ನವದೆಹಲಿ, ಮೇ 5, 2022 (www.justkannada.in): ಭಾರತೀಯ ರಿಜರ್ವ್ ಬ್ಯಾಂಕ್‌ನ (ಆರ್ ಬಿಐ) ಮುಖ್ಯಸ್ಥ ಶಕ್ತಿಕಾಂತ ದಾಸ್ ಅವರು ಬುಧವಾರದಂದು ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಸರಣಿ ಸಭೆಗಳನ್ನು ನಡೆಸಿದ್ದು, ಆರ್ಥಿಕತೆಯ ಮೇಲೆ ಹಣದುಬ್ಬರದ ಒತ್ತಡಗಳನ್ನು ತಡೆಗಟ್ಟಲು ರೆಪೊ ದರವನ್ನು ೪೦ ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಮುಂದುವರೆದು, ಅನುಕೂಲತೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ನಿಲುವಿಗೆ ನಗದು ಮೀಸಲು ಅನುಪಾತವನ್ನು (Cash Reserve Ratio) 50 ಬೇಸಿಸ್ ಪಾಯಿಂಟ್ ಗಳಷ್ಟು ಅಂದರೆ ಶೇ.೪.೫೦ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಈ ಸಿಆರ್ ಆರ್ ಹೆಚ್ಚಳ ರೂ.೮೩೭೧೧.೫೫ ಕೋಟಿಗಳಷ್ಟು ಲಿಕ್ವಿಡಿಟಿಯನ್ನು ಸರಿಪಡಿಸುತ್ತದೆ. ಈ ಸಿಆರ್ ಆರ್ ಹೆಚ್ಚಳ ಮೇ 21ರ ಮಧ್ಯರಾತ್ರಿಯಿಂದ ಅನ್ವಯವಾಗುತ್ತದೆ.
ಈ ಘೋಷಣೆಯಂತೆ, ಆರ್ ಬಿಐ ಈ ಹಿಂದೆ ಶೇ.೪ರಷ್ಟಿದ್ದ ರೆಪೊ ದರವನ್ನು ೪೦ ಬಿಪಿಎಸ್ ಶೇ.೪.೪೦ರಷ್ಟು ಹೆಚ್ಚಿಸಿದೆ. ರೆಪೊ ದರವನ್ನು ಮೇ ೨೦೨೦ರಂದು ಕೊನೆಯ ಬಾರಿ ಕಡಿಮೆಗೊಳಿಸಲಾಗಿತ್ತು ಹಾಗೂ ಅಂದಿನಿಂದಲೂ ಬದಲಾಯಿಸಲಾಗಿರಲಿಲ್ಲ. ಈ ಹೆಚ್ಚಳ ತತ್‌ಕ್ಷಣದಿಂದಲೇ ಪರಿಣಾಮ ಬೀರಲಿದೆ. ಮುಂದುವರೆದು, ನಗದು ಮೀಸಲು ಅನುಪಾತವನ್ನು (ಸಿಆರ್ ಆರ್) ೫೦ ಬಿಪಿಎಸ್ ನಷ್ಟು ಹೆಚ್ಚಿಸಿದ್ದು, ಇದು ಬಡ್ಡಿ ದರಗಳ ಮೇಲಿನ ಒತ್ತಡವನ್ನು ಹೆಚ್ಚಿಸಲಿದೆ.
ರೆಪೊ ದರ ಎಂದರೇನು ಮತ್ತು ಅದು ಏಕೆ ಮುಖ್ಯ.
ಪ್ರತಿ ಬಾರಿ ವಾಣಿಜ್ಯ ಬ್ಯಾಂಕುಗಳಿಗೆ ಹಣದ ಕೊರತೆ ಎದುರಾದಾಗ, ಸಾಲಕ್ಕಾಗಿ ಆರ್ ಬಿಐ ಮೊರೆ ಹೋಗುತ್ತವೆ. ಆರ್ ಬಿಐ ಈ ಬ್ಯಾಂಕುಗಳೀಗೆ ನಿರ್ಧಿಷ್ಟವಾದ ದರದ ಪ್ರಕಾರ ಹಣವನ್ನು ಸಾಲವಾಗಿ ನೀಡುತ್ತದೆ. ಈ ದರವನ್ನೇ ರೆಪೊ ದರ (repo rate) ಎನ್ನಲಾಗುತ್ತದೆ. ಈ ದರವನ್ನು ಕಾಲಕಾಲಕ್ಕೆ ಹೆಚ್ಚಿಸುವುದು/ ಕಡಿಮೆಗೊಳಿಸುವುದನ್ನು ಅಥವಾ ಬದಲಾಯಿಸದೆ ಹಾಗೇ ಬಿಡುವುದನ್ನು ಆರ್ ಬಿಐ ನಿರ್ಧರಿಸುತ್ತದೆ. ಕೇಂದ್ರೀಯ ಬ್ಯಾಂಕ್ ನ ಹಣಕಾಸಿನ ನೀತಿ ಸಮಿತಿಯ ನಿರ್ಧಾರ ಭಾರತದ ಆರ್ಥಿಕತೆಯ ಲಿಕ್ವಿಡಿಟಿ ಮತ್ತು ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ.
