ಮೈಸೂರು,ಫೆಬ್ರವರಿ,18,2021(www.justkannada.in) : “ಎಂದರೋ ಮಹಾನುಭಾವುಲು ಅಂದರಿಕಿ ವಂದನಮು’ ಎಂದು ಎಲ್ಲಾ ಮಹಾನುಭಾವರನ್ನು ಸ್ತುತಿಸುವ ಮಹತ್ತಾದ ಕೃತಿಯ ರಚನಾಕಾರರಾದ ತ್ಯಾಗರಾಜರೆಂದರೆ ಯಾರಿಗೆ ಗೊತ್ತಿಲ್ಲ? ಪರಮಾತ್ಮನನ್ನು ಭಕ್ತಿಯಿಂದ ಸ್ತುತಿಸಿ ಅವನ ಕೃಪೆಗೆ ಪಾತ್ರರಾದ ಭಕ್ತರನ್ನು, ಜ್ಞಾನಿಗಳನ್ನು, ಸಾಧಕರನ್ನು ಈ ಕೃತಿಯಲ್ಲಿ ಕೊಂಡಾಡಿದ್ದಾರೆ. ತ್ಯಾಗರಾಜರು ಈ ಕೃತಿಯನ್ನು ರಚನೆ ಮಾಡಿದ ಸಂದರ್ಭದ ಬಗ್ಗೆ ಸ್ವಾರಸ್ಯಕರವಾದ ಸಂಗತಿಯೊಂದನ್ನು ಇಲ್ಲಿ ಹೇಳಲೇಬೇಕು. ಪಲ್ಲವಿಯನ್ನು ಆರು ಕಾಲಗಳಲ್ಲೂ ಹಾಡಬಲ್ಲ ಗೋವಿಂದ ಮಾರಾರರು ‘ಷಟ್ಕಾಲ ಗೋವಿಂದ ಮಾರಾರ’ರೆಂದೇ ಪ್ರಖ್ಯಾತರಾಗಿದ್ದರು. ತ್ಯಾಗರಾಜರ ಖ್ಯಾತಿ ಎಲ್ಲೆಡೆ ಹಬ್ಬಿದ್ದರಿಂದ ಅವರನ್ನು ಕಾಣಲು ಉತ್ಸುಕರಾದ ಗೋವಿಂದ ಮಾರಾರರು ಕೇರಳದ ತಿರುವಾಂಕೂರಿನಿಂದ ತಮಿಳುನಾಡಿನ ತಿರುವಯ್ಯಾರಿಗೆ ತಮ್ಮ ಶಿಷ್ಯರಾದ ವಡಿವೇಲು ಮತ್ತು ನಲ್ಲತಂಬಿ ಮೊದಲಿಯಾರರೊಂದಿಗೆ ಬರುತ್ತಾರೆ. ತ್ಯಾಗರಾಜರ ಮನೆಗೆ ಬಂದು ಅವರಿಗೆ ಶಿರಬಾಗಿ, “ನಿಮ್ಮ ದೈವಿಕ ಸಂಗೀತವನ್ನು ಕೇಳುವ ಸೌಭಾಗ್ಯಕ್ಕಾಗಿ ಬಂದಿದ್ದೇನೆ, ನನಗೆ ಅಂತಹ ಒಂದು ಸದವಕಾಶವನ್ನು ಒದಗಿಸಬೇಕು” ಎಂದು ಕೇಳುತ್ತಾರೆ. ಆದರೆ ತ್ಯಾಗರಾಜರು ಎಂದೂ ನರಮಾನವರನ್ನು ಸಂತೋಷಗೊಳಿಸಲು ಹಾಡುವವರಲ್ಲ, ದೇವರಿಗೋಸ್ಕರವೇ ಹಾಡುವವರು, ಶ್ರೀರಾಮನ ಪರಮಭಕ್ತರು. ಹಾಗಾಗಿ ಅವರು ಏನೂ ಮಾತಾಡದೇ ಸುಮ್ಮನಿದ್ದರು. ಈ ಸಂದರ್ಭದಲ್ಲಿ ತ್ಯಾಗರಾಜರ ಮನಸ್ಸನ್ನು ಅರಿತುಕೊಂಡ ವಡಿವೇಲು ತಮ್ಮ ಗುರು ಗೋವಿಂದ ಮಾರಾರರು ಹಾಡುವುದನ್ನಾದರೂ ಕೇಳಬೇಕೆಂದು ತ್ಯಾಗರಾಜರನ್ನು ಕೇಳಿಕೊಂಡರು. ಈ ಮನುಷ್ಯ ಏನು ಹಾಡಿಯಾರು ಎಂಬುದನ್ನು ನೋಡೋಣವೆಂಬಂತೆ ಹಾಡಲು ಸೂಚಿಸಿದರು. ಗೋವಿಂದ ಮಾರಾರರು ತಮ್ಮ ಹೃದಯ ಮತ್ತು ಆತ್ಮವನ್ನೇ ಸಮರ್ಪಿಸಿಕೊಂಡಂತೆ ರಾಗದಿಂದ ರಾಗಕ್ಕೆ ಜಿಗಿಯುತ್ತಾ ಅಲ್ಲಿದ್ದ ಕೇಳುಗರನ್ನು ತಮ್ಮ ಗಾಯನದಿಂದ ಭಾವಪರವಶರನ್ನಾಗಿ ಮಾಡಿದರು. ಈ ಹಾಡುಗಾರಿಕೆಯನ್ನು ಕೇಳಿದ ತ್ಯಾಗರಾಜರಿಗೆ, ಸಂಗೀತದ ದಿಗ್ಗಜರೆಲ್ಲಾ ತಮ್ಮ ಕಣ್ಣೆದುರು ಪ್ರತ್ಯಕ್ಷರಾದಂತೆ ಅನಿಸಿ, ಅವರು ಭಾವುಕರಾಗಿ ‘ಎಂದರೋ ಮಹಾನುಭಾವುಲು’ ಎಂದು ಹಾಡಲಾರಂಭಿಸಿದರು. ಪರಮಾತ್ಮನ ಕೃಪೆಗೆ ಪಾತ್ರರಾದ ಹಲವಾರು ಸಾಧಕರನ್ನು ಹಾಡಿ ಹೊಗಳುವ ಈ ಮಹಾನ್ ಕೃತಿ ಸಂಗೀತಾಸಕ್ತರ ಮನಸ್ಸಿನಲ್ಲಿ ಇಂದಿಗೂ ಉಳಿದುಕೊಂಡಿದೆ, ಮುಂದೆಯೂ ಉಳಿಯುತ್ತದೆ.
ಇಂತಹ ಮಹಾನ್ ವಾಗ್ಗೇಯಕಾರ ತ್ಯಾಗರಾಜರ ರಚನೆಗಳನ್ನು ಹಾಡುವುದರ ಮೂಲಕ ಅವರ ಗಾಯನಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ತ್ಯಾಗರಾಜರು ಅಮರರಾಗಿದ್ದಾರೆ. ಪ್ರತಿ ವರ್ಷವೂ ಪುಷ್ಯ ಬಹುಳ ಪಂಚಮಿಯಂದು ತ್ಯಾಗರಾಜರ ಆರಾಧನಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಸಾಧಾರಣವಾಗಿ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಆರಾಧನಾ ದಿನ ಬರುತ್ತದೆ. ಈ ಸಲ ಫೆಬ್ರವರಿ 2 ರಂದು ತ್ಯಾಗರಾಜರ ಆರಾಧನಾ ದಿನವಾಗಿ ಬಂದಿದೆ. ದಕ್ಕಿಣ ಭಾರತದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಆರಾಧನೆಯ ದಿವಸವಲ್ಲದೆ ನಂತರದ ದಿನಗಳಲ್ಲಿಯೂ ತ್ಯಾಗರಾಜರ ಆರಾಧನಾ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ. ತ್ತ್ಯಾಗರಾಜರ ಸಮಾಧಿಸ್ಥಳವಾದ ತಿರುವಯ್ಯಾರಿನಲ್ಲಿ ತ್ಯಾಗರಾಜರ ಅಮೂಲ್ಯ ಕೃತಿಗಳಾದ ಪಂಚರತ್ನ ಕೃತಿಗಳ ಗೋಷ್ಠಿಗಾಯನವನ್ನು ನಡೆಸುವ ಮೂಲಕ ಅವರ ಆರಾಧನೆಯನ್ನು ಸಂಭ್ರಮದಿಂದ ಆಚರಿಸುವುದನ್ನು ಪ್ರತಿವರ್ಷವೂ ನಾವು ನೋಡುತ್ತಿದ್ದೇವೆ. ಕರ್ನಾಟಕ ಸಂಗೀತದ ಹೆಸರಾಂತ ಕಲಾವಿದರೆಲ್ಲಾ ಅಲ್ಲಿ ಸೇರುತ್ತಾರೆ. ಜಗತ್ತಿನಾದ್ಯಂತ ಕರ್ನಾಟಕ ಸಂಗೀತ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ತ್ಯಾಗರಾಜರ ಕೃತಿಗಳನ್ನು ಹಾಡುವ ಮೂಲಕ ಆರಾಧನೆಯನ್ನು ನಡೆಸಿ ಆ ಮಹಾನ್ ವಾಗ್ಗೇಯಕಾರರನ್ನು ಸ್ಮರಿಸುತ್ತಾರೆ. ಈ ವರ್ಷದ ತ್ಯಾಗರಾಜರ ಆರಾಧನೆ 174ನೆಯದು. ಘನ ರಾಗಗಳಾದ ನಾಟ (ಜಗದಾನಂದಕಾರಕ), ಗೌಳ(ದುಡುಕುಗಲ), ಆರಭಿ(ಸಾಧಿಂಚನೇ), ವರಾಳಿ(ಕನಕನರುಚಿರ) ಮತ್ತು ಶ್ರೀರಾಗ (ಎಂದರೋಮಹಾನುಭಾವುಲು) ಗಳಲ್ಲಿ ರಚಿಸಲ್ಪಟ್ಟ ಕೃತಿಗಳೇ ಪಂಚರತ್ನ ಕೃತಿಗಳು. ಈ ಪಂಚರತ್ನ ಕೃತಿಗಳಲ್ಲದೇ ತಿರುವೊಟ್ಟಿಯಾರ್ ಪಂಚರತ್ನ, ಕೋವೂರು ಪಂಚರತ್ನ ಮತ್ತು ಶ್ರೀರಂಗಂ ಪಂಚರತ್ನವೆಂಬ ಕೃತಿಗುಚ್ಛಗಳನ್ನು ರಚಿಸಿದ್ದಾರೆ.
