ರಂಜ-ಸುರಗಿ ಅಂಕಣ-12: ಮಕ್ಕಳ ಶಿಕ್ಷಣದಲ್ಲಿ ನಿರ್ಣಾಯಕ ಘಟ್ಟ

ಮಕ್ಕಳ ಶಿಕ್ಷಣದಲ್ಲಿ ನಿರ್ಣಾಯಕ ಘಟ್ಟ

ಇನ್ನೊಂದು ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದೆ. ಶಾಲೆ-ಕಾಲೇಜುಗಳು ಪ್ರಾರಂಭವಾಗುವುದು ಕರೋನಾ ಮಹಾಮಾರಿಯಿಂದಾಗಿ ತಡವಾಗುತ್ತಿದೆ.  ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದಿದ ಮಕ್ಕಳು ಮುಂದಿನ ತಮ್ಮ ವಿದ್ಯಾಭ್ಯಾಸ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ನಿರ್ಧರಿಸುವ ಪರ್ವಕಾಲ. ಈಗ ಸಾಮಾನ್ಯವಾಗಿ ವಿಜ್ಞಾನ, ವಾಣಿಜ್ಯಶಾಸ್ತ್ರ ಬಿಟ್ಟರೆ ಮಾನವಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಪೋಷಕರು, ಮಕ್ಕಳೂ ಸಹ ಇಷ್ಟಪಡುವುದಿಲ್ಲ. ಹೀಗೇನೂ ಇರಲಿಕ್ಕಿಲ್ಲ ಎಂದುಕೊಂಡರೆ ಅದು ಎಷ್ಟು ಸುಳ್ಳು ಎಂಬ ಅನುಭವವಾಯಿತು. ಕಲಾವಿಭಾಗ ಎನ್ನುವುದು ದಡ್ಡಮಕ್ಕಳ ಅನಿವಾರ್ಯ ಆಯ್ಕೆ, ಎಲ್ಲೂ ಸಲ್ಲದವರು ಮಾತ್ರ ಇಲ್ಲಿ ಸಲ್ಲುತ್ತಾರೆ ಎಂಬಂತೆ ನಮ್ಮ ಸುತ್ತಮುತ್ತಲಿನ ಜನರು ಮಾತಾಡುವುದನ್ನು ಕೇಳಿಸಿಕೊಳ್ಳುವ ಪರಿಸ್ಥಿತಿ ಎದುರಾಯಿತು.jk

“ನೀನು ಯಾಕೆ ಆರ್ಟ್ಸ್ ತೆಗೊಂಡೆ” ಎಂದು ಪಿ.ಯು.ಸಿ.ಗೆ ಸೇರಿದ ಹುಡುಗಿಯೊಬ್ಬಳನ್ನು ಪಕ್ಕದಮನೆಯವರು ಕೇಳುತ್ತಿದ್ದರು  “ಕಾಮರ್ಸ್ ಆದರೂ ತೆಗೆದುಕೊಳ್ಳಬಹುದಿತ್ತಲ್ಲಾ” ಎಂದರು. ಕಲಾವಿಭಾಗದ ವಿಷಯಗಳ ಕಲಿಕೆಯಿಂದ ಏನೂ ಉಪಯೋಗವಿಲ್ಲ, ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿರುವ ವಿದ್ಯಾರ್ಥಿಗಳು ಮಾತ್ರ ಈ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಧೋರಣೆಯಂತೂ ಎದ್ದುಕಾಣುತ್ತಿತ್ತು. ಇದನ್ನು ಕೇಳಿದ ಆ ಹುಡುಗಿ ಒಮ್ಮೆ ಪೆಚ್ಚಾದಳು, ಆದರೆ ಮರುಗಳಿಗೆಯೇ ಸ್ವಲ್ಪ ಸಿಟ್ಟಿನಿಂದಲೇ “ನನ್ನಿಷ್ಟ “ ಎಂದಳು. ಹೀಗೆ ಪ್ರಶ್ನೆ ಕೇಳಿದವರೇನೂ ಹೆಚ್ಚು ಶಿಕ್ಷಣ ಪಡೆದವರಲ್ಲ. ಸೈನ್ಸ್ ತೆಗೆದುಕೊಳ್ಳುವುದು, ಹಾಗೆಯೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದು ಒಂದು ಪ್ರತಿಷ್ಠೆಯ ವಿಷಯವಾಗಿಬಿಟ್ಟಿದೆ. ಕಾಲೇಜಿಗೆ ಸೇರಿಸಲು ಹೋದಾಗ  ಅಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಬಂದಿದ್ದ ಪೋಷಕರಲ್ಲೊಬ್ಬರು, ಈ ಹುಡುಗಿ ಕಲಾವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ “ಕಾಮರ್ಸ್ ಸಿಗದೇ ಇದ್ದುದಕ್ಕೆ ಆರ್ಟ್ಸ್ ತೆಗೊಂಡಿದ್ದಾ” ಎಂದು ಕೇಳಿದ್ದೂ ಸಹ ಮಾನವಿಕ ವಿಷಯಗಳ ಅಧ್ಯಯನದ ಬಗ್ಗೆ ಇರುವ ಒಂದು ರೀತಿಯ ಉಪೇಕ್ಷೆಯನ್ನು ಹಾಗೂ ಇದು ಕಲಿಕೆಗೆ ಅರ್ಹವಾದ ವಿಷಯವೇ ಅಲ್ಲ ಎಂಬ ಅವರ ಅಭಿಪ್ರಾಯವನ್ನು ತೋರಿಸುತ್ತಿತ್ತು. ತನಗಿಷ್ಟವಿಲ್ಲದ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿ ಅದರಲ್ಲಿ ಅನುತ್ತೀರ್ಣರಾದರೆ ಎಂಬುದರ ಬಗ್ಗೆ ಹೆಚ್ಚಿನ ಪೋಷಕರಿಗೆ ಯೋಚನೆಯೇ ಇಲ್ಲ. ಮಾನವಿಕ ವಿಷಯಗಳನ್ನು ಯಾಕೆ ಆಯ್ಕೆ ಮಾಡಿಕೊಳ್ಳಲು  ಹಿಂಜರಿಯುತ್ತಾರೆ? ಸಮಾಜದ ಅಧ್ಯಯನ ಬೇಡವೇ? ಅರ್ಥಶಾಸ್ತ್ರ, ಇತಿಹಾಸ, ರಾಜಕೀಯ ಶಾಸ್ತ್ರ,ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ತರ್ಕಶಾಸ್ತ್ರ, ತತ್ವಶಾಸ್ತ್ರ, ಸಂಗೀತ, ನೃತ್ಯ ಹೀಗೆಯೇ ಕಲಾವಿಭಾಗದಲ್ಲಿ ಒಳಗೊಳ್ಳುವ ಈ ವಿಷಯಗಳ ಕಲಿಕೆ ಯಾಕೆ ಅವಗಣನೆಗೆ ಒಳಗಾಗಿದೆ?

ಮನೆಯ ಹತ್ತಿರವೇ ಮೂರು ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಾವಿಭಾಗ ಇದ್ದರೆ ಅಲ್ಲಿಯೇ ಪ್ರವೇಶ ಪಡೆಯುವ ಸಲುವಾಗಿ ಆಕೆಯ ಪೋಷಕರು ವಿಚಾರಿಸಲು ಹೋದಾಗ, “ವಿದ್ಯಾರ್ಥಿನಿಯನ್ನು ಕರೆದುಕೊಂಡು ಬನ್ನಿ, ಅವಳಿಗೆ  ಕಾಮರ್ಸ್ ತೆಗೆದುಕೊಳ್ಳುವಂತೆ  ಒಪ್ಪಿಸುತ್ತೇವೆ” ಎಂದರಂತೆ. ಇದು ಈಗಿನ ಸಂಗತಿ ಮಾತ್ರ ಅಲ್ಲ. ನಲುವತ್ತು ವರ್ಷಗಳ ಹಿಂದೆ ನನ್ನ ಗೆಳತಿಯ ತಂದೆ ಕಲಾವಿಭಾಗಕ್ಕೆ ಮಗಳನ್ನು ಸೇರಿಸಲು ಹೋದಾಗ ಎಸ್,ಎಸ್,ಎಲ್,ಸಿ.ಯಲ್ಲಿ ಆಕೆ ಪಡೆದ ಉತ್ತಮ ಅಂಕಗಳನ್ನು ನೋಡಿದ ಕಾಲೇಜಿನ ಪ್ರಾಂಶುಪಾಲರೇ ಕಾಮರ್ಸ್ ತೆಗೆದುಕೊಳ್ಳಲು ಸಲಹೆ ನೀಡಿದ ಬಗ್ಗೆ ನನ್ನ ಗೆಳತಿ ಯಾವಾಗಲೂ ಹೇಳುತ್ತಿರುತ್ತಾರೆ. ನನ್ನ ಗೆಳತಿ “ಆರ್ಟ್ಸ್ ತೆಗೆದುಕೊಳ್ತೀನಿ” ಎಂದಾಗ “ಪ್ರಾಂಶುಪಾಲರಿಗಿಂತ ನಿನಗೇನು ಹೆಚ್ಚು ತಿಳಿದಿದೆಯಾ” ಎಂದು ಅವರ ತಂದೆ ಸುಮ್ಮನಿರಿಸಿದರಂತೆ. ಅದರಲ್ಲೂ ನನ್ನ ಗೆಳತಿ ಒಳ್ಳೆಯ ಅಂಕಗಳನ್ನೇ ಪಡೆದರೇನೋ ಸರಿ, ಆದರೆ ಅವರ ಆಯ್ಕೆ ಅದಾಗಿರಲಿಲ್ಲ. ಆ ವಿಷಯಗಳಲ್ಲಿ ಅವರಿಗೆ ಆಸಕ್ತಿ ಇರದಿದ್ದರೂ, ಆ ದಿನಗಳಲ್ಲಿ ಏನಾದರೂ ಓದಿ ಆದಷ್ಟು ಬೇಗ  ಉದ್ಯೋಗ ಪಡೆಯುವುದು ಅವರ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿತ್ತು. ಅವರು ಮುಂದೆ ಉದ್ಯೋಗ ಪಡೆದು ವೃತ್ತಿಯೊಂದಿಗೇ ತಮ್ಮ ಆಸಕ್ತಿಯ ವಿಷಯದಲ್ಲಿ ತೊಡಗಿಸಿಕೊಂಡು ಅದರಲ್ಲಿ ಹೆಸರು ಗಳಿಸಿದರು ಹಾಗೂ ಆ ಬಗ್ಗೆ ಅವರಿಗೆ ಸಂತೃಪ್ತಿ ಇದೆ.

ಯಶಸ್ಸು ಎಂದು ಅದರ ಬೆನ್ನಟ್ಟುತ್ತಾರಲ್ಲಾ, ಅದರ ಮಾನದಂಡ ಹಣಗಳಿಕೆಯೇ ಆಗಿದೆ. ಅದು ವಿಜ್ಞಾನ ವಿಷಯಗಳು, ವಾಣಿಜ್ಯ ವಿಷಯಗಳ ಕಲಿಕೆಯಿಂದ ಮಾತ್ರ ಎಂಬ ತಿಳಿವಳಿಕೆ ಹೆಚ್ಚಿನವರದು. ಅದರಲ್ಲೂ ಇಂಜಿನೀಯರಿಂಗ್  ಮತ್ತು ವೈದ್ಯಕೀಯ ಬಿಟ್ಟರೆ ಬೇರೆ ಯಾವುವೂ ಲೆಕ್ಕಕ್ಕಿಲ್ಲ ಎಂಬಂತೆ ಯೋಚಿಸುತ್ತಾರೆ. ಅದೂ 24 ×7 ದುಡಿತ ಮಾಡುವ ಉದ್ಯೋಗಿಗಳಿಗೆ, 40 ವರ್ಷದ ಆಗುವ ಹೊತ್ತಿಗೆ  ಉದ್ಯೋಗದಲ್ಲಿನ ಆಸಕ್ತಿ, ಕೆಲವರಿಗಂತೂ ಬದುಕಿನಲ್ಲೇ ಆಸಕ್ತಿ ಬತ್ತಿಹೋಗಿರುತ್ತದೆ.

ಕಲಾವಿಭಾಗ-ಮಾನವಿಕವಿಷಯಗಳು ಯಾಕೆ ಇಷ್ಟೊಂದು ಅವಜ್ಞೆಗೆ ಒಳಗಾಗಿವೆ?  ಈ ಬಗ್ಗೆ ಯೋಚಿಸಬೇಕಾಗಿದೆ. ಎಲ್ಲಾ ವಿಷಯಗಳ ಕಲಿಕೆ ಬದುಕಿಗೆ ಎಷ್ಟು ಅಗತ್ಯ ಎಂಬ ಬಗ್ಗೆ ಪ್ರೌಢಶಾಲೆಯಲ್ಲಿರುವಾಗಲೇ ವಿದ್ಯಾರ್ಥಿಗಳಿಗೆ ವಿಷಯತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಆ ಉಪನ್ಯಾಸಗಳಿಗೆ ಪೋಷಕರನ್ನೂ ಆಹ್ವಾನಿಸಬೇಕು, ಪೋಷಕರ ಸಭೆಯನ್ನು ಶಾಲೆಗಳಲ್ಲಿ ನಡೆಸುವಾಗ ಇಂತಹ ಉಪನ್ಯಾಸಗಳನ್ನು ಏರ್ಪಡಿಸಬೇಕು. ಆ ವಿಷಯಗಳಲ್ಲಿ ಮುಂದೆ ಯಾವ ರೀತಿಯ ಅಧ್ಯಯನ ಕೈಗೊಳ್ಳಬಹುದು, ಉದ್ಯೋಗ ಪಡೆದುಕೊಳ್ಳಬಹುದು ಎಂಬ ಮಾಹಿತಿಗಳನ್ನು ಒದಗಿಸಬೇಕು. ಅದಕ್ಕಿಂತ ಹೆಚ್ಚಾಗಿ ಶಿಕ್ಷಣ ಎಂದರೇನು, ನಮ್ಮ ಬದುಕಿನಲ್ಲಿ ಅದರ ಮಹತ್ವವೇನು ಎಂಬುದನ್ನು ಮುಖ್ಯವಾಗಿ ಮನವರಿಕೆ ಮಾಡಿಸಬೇಕು. ಮಕ್ಕಳ ಆಸಕ್ತಿಯನ್ನು ಗಮನಿಸಬೇಕು. ಆ ವಯಸ್ಸಿನಲ್ಲಿ ಮಕ್ಕಳಿಗೆ ಸರಿಯಾದ ವಿಷಯ ಆಯ್ಕೆಮಾಡಿಕೊಳ್ಳುವುದು ಕಷ್ಟವಾಗಬಹುದು. ಯಾರಾದರೂ, “ಅದ್ಯಾಕೆ ಆ ವಿಷಯ ಆಯ್ಕೆ ಮಾಡಿಕೊಂಡಿ? ಬೇರೆ ವಿಷಯ ತೆಗೆದುಕೊಳ್ಳಬಹುದಾಗಿತ್ತಲ್ಲಾ, ಅಥವಾ ನಿನಗೆ ಕಷ್ಟವಾಗುತ್ತೆ ಅದು” ಎಂದೆಲ್ಲಾ ಹೇಳಿದರೆ ಗೊಂದಲಕ್ಕೊಳಗಾಗುತ್ತಾರೆ.

