ಅಂಧ ಮಹಿಳೆ ಮೇಲೆ ಅತ್ಯಾಚಾರ:  ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ, ದಂಡ

ಮೈಸೂರು,ಜೂನ್,18,2024 (www.justkannada.in): ಅಂಧ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ  ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ ಕೊಮ್ಮೆಗೌಡನ ಕೊಪ್ಪಲು ಗ್ರಾಮದ ವಾಸಿ 50 ವರ್ಷದ ಚಲುವರಾಜು ಬಿನ್‌ ಸೀನೇಗೌಡ ಶಿಕ್ಷೆಗೆ ಗುರಿಯಾದ ಆರೋಪಿ.

16-08-2019 ರಂದು ಪ್ರಕರಣದ ಸಂತ್ರಸ್ತ ಅಂಧ ಮಹಿಳೆಯು ಮನೆಯಲ್ಲಿ ಒಬ್ಬಳೇ ವಾಸವಿದ್ದಾಗ ಆರೋಪಿ ಚಲುವರಾಜು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಅಪರಾಧ ಮಾಡುವ ಉದ್ದೇಶದಿಂದ ಸಂತ್ರಸ್ತ ಮಹಿಳೆಯ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಸಂತ್ರಸ್ತೆ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ, ಕತ್ತನ್ನು ಹಿಸುಕಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ(ಅತ್ಯಾಚಾರ)ವೆಸಗಿದ್ದನು.  ನಂತರ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಮುಗಿಸುತ್ತೇನೆಂದು ಕೊಲೆ ಬೆದರಿಕೆ ಹಾಕಿದ್ದ.

ಈ ಬಗ್ಗೆ ಸಂತ್ರಸ್ತೆಯ ಅತ್ತಿಗೆ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಬಿಳಿಕೆರೆ ಪೊಲೀಸ್‌ ಠಾಣೆಯ ಅಂದಿನ ವೃತ್ತ ನಿರೀಕ್ಷಕರಾಗಿದ್ದ ಪೂವಯ್ಯ ಕೆ.ಸಿ ಅವರು ತನಿಖೆ ನಡೆಸಿ ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿಕೊಂಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶಎಂ.ರಮೇಶ  ಅವರು,  ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿಗಳನ್ನು ಪರಿಗಣಿಸಿ ಆರೋಪಿ ಚಲುವರಾಜು ಮೇಲಿನ ಆರೋಪ ದೃಢಪಟ್ಟ ಹಿನ್ನೆಲೆ ಕಲಂ 376 ಐಪಿಸಿ ಅಡಿಯ ಅಪರಾಧಕ್ಕೆ 10 ವರ್ಷಗಳ ಕಠಿಣ ಸಜೆ ಮತ್ತು 20 ಸಾವಿರ ರೂ.  ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಕೆ.ನಾಗರಾಜ ಅವರು ಸರ್ಕಾರದ ಪರ ವಾದ ಮಂಡಿಸಿದರು.

Key words: Rape case, Accused,  imprisonment, court