ಕರ್ನಾಟಕ ಸಂಗೀತದಲ್ಲಿ ಅತ್ಯುತ್ತಮ ರಚನೆಗಳನ್ನು ರಚಿಸಿ ಕರ್ನಾಟಕ ಸಂಗೀತದ ಚರಿತ್ರೆಯಲ್ಲಿ ಒಂದು ಹೊಸ ಯುಗದ ಪ್ರಾರಂಭಕ್ಕೆ ಭದ್ರವಾದ ಅಡಿಪಾಯ ಹಾಕಿದವರು ಕರ್ನಾಟಕ ಸಂಗೀತದ ತ್ರಿಮೂರ್ತಿಗಳಾದ ಶ್ಯಾಮಾಶಾಸ್ತ್ರಿಗಳು(1762-1827) ತ್ಯಾಗರಾಜರು(1767-1847) ಮತ್ತು ಮುತ್ತುಸ್ವಾಮಿ ದೀಕ್ಷಿತರು (1775-1835). ಇವರೆಲ್ಲ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ಜನಿಸಿದವರು. ಆಮೇಲೆ ಬಂದ ಹಲವಾರು ವಾಗ್ಗೇಯಕಾರರೂ ಸಹ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಬಂದು ಅತ್ಯಂತ ಘನವಾದ ಕೃತಿಗಳನ್ನು ರಚಿಸಿದ್ದಾರೆ. ಇನ್ನೊಂದು ಕುತೂಹಲಕರವಾದ ಸಂಗತಿಯೆಂದರೆ ಪಾಶ್ಚಿಮಾತ್ಯ ಅಭಿಜಾತ ಸಂಗೀತದ ದಿಗ್ಗಜರಲ್ಲಿ ಹೆಸರಿಸಬಹುದಾದ ಬೀತೋವೆನ್(1770-1827), ಮೊಜಾರ್ಟ್(1756-1791), ಬಾಕ್ (1685-1750) ಮುಂತಾದವರೂ ಸಹ ಹೆಚ್ಚುಕಮ್ಮಿ ಇದೇ ಕಾಲದಲ್ಲಿ ಪ್ರಖ್ಯಾತಿಗೆ ಬಂದು ಸದಾಕಾಲ ಉಳಿಯುವಂತಹ ರಚನೆಗಳನ್ನು ಮಾಡಿರುವಂತಹದು.
ತ್ಯಾಗರಾಜರ ಸಮಾಧಿ ಇರುವ ಸ್ಥಳದಲ್ಲಿ ದೇವಸ್ಥಾನವನ್ನು ಕಟ್ಟಿಸಿ, ಪ್ರತಿ ವರ್ಷ ಅಲ್ಲಿ ಆರಾಧನೆ ನಡೆಸುವಂತೆ ವ್ಯವಸ್ಥೆ ಮಾಡಿದವರು ಕರ್ನಾಟಕ ಸಂಗೀತ ವಿದುಷಿ ಬೆಂಗಳೂರು ನಾಗರತ್ನಮ್ಮ. ಪುರುಷಪ್ರಾಧಾನ್ಯವಿದ್ದ ಈ ಸಂಗೀತ ಉತ್ಸವಗಳಲ್ಲಿ ಮಹಿಳಾ ಸಂಗೀತಗಾರರು ಹಾಡುವಂತೆ ಅವಕಾಶ ಕಲ್ಪಿಸಿದವರು ಈಕೆಯೇ. ಪ್ರತಿವರ್ಷ ತಿರುವಯ್ಯಾರಿನಲ್ಲಿ ನಡೆಯುವ ಆರಾಧನಾ ಉತ್ಸವದಲ್ಲಿ ಮಹಿಳೆಯರೂ, ಪುರುಷರೂ ಒಟ್ಟಾಗಿ ಗೋಷ್ಠಿ ಗಾಯನವನ್ನು ನಡೆಸುವುದನ್ನು ನೋಡಬಹುದು. ತ್ಯಾಗರಾಜರ ಸಮಾಧಿಯ ಹತ್ತಿರವೇ ಬೆಂಗಳೂರು ನಾಗರತ್ನಮ್ಮನವರ ಸಮಾಧಿಯೂ ಇದೆ. ತಮ್ಮೆಲ್ಲಾ ಗಳಿಕೆ, ಆಸ್ತಿಯನ್ನು ತಮ್ಮ ಮಾನಸಗುರು ತ್ಯಾಗರಾಜರ ಸಮಾಧಿಸ್ಥಳದ ಜೀರ್ಣೋದ್ಧಾರ ಮತ್ತು ಇಲ್ಲಿ ನಡೆಯುವ ಸಂಗೀತದ ಸೇವೆಗೆ ಅರ್ಪಿಸಿಕೊಂಡವರು ಈಕೆ.
