ಎಣ್ಣೆ ಚೆಲ್ಲದಂತೆ ಗಮನವಿಡುತ್ತಿದ್ದ. ಎರಡು ಗಂಟೆ ಸುತ್ತಾಡಿ, ನಂತರ ಜ್ಞಾನಿಯ ಎದುರು ಹಾಜರಾದನು. ಆ ಪ್ರಾಜ್ಞ ಕೇಳಿದ, “ನನ್ನ ಭೋಜನಶಾಲೆಯನ್ನು ಅಲಂಕರಿಸಿರುವ ಪರ್ಶಿಯನ್ ಪರದೆಗಳನ್ನು ನೋಡಿದೆಯಾ? ಉದ್ಯಾನವನ ನೋಡಿದೆಯಾ? ಗ್ರಂಥಾಲಯದಲ್ಲಿ ಸುಂದರವಾದ ಚರ್ಮದ ಹಾಳೆಗಳನ್ನು (Parchment) ನೋಡಿದೆಯಾ?
ಯುವಕ ತಬ್ಬಿಬ್ಬಾಗಿ ಮುಜುಗರ ಪಟ್ಟುಕೊಂಡ. “ನಾನೇನೂ ನೋಡಲಿಲ್ಲ, ಎಣ್ಣೆ ಚೆಲ್ಲದಂತೆ ನೋಡಿಕೊಳ್ಳುತ್ತಿದ್ದೆ” ಎಂದನು.
“ ಹಾಗಾದರೆ ಪುನಃ ಸುತ್ತಾಡಿ ಪ್ರಪಂಚದ ಅದ್ಭುತಗಳನ್ನೆಲ್ಲಾ ನೋಡಿಕೊಂಡು ಬಾ. ಮನುಷ್ಯನ ಮನೆಯನ್ನು ನೋಡದ ಹೊರತು ಅವನನ್ನು ನಂಬಲು ಸಾಧ್ಯವಾಗಲಾರದು ನಿನಗೆ” ಎಂದು ಹೇಳಿದ.
ಈ ಸಲ ಯುವಕ ಚಮಚವನ್ನು ಹಿಡಿದುಕೊಂಡು ಆರಾಮವಾಗಿ ಅರಮನೆಯಲ್ಲಿ ಸುತ್ತಾಡಿದ. ಚಾವಣಿಯಿಂದ ಇಳಿಬಿಟ್ಟ ಪರದೆಗಳ ಕಸೂತಿಯ ಅಂದವನ್ನು ಸವಿದ, ಉದ್ಯಾನವನ, ಅರಮನೆಯ ಪಕ್ಕದಲ್ಲಿ ಸುತ್ತಲೂ ಇರುವ ಪರ್ವತಗಳನ್ನು ನೋಡಿದ. ಹೂವಿನ ಸುಗಂಧ ಆಘ್ರಾಣಿಸಿದ, ಕಲೆಯೇ ತುಂಬಿಕೊಂಡಂತಿರುವ ಅಲ್ಲಿರುವ ಎಲ್ಲವನ್ನೂ ನೋಡಿ, ತಿರುಗಿ ಬಂದು ತಾನು ನೋಡಿದ್ದೆಲ್ಲವನ್ನೂ ಆ ಪ್ರಾಜ್ಞನೆದುರು ಬಣ್ಣಿಸಿದ.
“ ಚಮಚದಲ್ಲಿ ಎರಡು ಹನಿ ಎಣ್ಣೆ ಇತ್ತಲ್ಲಾ? ಅದೆಲ್ಲಿ?” ಎಂದು ಕೇಳಿದ, ಆ ಮಹಾಜ್ಞಾನಿ.
ಆ ಯುವಕ ಚಮಚವನ್ನು ನೋಡುತ್ತಾನೆ. ತಾನು ಎಣ್ಣೆ ಚೆಲ್ಲಿಕೊಂಡು ಬಂದಿರುವುದರ ಅರಿವಾಯಿತು ಆತನಿಗೆ.
ಆ ಮಹಾಜ್ಞಾನಿ ಹೇಳ್ತಾನೆ, “ ನಾನು ನಿನಗೆ ಕೊಡೋದು ಒಂದೇ ಸಲಹೆ. ಸಂತೋಷದ ಗುಟ್ಟು ಎಲ್ಲಿದೆಯೆಂದರೆ, ಜಗತ್ತಿನ ಅದ್ಭುತಗಳನ್ನೆಲ್ಲಾ ನೋಡುತ್ತಾ, ಚಮಚದಲ್ಲಿರುವ ಎರಡು ಹನಿ ಎಣ್ಣೆಯನ್ನು ಎಂದೂ ಮರೆಯಬಾರದು.”