ಸಾಹಿತ್ಯದಲ್ಲಿ ಸಾಧನೆ ಮಾಡಿದ್ದಕ್ಕಾಗಿ ರವೀಂದ್ರನಾಥ ಟಾಗೋರ್ ಅವರಿಗೆ, ಅರ್ಥಶಾಸ್ತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ ಅಮರ್ತ್ಯ ಸೇನ್ ಮತ್ತು ಅಭಿಜಿತ್ ಬ್ಯಾನರ್ಜಿ ಅವರಿಗೆ ನೋಬೆಲ್ ಪ್ರಶಸ್ತಿ ಸಂದಿವೆ. ಎಂ.ಎನ್. ಶ್ರೀನಿವಾಸ್ ಇವರು ಸಮಾಜಶಾಸ್ತ್ರ, ಸಾಮಾಜಿಕ ಮಾನವಶಾಸ್ತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದಿದ್ದು ಹಲವಾರು ಪ್ರಶಸ್ತಿಗಳೂ ಅವರಿಗೆ ಸಂದಿವೆ. ಹೀಗೆ ಮಾನವಿಕ ಶಾಸ್ತ್ರಗಳಲ್ಲಿ ಸಾಧನೆ ಮಾಡಿದವರ ಹಲವಾರು ನಿದರ್ಶನಗಳಿದ್ದರೂ ಅದೇಕೋ ಈ ವಿಷಯಗಳ ಅಧ್ಯಯನವನ್ನು ಮಾಡುವುದರ ಬಗ್ಗೆ ಜನರಿಗೆ ಒಲವಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರಗಳ ಪಾತ್ರ ಬಹಳ ಹಿರಿದಾದುದು. ಜನರ ದಿನನಿತ್ಯದ ಜೀವನದಲ್ಲಿ ಮಾನವಿಕ ವಿಷಯಗಳಿಗೆ ಎಷ್ಟೊಂದು ಮಹತ್ವವಿದೆಯಾದ್ದರಿಂದ ಈ ವಿಷಯಗಳ ವೈಜ್ಞಾನಿಕವಾದ ಕ್ರಮಬದ್ಧ ಅಧ್ಯಯನ ಅಗತ್ಯವಾಗಿ ಬೇಕಾಗಿದೆ. ಮತದಾನ ಮಾಡುವುದರ ಬಗ್ಗೆ ಸುಶಿಕ್ಷಿತರೇ ನಿರ್ಲಕ್ಷ್ಯ ತೋರಿರುವುದನ್ನು ನೋಡಿದ್ದೇವೆ. ಅವರ ದಿನನಿತ್ಯದ ಜೀವನನಿರ್ವಹಣೆಗೆ ಏನೂ ತೊಂದರೆ ಇಲ್ಲದಿರುವುದರಿಂದ ಅಧಿಕಾರದಲ್ಲಿ ಯಾರಿದ್ದರೇನು ಎಂಬ ಧೋರಣೆ ಹೊಂದಿರುತ್ತಾರೆ. ಚುನಾವಣೆಯ ಸಮಯದಲ್ಲಿ ಸಾರ್ವತ್ರಿಕ ರಜೆ ಇರುವುದರಿಂದ ಪ್ರವಾಸಕ್ಕೆ ಹೋಗುವುದೋ, ಊರಿಗೆ ಹೋಗುವುದೋ ಮಾಡಿ ಮತದಾನ ಮಾಡುವುದೇ ಇಲ್ಲ. ಚುನಾವಣಾ ಆಯೋಗ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದರೂ ಮತದಾನದ ಪ್ರಮಾಣ  2019ರ ಚುನಾವಣೆಯಲ್ಲಿ ಶೇಕಡಾ 67ಕ್ಕಿಂತ ಸ್ವಲ್ಪ ಜಾಸ್ತಿ ಅಷ್ಟೇ ಎಂಬುದು ನಮಗೆಲ್ಲರಿಗೂ ತಿಳಿದಿರುವಂತಹದೇ.

