ಮೈಸೂರು, ಮಾರ್ಚ್,22,2021(www.justkannada.in): ಒಂದು ಕುಟುಂಬದಲ್ಲಿ ಎರಡು ತಲೆಮಾರುಗಳಿಂದ ನಾಲ್ಕು ತಲೆಮಾರಿನ ವರೆಗೂ ವಿವಿಧ ವಯೋಮಾನದವರೊಂದಿಗೆ ಒಟ್ಟಾಗಿ ಬದುಕುವುದನ್ನು ನೋಡುತ್ತಿದ್ದೇವೆ. ಕೆಲಸ ಮಾಡುವ ಸ್ಥಳದಲ್ಲೂ ವಿವಿಧ ವಯೋಮಾನದವರು ಒಟ್ಟಾಗಿ ಕೆಲಸ ಮಾಡುತ್ತಾರೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿನ ವ್ಯಕ್ತಿಗಳು ಯೋಚಿಸುವ ರೀತಿ, ಮಾತಾಡುವ ರೀತಿ, ಅವರು ಇಷ್ಟಪಡುವ ಸಂಗತಿಗಳೆಲ್ಲಾ ಸ್ವಲ್ಪ ಭಿನ್ನವಾಗಿರುತ್ತವೆ. ಚಿಕ್ಕ ಮಕ್ಕಳು ದೊಡ್ಡವರಿಗಿಂತ ತಮ್ಮ ವಯೋಮಾನದ ಮಕ್ಕಳೊಂದಿಗೆ ಬೆರೆಯಲು ಇಷ್ಟಪಡುತ್ತಾರೆ. ಒಂದೇ ವಯೋಮಾನದವರು ಒಟ್ಟಾಗಿರಲು ಇಷ್ಟಪಡುತ್ತಾರೆ.
ಯುವಪೀಳಿಗೆಯವರು ತಾವು ಹಿಂದಿನ ಪೀಳಿಗೆಯವರಿಗಿಂತ ಭಿನ್ನ, ತಮ್ಮ ಆಸಕ್ತಿಗಳೇ ಬೇರೆ ಎಂದು ತಾವು ಮಾತಾಡುವ ಭಾಷೆಯನ್ನೇ ವಿಶಿಷ್ಟವಾಗಿ ಆಡುವುದು ಬರೆಯುವುದು ಮಾಡುತ್ತಿರುತ್ತಾರೆ, ಈಗಂತೂ ಮೊಬೈಲಿನಲ್ಲಿ ಸಂದೇಶವನ್ನು ಸಂಕ್ಷಿಪ್ತವಾಗಿ ಕಳುಹಿಸುವುದನ್ನು ರೂಢಿಮಾಡಿಕೊಂಡು ತಮ್ಮದೇ ಛಾಪು ಮೂಡಿಸಲು ಪ್ರಯತ್ನಿಸುತ್ತಿರುತ್ತಾರೆ. ಅದು ತಮ್ಮ ತಂದೆ-ತಾಯಿಗೆ ಅಥವಾ ತಮಗಿಂತ ಹಿರಿಯರಿಗೆ ಅರ್ಥವಾಗದಿದ್ದರೆ ಅದಕ್ಕೆ ಜನರೇಶನ್ ಗ್ಯಾಪ್ ಕಾರಣ ಎನ್ನುತ್ತಾರೆ. ಅರ್ಥವಾಗದಿರಲಿ ಎಂಬ ಗುಟ್ಟಾದ ಉದ್ದೇಶವೂ ಇರಬಹುದು. ಕನ್ನಡದಲ್ಲಿ ತಲೆಮಾರುಗಳ ಅಂತರ ಅನ್ನುವುದಕ್ಕಿಂತ ಜನರೇಶನ್ ಗ್ಯಾಪ್ ಅಂದರೆ ನಮಗೆ ಬೇಗ ಅರ್ಥವಾಗತ್ತದೆ. ಆ ಪದವನ್ನು ಬಹಳ ಉಪಯೋಗಿಸಿ ಅದು ಸವಕಲು ಪದವಾಗಿಬಿಟ್ಟಿದೆ. ಅಲ್ಲದೇ ನಾವು ಇಂಗ್ಲಿಷ್ ಭಾಷೆಯ ಪದಗಳನ್ನು, ನುಡಿಕಟ್ಟುಗಳನ್ನು ನಮ್ಮ ಮಾತೃಬಾಷೆಯೊಂದಿಗೆ ಸರಾಗವಾಗಿ ಉಪಯೋಗಿಸುವುದರಿಂದ ದ್ವಿಭಾಷಿಕರಾಗಿದ್ದೇವೆ. ಯುವಜನಾಂಗದವರು ಮೊಬೈಲಿನಲ್ಲಿ ಸಂದೇಶಗಳನ್ನು ಕಳುಹಿಸುವಾಗ you ಗೆ u, are ಗೆ r, ok ಗೆ k ಇನ್ನೂ ಹೀಗೇ ಹಲವಾರು ಪದಗಳನ್ನು ಸಂಕ್ಷಿಪ್ತವಾಗಿ ಬರೆಯವುದನ್ನು ನೋಡುತ್ತಿದ್ದೇವೆ. ಇದು ಅವರಿಗೆ ಎಷ್ಟು ಅಭ್ಯಾಸವಾಗಿಬಿಟ್ಟಿದೆಯೆಂದರೆ ಕೆಲವೊಮ್ಮೆ ಪರೀಕ್ಷೆಯಲ್ಲಿ ಉತ್ತರ ಬರೆಯುವಾಗಲೂ ಹೀಗೆ ಬರೆಯುತ್ತಾರೆಂಬುದನ್ನು ಶಿಕ್ಷಕರು ಹೇಳುತ್ತಾರೆ. ಹೀಗೆ ಜನರೇಶನ್ ಗ್ಯಾಪ್ ಅನ್ನುವುದು ಉಡುಗೆ-ತೊಡುಗೆ, ಕಲೆ-ಸಾಹಿತ್ಯ, ಸಂಗೀತ ಎಲ್ಲದರಲ್ಲೂ ಕಂಡುಬರುವಂತೆ ತಮ್ಮ ಅನನ್ಯತೆ, ಅಸ್ಮಿತೆ ಪ್ರದರ್ಶಿಸುವುದರಲ್ಲಿ ಹೊಸಪೀಳಿಗೆಯವರಿಗೆ ಆಸಕ್ತಿ. ಆದರೆ ಅವರೂ ಮುಂದೆ ತಮ್ಮ ಮುಂದಿನ ತಲೆಮಾರಿನವರನ್ನು ನೋಡುತ್ತಾರಷ್ಟೇ! ಹೊಸತಲೆಮಾರಿನವರು ಎಷ್ಟೇ ವಿಶಿಷ್ಟವಾಗಿರಲು ಪ್ರಯತ್ನಿಸಿದರೂ ಅವರನ್ನು ಪೋಷಿಸಿ-ಪಾಲಿಸಿದ ತಂದೆ ತಾಯಿಯವರ ಸ್ವಭಾವ ಆಸಕ್ತಿಗಳೆಲ್ಲಾ ಅವರ ಮೇಲೆ ಪ್ರಭಾವ ಬೀರಿರುತ್ತವೆ. ಅವರು ಆ ರೀತಿಯಲ್ಲಿ ತಮ್ಮ ಹಿಂದಿನ ತಲೆಮಾರಿನವರ ಮುಂದುವರಿದ, ಸ್ವಲ್ಪ ಬದಲಾವಣೆ ಹೊಂದಿದ ವ್ಯಕ್ತಿಗಳಾಗುತ್ತಾರೆ. ಆಧುನಿಕ ಗ್ಯಾಜೆಟ್ ಗಳನ್ನು ಉಪಯೋಗಿಸಲು ಹಿಂದಿನ ತಲೆಮಾರಿನವರಿಗೆ ಸ್ವಲ್ಪ ಹಿಂಜರಿಕೆ, ಸ್ವಲ್ಪ ಬಿಗುವೂ ಇರುತ್ತದೆ. ಯುವಜನರು ಇದಕ್ಕೆ ಬೇಗ ಹೊಂದಿಕೊಂಡುಬಿಡುತ್ತಾರೆ. ಆದರೆ ಇಂದಿನ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಯುಗದಲ್ಲಿ, ಸಾಮಾಜಿಕ ಜಾಲತಾಣಗಳನ್ನು ಎಲ್ಲಾ ವಯೋಮಾನದವರು ಉಪಯೋಗಿಸುತ್ತಿರುವುದರಿಂದ ಜನರೇಶನ್ ಗ್ಯಾಪ್ ಅನ್ನುವುದಕ್ಕೆ ಅಂತಹ ವಿಶೇಷ ಮಹತ್ವ ಕಂಡುಬರುವುದಿಲ್ಲ, ಅದು ತುಂಬಾ ಮೇಲುಮೇಲಿನದು (Superficial) ಎನಿಸುತ್ತದೆ. ಹಿರಿಯರಲ್ಲಿ ಕೆಲವರು ಒಂದು ರೀತಿಯ ಹಟದ ಸ್ವಭಾವದಿಂದ ಹೊಸ ಗ್ಯಾಜೆಟ್ ಗಳನ್ನು ಉಪಯೋಗಿಸುತ್ತಿಲ್ಲ. ನನ್ನ ಸ್ನೇಹಿತೆಯೊಬ್ಬರಿಗೆ ಅವರ ಮಗಳು ಸ್ಮಾರ್ಟ್ ಫೋನ್ ಕೊಡಿಸಿದ್ದರೂ ಅದರ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಲು ಅವರು ಮನಸ್ಸು ಮಾಡುತ್ತಿಲ್ಲ. ತುಂಬಾ ಸುಲಭ ಇದೆ, ಪ್ರಯತ್ನಿಸಿ, ಎಂದು ಹೇಳಿದರೆ ನನಗೆ ಈ ಆಧುನಿಕ ತಂತ್ರಜ್ಞಾನ ಬೇಡ, ಸ್ನೇಹಿತರು, ಕುಟುಂಬದವರೊಂದಿಗೆ ಮಾತಾಡಲಷ್ಟೇ ಸಾಕು ಫೋನ್ ಎನ್ನುತ್ತಾರೆ.
ಸಮಾಜಶಾಸ್ರಜ್ಞರು 1960ರ ಹೊತ್ತಿಗೆ ಜನರೇಶನ್ ಗ್ಯಾಪ್ ಎಂಬ ಪರಿಕಲ್ಪನೆಗೆ ಸಂಬಂಧಿಸಿದ ಸಿದ್ಧಾಂತಗಳನ್ನು ರೂಪಿಸಿದ್ದರು. ಹಿರಿಯರು ಮತ್ತು ಕಿರಿಯರ ನಡುವೆ ಸಂಘರ್ಷಗಳಾಗಲು ಇದೇ ಕಾರಣವಾಗುತ್ತದೆ ಎಂಬುದನ್ನು ನಾವು ನೋಡಿರುತ್ತೇವೆ. ಆದರೆ ಇದು ಎಲ್ಲರೂ ತಮ್ಮ ಬದುಕಿನಲ್ಲಿ ಬಾಲ್ಯ,ಯೌವನ ಮುಂತಾದ ಹಂತಗಳನ್ನು ದಾಟಿ ಬರುವಾಗ ಅನುಭವಿಸುವ ಒಂದು ಮನಃಸ್ಥಿತಿ. ಸಮಗ್ರ ದೃಷ್ಟಿಯಿಂದ ನಾವು ನೋಡಿದಾಗ ಈ ಎಲ್ಲಾ ಹಂತಗಳಲ್ಲಿ ನಾವು ಕಲಿತಿದ್ದು, ಅನುಭವಿಸಿದ್ದು ಎಲ್ಲಾ ಸೇರಿಕೊಂಡು ನಮ್ಮ ವ್ಯಕ್ತಿತ್ವ ರೂಪುಗೊಂಡಿರುತ್ತದೆ. ಮನುಷ್ಯನ ಮೂಲಪ್ರವೃತ್ತಿಗಳಲ್ಲಿ ಏನೂ ಬದಲಾವಣೆಯಾಗಿಲ್ಲ. ನಮ್ಮ ಮಹಾನ್ ಸಾಹಿತ್ಯ ಕೃತಿಗಳಾದ ರಾಮಾಯಣ, ಮಹಾಭಾರತ ಮುಂತಾದವೆಲ್ಲ ಎಲ್ಲಾ ಕಾಲಕ್ಕೂ ಪ್ರಸ್ತುತವೆನಿಸುತ್ತದೆ. ಅದನ್ನು ನಮ್ಮ ಕಾಲದ ಸಂಧರ್ಭಗಳಿಗೆ ಸರಿಯಾಗಿ ಹೊಂದಿಸಿಕೊಂಡು ಅರ್ಥೈಸಿಕೊಳ್ಳುತ್ತೇವೆ. ನಮ್ಮ ಅಭಿಜಾತ ಕಲೆಗಳಾದ ಸಂಗೀತ, ನೃತ್ಯ ಮುಂತಾದವೆಲ್ಲ ಇಂದಿಗೂ ಪ್ರಸ್ತುತ ಮತ್ತು ಆ ಕಲೆಗಳ ಭದ್ರಬುನಾದಿಯ ಆಧಾರದ ಮೇಲೆಯೇ ಹೊಸ ಕಲಾಪ್ರಕಾರಗಳು ಹುಟ್ಟಿಕೊಳ್ಳುತ್ತಿವೆ.
ನಮ್ಮ ಗತ, ವರ್ತಮಾನವೆಲ್ಲಾ ನಮ್ಮ ಭವಿಷ್ಯವನ್ನು ರೂಪಿಸುತ್ತಿರುತ್ತದೆ. ನಮ್ಮ ಗತ ಆ ಕಾಲಕ್ಕೆ ನಮ್ಮ ವರ್ತಮಾನವಾಗಿತ್ತು. ವರ್ತಮಾನ ನಮ್ಮ ಗತದ ಭವಿಷ್ಯವಾಗಿರುತ್ತದೆ. ನಮ್ಮ ವರ್ತಮಾನದಲ್ಲಿ ನಮ್ಮ ಭವಿಷ್ಯದ ಕನಸುಗಳಿರುತ್ತವೆ. ಹಾಗಾಗಿ ಎಲ್ಲಾ ಕಾಲ ನಮಗೆ ಪ್ರಸ್ತುತವೇ ಆಗುತ್ತದೆ. ಹಾಗಾಗಿ ತಲೆಮಾರಿನ ಅಂತರವೆಂಬುದು ತಾತ್ಕಾಲಿಕವಾಗಿ ನಾವು ಪರಿಭಾವಿಸುವಂತಹದು. ಹೀಗೆಲ್ಲಾ ಯೋಚಿಸುವಾಗ ನೆನಪಾಗುವುದೇ ಆಂಗ್ಲ ಕವಿ ಟಿ.ಎಸ್. ಎಲಿಯೆಟ್ ಬರೆದ ಈ ಸಾಲುಗಳು
………
Time present time past
Are both perhaps in time future,
And time future contained in time past.
If all time is eternally present
All time is unredeemable.
ಕೆ.ಪದ್ಮಾಕ್ಷಿ