ರತನ್ ಟಾಟಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ

ಮುಂಬೈ,ಅಕ್ಟೋಬರ್,10,2024 (www.justkannada.in):  ದೇಶದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್  ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ.ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ರತನ್ ಟಾಟಾ ನಿಧನ ನಿಜವಾಗಿಯೂ ಒಂದು ಯುಗವನ್ನು ಅಂತ್ಯಕ್ಕೆ ಕೊಂಡೊಯ್ದಂತಾಗಿದೆ- ಡಿಕೆ ಶಿವಕುಮಾರ್

ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನ ನಿಜವಾಗಿಯೂ ಒಂದು ಯುಗವನ್ನು ಅಂತ್ಯಕ್ಕೆ ಕೊಂಡೊಯ್ದಂತಾಗಿದೆ. ಅವರು ಸರಳತೆ, ಸಹಾನುಭೂತಿಯ ನಡವಳಿಕೆಯಿಂದ ಹೆಸರುವಾಸಿಯಾಗಿದ್ದರು. ಅವರು ನಿಜವಾಗಿಯೂ ಪಾಲಿಸಬೇಕಾದ ಮತ್ತು ಆಚರಿಸಬೇಕಾದ ಪರಂಪರೆಯನ್ನು ಬಿಟ್ಟು ಹೋಗುತ್ತಾರೆ. ನಾವೆಲ್ಲರೂ ಭಾರತದ ಅತ್ಯುತ್ತಮ ಪುತ್ರರಲ್ಲಿ ಒಬ್ಬರಿಗೆ ಅಂತಿಮ ವಿದಾಯ ಹೇಳುತ್ತಿದ್ದೇವೆ. ಅವರ ಕುಟುಂಬ, ಪ್ರೀತಿಪಾತ್ರರು ಮತ್ತು ಹಿತೈಷಿಗಳಿಗೆ ದುಖಃ ತಡೆಯುವ ಶಕ್ತಿ ಸಿಗಲಿ ಎಂದು  ತಿಳಿಸಿದ್ದಾರೆ.

ಕೇಂದ್ರ ಹೆಚ್ ಡಿಕೆ ಅವರಿಂದ ಸಂತಾಪ..

ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ಶ್ರೀ ರತನ್ ಟಾಟಾ ಅವರ ನಿಧನದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ಲೋಕೋಪಕಾರಿ ಮತ್ತು ಕೈಗಾರಿಕೋದ್ಯಮಿಯಾಗಿ ಅವರ ಪರಂಪರೆಯು ಅಸಂಖ್ಯಾತ ಜೀವನ ಮತ್ತು ಸಮುದಾಯಗಳ ಮೇಲೆ ಬಹಳಷ್ಟು ಪ್ರಭಾವ ಬೀರಿತ್ತು. ಅವರ ದೂರದೃಷ್ಟಿ, ಸಹಾನುಭೂತಿ ಮತ್ತು ಸಾಮಾಜಿಕ ಕಾರಣಗಳಿಗಾಗಿ ಅಚಲವಾದ ಸಮರ್ಪಣೆ ಯಾವಾಗಲೂ ನೆನಪಿನಲ್ಲಿ ಉಳಿಯಲಿದೆ. ಈ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇವೆ” ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ಭಾರತೀಯ ಉದ್ಯಮದ ನಿಜವಾದ ಟೈಟಾನ್ ರತನ್ ಟಾಟಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ದೂರದೃಷ್ಟಿಯ ನಾಯಕತ್ವ ಮತ್ತು ನಮ್ಮ ಆರ್ಥಿಕತೆ ಮತ್ತು ವ್ಯಾಪಾರಕ್ಕೆ ಅಪಾರ ಕೊಡುಗೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಕುಟುಂಬ, ಸ್ನೇಹಿತರು ಮತ್ತು ಅವರ ಜೀವನವನ್ನು ಸ್ಪರ್ಶಿಸಿದ ಎಲ್ಲರಿಗೂ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದಿದ್ದಾರೆ.

ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,  ಶ್ರೇಷ್ಠ ಉದ್ಯಮಿ ರತನ್ ಟಾಟಾ ಅವರ ನಿಧನದಿಂದ ದೇಶಕ್ಕೆ ಅಪಾರ ನಷ್ಟವಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಮಹಾನ್ ಹೆಜ್ಜೆಗುರುತುಗಳನ್ನು ಉಳಿಸಿದ ರತನ್ ಟಾಟಾ ಅವರು ದೂರದೃಷ್ಟಿಯ ಉದ್ಯಮಿ. ಅವರಿಗೆ ಅನೇಕ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡಲಾಗಿತ್ತು. ಸೇವಾ ಕ್ಷೇತ್ರದಲ್ಲೂ ಅವರ ಹೆಸರು ಚಿರಸ್ಥಾಯಿ. ಉದ್ಯಮ, ಪರೋಪಕಾರ ಮತ್ತು ನಮ್ರತೆಯಲ್ಲಿ ಅವರ ಪರಂಪರೆ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃದಯದಾಳದ ಸಂತಾಪಗಳು ಎಂದಿದ್ದಾರೆ.

Key words: Ratan Tata, death, Condolences, CM Siddaramaiah