ರಂಜ ಸುರಗಿ: ‘ಹಾರುವ ಕುದುರೆ-ಪೆಗಾಸಸ್

ಮೈಸೂರು,ಆಗಸ್ಟ್,25,2021(www.justkannada.in):

ಪುರಾಣದ ಕಥೆಗಳನ್ನು, ಆ ಕಥೆಗಳಲ್ಲಿ ಬರುವ ವ್ಯಕ್ತಿಗಳನ್ನು, ಸಂಗತಿಗಳನ್ನು, ಮಾತುಗಳಲ್ಲಿ ಮತ್ತು ಬರಹಗಳಲ್ಲಿ ಉಲ್ಲೇಖಿಸುವುದನ್ನು ಮತ್ತು ರೂಪಕಗಳಾಗಿ ಉಪಯೋಗಿಸುವುದನ್ನು ಯಾವಾಗಲೂ ನೋಡುತ್ತಿರುತ್ತೇವೆ.  ಈಗ ಜಗತ್ತೇ ಒಂದು ಹಳ್ಳಿಯಂತೆ ಆಗಿದೆ, ಇಂಗ್ಲಿಷ್ ಜಾಗತಿಕವಾಗಿ ಸಂಪರ್ಕದ ಭಾಷೆಯಾಗಿರುವುದರಿಂದ ಜಗತ್ತಿನ ಎಲ್ಲಾ ಭಾಷೆಗಳ ಸಾಹಿತ್ಯದಲ್ಲಿ ಕಂಡುಬರುವ ಸಂಗತಿಗಳನ್ನು, ಪುರಾಣಗಳ ಪಾತ್ರಗಳನ್ನು ಜಗತ್ತಿನೆಲ್ಲೆಡೆ ರೂಪಕವಾಗಿ ಬಳಸುತ್ತಿರುವುದನ್ನು ನೋಡಬಹುದು, ನಮ್ಮ ಭಾರತೀಯ ಭಾಷೆಯ ಬಹಳಷ್ಟು ಶಬ್ದಗಳು ಇಂಗ್ಲಿಷ್ ಶಬ್ದಕೋಶಕ್ಕೆ ಸೇರಿವೆ. ನಮ್ಮ ಪುರಾಣಗಳಲ್ಲಿ ದೇವರು, ಮಾನವರು ಮತ್ತು ರಾಕ್ಷಸರು/ಸೈತಾನರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ದೇವಲೋಕದಲ್ಲಿ ಶಾಪಕ್ಕೆ ಗುರಿಯಾಗಿ ಮಾನವರಾಗಿ ಜನ್ಮತಾಳುವುದು, ಶಾಪವಿಮೋಚನೆಯಾಗುವುದು ಇವೆಲ್ಲಾ ಈ ಪುರಾಣಗಳಲ್ಲಿ ಬರುವ ಸಂಗತಿಗಳು. ವಾಸ್ತವ ಸಂಗತಿಗಳು ಮತ್ತು ಕಾಲ್ಪನಿಕ ಚಿತ್ರಣಗಳು ಸೇರಿ ಬೇರೊಂದು ಲೋಕವನ್ನೇ ಸೃಷ್ಟಿಸುತ್ತವೆ. ನಮ್ಮ ಪುರಾಣಗಳಲ್ಲಿ ಕಂಡುಬರುವ ಸನ್ನಿವೇಶಗಳು, ಪಾತ್ರಗಳಿಗೆ ಸಾಮ್ಯತೆ ಇರುವಂತಹ ಅನೇಕ ಸಂಗತಿ, ಪಾತ್ರಗಳನ್ನು ಗ್ರೀಕ್ ಪುರಾಣಗಳಲ್ಲಿಯೂ ನೋಡಬಹುದು.