ತ್ಯಾಗರಾಜರ ಕೃತಿಗಳ ವೈಶಿಷ್ಟ್ಯವೆಂದರೆ ಭಾವಪೂರ್ಣವಾದ ಸಾಹಿತ್ಯಕ್ಕೆ ರಾಗದ ಸಂಪೂರ್ಣ ಅಭಿವ್ಯಕ್ತಿಯ ಸಾಧ್ಯತೆಗಳಿರುವಂತೆ ಹಲವಾರು ಸಂಗತಿಗಳನ್ನು ಸಂಯೋಜಿಸಿ ಸಾಧಕರು ಉತ್ತುಂಗವನ್ನು ತಲುಪುವಂತೆ ಮಾಡುವಂತಹದು. ರಾಗದ ಅಭಿವ್ಯಕ್ತಿಯಲ್ಲಿ ಪೂರ್ಣತೆಯನ್ನು ಸಾದಿಸಲು ಉತ್ಸುಕರಾದ ಸಾಧಕರಿಗೆ ಇವರ ಕೃತಿಗಳು ಒಂದು ಸವಾಲಿನಂತಿವೆ. ಅವರ ಕೆಲವು ಕೃತಿಗಳನ್ನು ಉಲ್ಲೇಖಿಸುವುದಾದರೆ, ತ್ಯಾಗರಾಜರು ನಾದವು ಶರೀರದ ಆರು ಮುಖ್ಯಸ್ಥಾನಗಳಾದ ನಾಭಿ, ಹೃದಯ.ಕಂಠ, ನಾಲಗೆ, ಮೂಗು ಮತ್ತು ಶಿರಸ್ಸಿನಿಂದ ಹೊರಹೊಮ್ಮುವುದೆಂಬುದನ್ನು ತಮ್ಮ ಜಗನ್ಮೋಹಿನಿ ರಾಗದ ‘ಶೋಬಿಲ್ಲು ಸಪ್ತಸ್ವರ’ ಕೃತಿಯಲ್ಲಿ ‘ನಾಭೀ ಹೃತ್ಕಂಠ ರಸನಾ’ ಎಂದು ವರ್ಣಿಸಿರುವುದನ್ನು ನೋಡಬಹುದು. ನಾದವು ಪ್ರಣಾಗ್ನಿ ಸಂಯೋಗದಿಂದ ಉಂಟಾಗುತ್ತದೆ ಎಂಬುದನ್ನು ಸಾರಮತಿ ರಾಗದ ‘ಮೋಕ್ಷಮುಗಲದಾ’ ಕೃತಿಯಲ್ಲಿ ‘ಪ್ರಾಣಾನಲ ಸಂಯೋಗಮು ವಲ್ಲ ಪ್ರಣವ ನಾದಮು ಸಪ್ತಸ್ವರಮುಲು ಬರಗ’ ಎಂದು ವಿಶದಪಡಿಸಿದ್ದಾರೆ. ಸಂತ ತ್ಯಾಗರಾಜರ ರಚನೆಗಳೆಲ್ಲವೂ ಅನನ್ಯ. ಇಂತಹ ಮಹಾನ್ ವಾಗ್ಗೇಯಕಾರರ ಬಗ್ಗೆ ಎಷ್ಟು ಹೇಳಿದರೂ ಸಾಲದು, ಪ್ರತಿಯೊಂದು ಕೃತಿರಚನೆಯ ಹಿಂದೆ ಒಂದು ವಿಶೇಷ ಸಂದರ್ಭವಿದೆ, ಸಂಗತಿಯಿದೆ. ದಕ್ಷಿಣಭಾರತದಲ್ಲಿ ಅವರು ದರ್ಶಿಸಿದ ದೇವಸ್ಥಾನಗಳ ಕುರಿತ ಕ್ಷೇತ್ರ ಕೃತಿ ರಚನೆಗಳಿವೆ. ಇಂತಹಾ ಮಹಾನುಭಾವನಿಗೆ ಪ್ರಣಾಮಗಳು.
(ವಿವಿಧ ಮೂಲಗಳಿಂದ ಸಂಗ್ರಹ) ಕೆ.ಪದ್ಮಾಕ್ಷಿ