ರವೀಂದ್ರನಾಥ ಟಾಗೂರ್, ಮಹಾತ್ಮಾಗಾಂಧಿ, ಸ್ವಾಮಿ ವಿವೇಕಾನಂದ ಹೀಗೆ ಹಲವಾರು ಚಿಂತಕರು ಬದುಕಿನಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಚಿಂತನೆಗೆ ಹಚ್ಚುವ ಮತ್ತು ಎಲ್ಲರೂ ಅನುಸರಿಸಬೇಕಾದ ಮಾರ್ಗದ ಬಗ್ಗೆ ಮಾತುಗಳನ್ನಾಡಿದ್ದಾರೆ. ವಿಶಿಷ್ಟವಾದ ಬೀಜರೂಪದ ಹೊಳಹುಗಳನ್ನು ನೀಡಿದ ಹೆಸರಾದ ತತ್ವಶಾಸ್ತ್ರಜ್ಞ ಜಿಡ್ಡು ಕೃಷ್ಣಮೂರ್ತಿಯವರು ಶಿಕ್ಷಣದ ಬಗ್ಗೆ ಆಡಿದ ಮಾತುಗಳಲ್ಲಿ ನಾನು ಉಲ್ಲೇಖಿಸಲು ಇಷ್ಟಪಡುವುದೇನೆಂದರೆ, ‘ವಿದ್ಯಾಭ್ಯಾಸಕ್ಕೆ ಕೊನೆ ಎಂಬುದಿಲ್ಲ, ನೀವೊಂದು ಪುಸ್ತಕವನ್ನು ಓದಬಹುದು, ಪರೀಕ್ಷೆ ಪಾಸು ಮಾಡಬಹುದು ಮತ್ತು ನಿಮ್ಮ ಕಲಿಕೆಯನ್ನು ನಿಲ್ಲಿಸಿಬಿಡಬಹುದು. ಆದರೆ ನೀವು ಹುಟ್ಟಿದ ಕ್ಷಣದಿಂದ ಸಾಯುವವರೆಗಿನ ಇಡೀ ಬದುಕೇ ಒಂದು ಕಲಿಯುವ ಪ್ರಕ್ರಿಯೆ.” ಎಂಬುದು

ವಿಜ್ಞಾನದಲ್ಲಿ ಶಿಕ್ಷಣ ಪಡೆದವರು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲವೇ? ಸಂಗೀತ, ನೃತ್ಯ ಕಲಿತಿಲ್ಲವೇ?  ಔಪಚಾರಿಕ ಓದು ವಿಜ್ಞಾನವಾಗಿರಲಿ, ಮಾನವಿಕಶಾಸ್ತ್ರಗಳಾಗಿರಲಿ, ಅವರು ಬದುಕಿನಲ್ಲಿ ಒಂದು ನೆಲೆ ಕಂಡುಕೊಂಡಿದ್ದರೂ ಬೇರೆ ವಿಷಯಗಳನ್ನು ಕಲಿಯುತ್ತಲೇ ಇರುತ್ತಾರೆ. ಬದುಕಿನಲ್ಲಿ ಯಶಸ್ಸುಗಳಿಸುವ ಮಾತು ಏನೇ ಇದ್ದರೂ ತಮ್ಮನ್ನು ತಾವು ಅರಿಯುವ ತಮ್ಮೊಳಗಿನ ಸಾಮರ್ಥ್ಯವನ್ನು ಹೊರಹೊಮ್ಮಿಸುವ ಪ್ರಯತ್ನವನ್ನು ಮನುಷ್ಯರು ಮಾಡುತ್ತಲೇ ಇರುತ್ತಾರೆ. ಶಿಕ್ಷಣದ ಮುಖ್ಯ ಉದ್ದೇಶವೇ ತಮ್ಮೊಳಗಿನ ಪ್ರತಿಭೆ, ಸಾಮರ್ಥ್ಯದ ಹುಡುಕಾಟ, ಅದರಿಂದ ತಾವು ಸಂತೋಷವನ್ನು ಕಂಡುಕೊಳ್ಳುವುದಲ್ಲದೇ, ಎಲ್ಲರ ಸಂತೋಷಕ್ಕೂ ತಮ್ಮಿಂದ ಸಾಧ್ಯವಾದಷ್ಟು ನೆರವು ನೀಡುವುದು.

ಕೆ.ಪದ್ಮಾಕ್ಷಿ