ಈಗ ಗ್ರೀಕ್ ಪುರಾಣದಲ್ಲಿ ಬರುವ ‘ಪೆಗಾಸಸ್’ ಬಹಳ ಸುದ್ದಿಯಲ್ಲಿದೆ. ಈ ಪೆಗಾಸಸ್ ಎಂದರೇನು, ಅದರ ಮೂಲ ಏನು ಎಂಬುದನ್ನು ತಿಳಿಯುವ ಕುತೂಹಲ ನನ್ನಲ್ಲಿ ಮೂಡಿತು. ಇಂಗ್ಲಿಷ್ ಸಾಹಿತ್ಯದ ಮೂಲಕ ಅಲ್ಪ ಸ್ಪಲ್ಪ ಪ್ರಾಚೀನ ಗ್ರೀಕ್ ಸಾಹಿತ್ಯದ ಪರಿಚಯವಿದ್ದ ನಾನು ಪೆಗಾಸಸ್ ಬಗ್ಗೆ ತಿಳಿಯಲು ಹೊರಟೆ. ಪೆಗಾಸಸ್ ಬಿಳಿಯ ಬಣ್ಣದ ರೆಕ್ಕೆಗಳಿರುವ ಗಾಳಿಯಲ್ಲಿ ಹಾರುವ ಕುದುರೆ. ದೈತ್ಯ ಶಕ್ತಿಯುಳ್ಳ ಅದ್ಭುತವಾದ ಸೃಷ್ಟಿ. ಪ್ರಾಚೀನ ಗ್ರೀಕ್ ಪುರಾಣ  ಕಥನದಂತೆ ಪೆಗಾಸಸ್ ಗೋರ್ಗನ್ ಮೆದೂಸಾಳ ಸಂತಾನ, ಗೋರ್ಗನ್ ಅಂದರೆ ಅದೊಂದು ವಿಚಿತ್ರ ಜೀವಿ. ಬೇರೆ ಬೇರೆ ರೂಪದಲ್ಲಿರುವ ಗೋರ್ಗನ್ ವಿವರಗಳು ಗ್ರೀಕ್ ಪುರಾಣದಲ್ಲಿವೆ. ಆದರೆ ಮುಖ್ಯವಾಗಿ ಸ್ಟೆನೋ, ಯೂರಿಯೆಲ್ ಮತ್ತು ಮೆದೂಸಾ ಎಂಬ ಗೋರ್ಗನ್ ಸಹೋದರಿಯರ ಪ್ರಸ್ತಾಪ ಬರುತ್ತದೆ. ಸ್ಟೆನೋ ಮತ್ತು ಯೂರಿಯೆಲ್ ಅವಿನಾಶಿಗಳು. ಮೆದೂಸಾ ಮಾತ್ರ ಮರ್ತ್ಯ ಜೀವಿ. ಮೆದೂಸಾಳ ತಲೆಯಲ್ಲಿ ಕೂದಲಿನ ಬದಲಾಗಿ ಹಾವುಗಳೇ ಇದ್ದವೆಂಬ ವರ್ಣನೆಯಿದೆ. ಕ್ಲಾಸಿಕಲ್ ಗ್ರೀಕ್ ಪುರಾಣದಂತೆ ಗ್ರೀಕ್ ದೇವತೆ ಪೋಸೆಡೈನ್ ಮತ್ತು ಮೆದೂಸಾಳ ಸಂತಾನ ಪೆಗಾಸಸ್. ಪೋಸೆಡೈನ್ ಸಮುದ್ರವನ್ನು ಪ್ರತಿನಿಧಿಸುತ್ತಾನೆ. ಮೆದೂಸಾಳನ್ನು ನೋಡಿದವರು ಎಲ್ಲರೂ ಕಲ್ಲಾಗಿ ಪರಿವರ್ತಿತರಾಗುತ್ತಿದ್ದರು.  ಆಗ  ಆಕಾಶದ ದೇವತೆಯಾದ ಜೀಯಸ್ ಮಗ ಪರ್ಸಿಯಸ್ ತನ್ನಲ್ಲಿರುವ ರಕ್ಷಾಕವಚದಲ್ಲಿ ಮೆದೂಸಾಳ ಪ್ರತಿಬಿಂಬ ನೋಡಿ ಅವಳ ತಲೆ ಕಡಿದಾಗ ಅವಳ ಕುತ್ತಿಗೆಯಿಂದ ಹೊರಬಂದ  ರೆಕ್ಕೆಗಳುಳ್ಳ  ಕುದುರೆಯೇ ಪೆಗಾಸಸ್. ಪೆಗಾಸಸ್ ಜೊತೆಗೆ ಸಹೋದರ ಕ್ರೈಸೇವೋರ್ ಸಹ ಹುಟ್ಟಿದ್ದ, ನಂತರ ಪರ್ಸಿಯಸ್, ಮೆದೂಸಾಳನ್ನು ನೋಡಿದವರೆಲ್ಲರೂ ಕಲ್ಲಾಗುತ್ತಿದ್ದುದರಿಂದ, ತನ್ನ ತಾಯಿಯನ್ನು ಸೆರೆಹಿಡಿದಿಟ್ಟಿದ್ದ ಪಾಲಿಡೆಕ್ಟಿಸ್ ಮತ್ತು ಅವನ  ಸಹಚರರಿಗೆ ಮೆದೂಸಾಳ ತಲೆ ತೋರಿಸಿ ಅವರನ್ನು ಕಲ್ಲಾಗಿಸಿ ತಾಯಿಯನ್ನು ರಕ್ಷಿಸುತ್ತಾನೆ. ಗ್ರೀಕ್ ವೀರ ಬೆಲ್ಲೆರೋಫೋನ್ ಎಂಬುವವನು ಪೆಗಾಸಸ್ ಶಾಂತಿಯಿಂದ ನೀರು ಕುಡಿಯುತ್ತಿದ್ದಾಗ ಅಥೆನಾ ಮತ್ತು ಪೋಸೆಡೈನ್ ಅವರ ಸಹಾಯದಿಂದ ಅವನನ್ನು ಸೆರೆಹಿಡಿದು ತನ್ನ ಸಾಹಸ ಶೌರ್ಯದ ಕಾದಾಟಗಳಿಗಾಗಿ ಉಪಯೋಗಿಸುತ್ತಾನೆ. ಬೆಲ್ಲೆರೋಫೋನ್ ಬೆಂಕಿಯನ್ನು ಉಸಿರಾಡುವ, ಭಾಗಶಃ ಸಿಂಹ, ಮೇಕೆ ಮತ್ತು ಡ್ರ್ಯಾಗನ್ ದೇಹಭಾಗಗಳಿರುವ ದೈತ್ಯ ಶರೀರವನ್ನು ಹೊಂದಿರುವಂತಹ ಕೈಮೆರಾನೊಂದಿಗೆ ಕಾದಾಡಲು ಪೆಗಾಸಸ್ ಬೆನ್ನೇರಿ ಹೋಗಿ ಜಯ ಗಳಿಸುತ್ತಾನೆ. ಬೆಲ್ಲೆರೋಫೋನ್ ಹೀಗೆ ಪೆಗಾಸಸ್ ಬೆನ್ನೇರಿ ಕಾದಾಟ ಮಾಡುತ್ತಲೇ  ಜಯಗಳಿಸಿದ ಅಹಂಕಾರದಿಂದ ಪೆಗಾಸಸ್ ಜೊತೆಗೆ ಸ್ವರ್ಗಕ್ಕೆ/ದೇವತೆಗಳ ನೆಲೆಯಾದ ಒಲಂಪಿಯನ್ ಪರ್ವತಕ್ಕೆ ಹೋಗಲು ಪ್ರಯತ್ನಿಸುತ್ತಾನೆ. ಆಗ ಕುದುರೆಯಿಂದ ಬಿದ್ದು ಸಾಯುತ್ತಾನೆ ಎಂದು, ಇನ್ನೊಂದು ಕಡೆ ಕುಂಟನಾಗುತ್ತಾನೆ ಎಂಬ ಕಥನವಿದೆ. ಬೆಲ್ಲೆರೋಫೋನ್ ಬಗ್ಗೆ ಬೇರೆಯೇ ಸ್ವಾರಸ್ಯಕರವಾದ ಕಥೆಯಿದೆ. ನಂತರ ಪೆಗಾಸಸ್ ಆಕಾಶದ ದೇವರು ಹಾಗೂ ದೇವರುಗಳಲ್ಲಿ ಪ್ರಮುಖನಾದ ಜೀಯಸ್  ಬಳಿ ಹೋಗುತ್ತಾನೆ. ಜೀಯಸ್ ಪೆಗಾಸಸ್ ಗೆ ಒಲಿಂಪಸ್ ಆಕಾಶದಲ್ಲಿ ಮಿಂಚು ಮತ್ತು ಗುಡುಗು ಸೃಷ್ಟಿಸುವ ಶಕ್ತಿಯನ್ನು ನೀಡುತ್ತಾನೆ. ಹೀಗೆ ಪೆಗಾಸಸ್ ಮಾಡಿದ ಸೇವೆಗೆ ಮೆಚ್ಚಿ ಜೀಯಸ್ ಅವನನ್ನು ನಕ್ಷತ್ರಪುಂಜವನ್ನಾಗಿಸುತ್ತಾನೆ. ಪೆಗಾಸಸ್ ನಕ್ಷತ್ರವನ್ನು ಆಕಾಶದಲ್ಲಿ ನೋಡಬಹುದು. ನಮ್ಮ ಧ್ರುವನಕ್ಷತ್ರದ ಹಿಂದೆಯೂ ಹೀಗೊಂದು ಜನಜನಿತ ಕಥೆಯಿದೆ. ಗ್ರೀಕ್ ಕಲೆ ಮತ್ತು ಸಾಹಿತ್ಯದಲ್ಲಿ ಪೆಗಾಸಸ್ ಕಥೆ ಮತ್ತೆ ಮತ್ತೆ ಚಿತ್ರಿತವಾಗಿದೆ. ಆತ್ಮದ ನಿರಂತರತೆಗೆ ಪೆಗಾಸಸ್ ಒಂದು ಸಂಕೇತವಾಗಿದೆ. ಪೆಗಾಸಸ್ ಉನ್ನತವಾದುದನ್ನು ಸಾಧಿಸುವುದರ, ಕನಸು ಸಾಕಾರಗೊಳ್ಳುವುದರ, ಶಾಶ್ವತ ಯೌವನ ಮತ್ತು ಉತ್ಸಾಹ, ಪ್ರೀತಿಯ ಸಂಕೇತವಾಗಿದೆ.