ಈ ಕಥೆ ಎಷ್ಟು ಅರ್ಥಗರ್ಭಿತವಾಗಿದೆ! ಬದುಕಿನಲ್ಲಿ ಎಲ್ಲರೂ ಅನುಸರಿಸಬೇಕಾದ ಮಾರ್ಗವನ್ನು ಸೂಚಿಸುತ್ತದೆ. ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತಲೇ ಸಂತೋಷಪಡುವುದನ್ನೂ ಮರೆಯಬಾರದು. ಸಂತೋಷಪಡುವಾಗ ನಮ್ಮ ಕರ್ತವ್ಯವನ್ನೂ ಮರೆಯಬಾರದು. ಜಗತ್ತಿನ ಅದ್ಭುತಗಳನ್ನೆಲ್ಲಾ ನೋಡಿ ಅನುಭವಿಸಿ ಸುಖಪಡಬೇಕು. ನಮ್ಮ ಕರ್ತವ್ಯವನ್ನು ಮರೆತು ನಮಗೆ ಸಂತೋಷಪಡಲೂ ಸಾಧ್ಯವಾಗುವುದಿಲ್ಲ. ಕರ್ತವ್ಯ-ಕೆಲಸ ಮತ್ತು ಸಂತೋಷಪಡುವುದು ಎರಡರ ಸಮತೋಲನ ಮಾಡುವುದನ್ನು ಅಭ್ಯಾಸ ಮಾಡಬೇಕು. ಈ ಸಣ್ಣ ಕಥೆಯಲ್ಲಿ ಏನೆಲ್ಲಾ ಅಡಗಿದೆ!
ಯಾವಾಗಲೂ ಕೆಲಸ–ಕೆಲಸ ಎನ್ನುತ್ತಲೇ, ಗೊಣಗುತ್ತಲೇ ಜೀವನ ಕಳೆಯುವುದು, ಹಾಗೆಯೇ ಮೋಜು ಮಾಡಿಕೊಂಡು ಹಣ ಪೋಲು ಮಾಡಿಕೊಂಡು ಕೊನೆಯಲ್ಲಿ ಕಷ್ಟಕ್ಕೊಳಗಾಗುವುದು ಎಲ್ಲಾ ಬದುಕಿನಲ್ಲಿ ನಡೆಯುವಂತಹದೇ… ಸಂತೋಷವಾಗಿರಬೇಕೆಂದರೆ ಎರಡರಲ್ಲೂ ಸಮತೋಲನ ಸಾಧಿಸಬೇಕಾಗುತ್ತದೆ..
ಪಾವ್ಲೋ ಕೊಯೆಲ್ಲೋನ ಪೋರ್ಚುಗೀಸ್ ಭಾಷೆಯ ಈ ಕಾದಂಬರಿ ಬ್ರೆಜಿಲ್ ದೇಶದಲ್ಲಿ ಮಾತ್ರವಲ್ಲದೇ ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯವಾಗಿದೆ. ಕನಸನ್ನು ಸಾಕಾರಗೊಳಿಸಕೊಳ್ಳಲು ಸಾಹಸಕ್ಕಿಳಿಯುವ ಹಲವಾರು ಪ್ರಸಂಗಗಳು ಆ ಕಾದಂಬರಿಯಲ್ಲಿ ಬರುತ್ತವೆ. ಅದೃಷ್ಟವನ್ನು ಅರಸುತ್ತಾ ಸಾಗುವ ಪ್ರಯಾಣದಲ್ಲಿ ಕಥಾನಾಯಕ ಎದುರಾಗುವ ಜನರು, ಸನ್ನಿವೇಶಗಳು, ಅವನ ಅನುಭವ ಬಹಳ ಕುತೂಹಲ ಹುಟ್ಟಿಸುತ್ತದೆ.
ಈ ಕಥೆಯ ಅರ್ಥವ್ಯಾಪ್ತಿ ಬಹಳ ವಿಸ್ತಾರವಾದುದು. ಈ ಕಥೆ ಜೀವನದ ದರ್ಶನವನ್ನು ಸರಳವಾಗಿ ಹೇಳಿದೆ. ಆಂಗ್ಲ ಕವಿ ವಿಲಿಯಂ ಬ್ಲೇಕ್ನ ಕವನದ ಸಾಲುಗಳಲ್ಲಿ ಇಂತಹದೇ ದರ್ಶನವಿದೆ, ಮುಂದೆ ಅದಕ್ಕೆ ದೃಷ್ಟಾಂತಗಳನ್ನು ಕೊಡುತ್ತಾ ಕವನ ಸಾಗುತ್ತದೆ.
To see a World in a Grain of Sand
And a Heaven in a Wild flower
Hold Infinity in the palm of your hand
And Eternity in an hour
ಕೆ.ಪದ್ಮಾಕ್ಷಿ