ಗ್ರೀಕ್ ಪುರಾಣದ  ಪೆಗಾಸಸ್ ಹೆಸರನ್ನು ವಿಮಾನಯಾನ ಸಂಸ್ಥೆಗಳಿಗೆ, ಸಾಫ್ಟ್ ವೇರ್ ಕಂಪೆನಿಗಳಿಗೆ ,ಹೋಟೆಲ್ಲುಗಳಿಗೆ ಹೀಗೆ  ಬೇರೆ ಬೇರೆ  ಸಂಸ್ಥೆಗಳಿಗೆ ಇಡಲಾಗಿದೆ. ಈಗ  ಪೆಗಾಸಸ್ ಸುದ್ದಿಯಲ್ಲಿರುವುದು ಇಸ್ರೇಲಿನ ಎನ್.ಎಸ್.ಓ. ಎಂಬ ಗೂಢಚರ್ಯೆ ಸಂಸ್ಥೆ ಆ ಹೆಸರಿನ  ಸ್ಪೈವೇರ್ ಅನ್ನು ಬೇಹುಗಾರಿಕೆಗಾಗಿ ಬಳಸುತ್ತಿರುವುದಕ್ಕಾಗಿ. ಪೆಗಾಸಸ್ ಸ್ಪೈವೇರ್ ಬಳಕೆದಾರರ ಗಮನಕ್ಕೆ ಬಾರದೆಯೇ ಅವರ ಮೊಬೈಲ್ ಫೋನ್ ಪ್ರವೇಶಿಸಿ ಫೋನ್ ಕರೆಗಳು, ಸಂದೇಶಗಳು, ಪಾಸ್ ವರ್ಡ್ ತಿಳಿದುಕೊಳ್ಳುವುದು, ಫೋನ್  ಬಳಕೆದಾರರ ಚಲನವಲನದ ಮೇಲೆ ನಿಗಾ ಇಡುವುದು, ಮೈಕ್ರೋಫೋನ್, ಕ್ಯಾಮೆರಾದ ಚಟುವಟಿಕೆ, ಆ್ಯಪ್ ಗಳ ಮಾಹಿತಿ ಪಡೆಯುವುದು ಹೀಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಬೇಹುಗಾರಿಕೆ ನಡೆಸುತ್ತಿರುವವರಿಗೆ ತಲುಪಿಸುತ್ತದೆ.  ಎನ್.ಎಸ್.ಓ. ಸಂಸ್ಥೆ ಪೆಗಾಸಸ್ ಸ್ಪೈವೇರ್ ಅನ್ನು ಸರ್ಕಾರಗಳಿಗೆ ಮಾತ್ರವೇ ಭಯೋತ್ಪಾದನೆ ಮತ್ತು ಅಪರಾಧಗಳನ್ನು ತಡೆಯಲು ಒದಗಿಸುವುದೆಂದು ಹೇಳುತ್ತದೆ.   ಈ ಸಂಸ್ಥೆಯ ಕುರಿತಂತೆ ಹುಡುಕಾಟ ನಡೆಸಿದಾಗ ತಿಳಿದು ಬಂದುದು ಸಂಸ್ಥೆಯ ಸ್ಥಾಪಕರ  ಹೆಸರಿನಲ್ಲಿಯೇ ಎನ್.ಎಸ್.ಓ.ಸಂಸ್ಥೆ ಇದೆ ಎಂಬುದು. ನಿವ್ ಕಾರ್ಮಿ(Niv Carmi), ಶಾಲೆವ್  ಹೂಲಿಯೋ( Shalev Hulio) ಮತ್ತು ಓಮ್ರಿ ಲಾವಿ(Omri Lavie) ಎಂಬ ಈ ಮೂವರೇ ಈ ಸಂಸ್ಥೆಯ ಸ್ಥಾಪಕರು. ಇಸ್ರೇಲಿನ ಈ ಗೂಢಚರ್ಯೆ ಸಂಸ್ಥೆ ಎನ್.ಎಸ್.ಓ. 2010ರಲ್ಲಿ ಸ್ಥಾಪನೆಯಾಯಿತು. ಈಗ ಗ್ರೀಕ್ ಪುರಾಣದ ಹಾರುವ ಕುದುರೆ ಪೆಗಾಸಸ್ ಹಾರಿ ಬಂದು ಬೇಹುಗಾರಿಕೆ ಮಾಡುವ ಸಂಸ್ಥೆಯೊಳಗೆ ಸೇರಿಕೊಂಡು ಜಗತ್ತಿನ ರಾಜಕೀಯವನ್ನೇ ಅಲ್ಲೋಲಕಲ್ಲೋಲ ಮಾಡುತ್ತಿದೆ.

ಕೆ.ಪದ್ಮಾಕ್ಷಿ