ಹಣದುಬ್ಬರದ ಪ್ರವೃತ್ತಿಗಳನ್ನು ನಿಯಂತ್ರಿಸಲು ಈ ರೆಪೊ ದರ ಆರ್ ಬಿಐನ ಬಹಳ ಮುಖ್ಯವಾದ ಸಾಧನವಾಗಿದೆ. ಈ ದರಗಳನ್ನು ಹೆಚ್ಚಿಸುವುದು ಅಥವಾ ಕಡಿಮೆಗೊಳಿಸಿದರೆ ವಾಣಿಜ್ಯ ಬ್ಯಾಂಕುಗಳಿಗೆ ಸಾಲಗಳು ದುಬಾರಿ ಅಥವಾ ಅಗ್ಗವಾಗುತ್ತವೆ. ರೆಪೊ ದರ ಹಾಗೂ ಹಣದುಬ್ಬರ ಎರಡೂ ವಿಲೋಮ ಸಂಬಂಧವನ್ನು ಹೊಂದಿವೆ. ರೆಪೊ ದರವನ್ನು ಹೆಚ್ಚಿಸಿದರೆ ಹಣದುಬ್ಬರದ ಪ್ರಮಾಣ ಕಡಿಮೆಯಾಗುತ್ತದೆ, ಮತ್ತು ಕಡಿಮೆಗೊಳಿಸಿದರೆ ಹಣದುಬ್ಬರ ಏರುತ್ತದೆ. ಅಂದರೆ ಗೃಹ ಸಾಲ, ವಾಹನ ಸಾಲಗಾರರ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ.
ರೆಪೊ ದರವನ್ನು ಹೆಚ್ಚಿಸುವ ಆರ್ ಬಿಐನ ಆಶ್ಚರ್ಯಕರ ನಿರ್ಧಾರ ನಿಮ್ಮ ಸಾಲಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುತ್ತದೆ. ಅಂದರೆ ನಿಮ್ಮ ಗೃಹ ಸಾಲ ಹಾಗೂ ವಾಹನಗಳ ಸಾಲಗಳು ದುಬಾರಿಯಾಗಲಿವೆ. ಒಂದು ವೇಳೆ ನೀವು ಸಾಲ ಪಡೆಯಲು ಯೋಚಿಸುತ್ತಿದ್ದರೆ ಬೇಗನೆ ಮುಂದುವರೆಯಿರಿ, ಏಕೆಂದರೆ ಶೀಘ್ರದಲ್ಲೇ ಸಾಲಗಳ ಬಡ್ಡಿ ದರ ಹೆಚ್ಚಾಗಲಿವೆ.
ಈ ರೆಪೊ ದರಗಳಲ್ಲಿ ಹೆಚ್ಚಳ ಎಂದರೆ ಬ್ಯಾಂಕುಗಳು ಹಾಗೂ ಎನ್ ಬಿಎಫ್ ಸಿಗಳಿಂದ ಸಾಲಗಳನ್ನು ಪಡೆದುಕೊಂಡಿರುವ ಹಾಲಿ ಜನರಿಗೆ ಕೆಟ್ಟ ಸುದ್ದಿ. ಏಕೆಂದರೆ ಸಾಲಗಳ ಮೇಲಿನ ಬಡ್ಡಿ ದರಗಳು ಹೆಚ್ಚಾಗುತ್ತವೆ. ಅಂದರೆ ಸಾಲದ ಕಂತಿನ ಮೊತ್ತವೂ ಹೆಚ್ಚಾಗುತ್ತದೆ. ಈ ಇತ್ತೀಚಿನ ನೀತಿ ನಿರ್ಧಾರದಿಂದ, ಗೃಹ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲ, ಎಲ್ಲಾ ಸಾಲಗಳ ಮೇಲೆ ಪರಿಣಾಮ ಉಂಟಾಗುತ್ತದೆ.
ಬೇಸಿಕ್ ಹೋಂ ಲೋನ್ ನ ಸಹ-ಸ್ಥಾಪಕ ಹಾಗೂ ಸಿಇಒ ಅತುಲ್ ಮೋಗಾ ಅವರು ಈ ಕುರಿತು ಮಾತನಾಡುತ್ತಾ, “ರೆಪೊ ದರದಲ್ಲಿ ಹೆಚ್ಚಳ, ಹಣದುಬ್ಬರವನ್ನು ನಿಯಂತ್ರಿಸುವ ಹಾಗೂ ಆರ್ಥಿಕತೆಯ ಮೇಲಿನ ಹಾಲಿ ಪರಿಣಾಮದ ವಿರುದ್ಧ ಆರ್ ಬಿಐ ಕೈಗೊಂಡಿರುವ ಅತ್ಯಂತ ಲೆಕ್ಕಾಚಾರದ ಕ್ರಮ. ರೆಪೊ ದರದಲ್ಲಿ ಹೆಚ್ಚಳ ಅಂದರೆ, ಗೃಹ ಸಾಲ ಪಡೆದಿರುವವರು ಸ್ವಲ್ಪ ಹೆಚ್ಚಿನ ಬಡ್ಡಿ ದರವನ್ನು ತೆರಬೇಕಾಗುತ್ತದೆ. ಆದಾಗ್ಯೂ, ಗೃಹ ಸಾಲಗಳ ಮೇಲೆ ಇದರ ಪರಿಣಾಮ ಹೆಚ್ಚಾಗಿರುವುದಿಲ್ಲ, ಏಕೆಂದರೆ ಗೃಹ ಸಾಲಗಳ ಹಿಂದೆ ಬೇಡಿಕೆ ಹಾಗೂ ಸರಬರಾಜು, ಖರೀದಿಸುವವರು ಒಳಗೊಂಡಂತೆ ಬಹಳ ಮಹತ್ತರವಾದ ಅಂಶಗಳು ಪಾತ್ರ ನಿರ್ವಹಿಸುತ್ತವೆ. ಆದರೆ, ಒಂದು ವೇಳೆ ರೆಪೊ ದರ ಹೆಚ್ಚಳ ಬಹಳ ದಿನಗಳವರೆಗೆ ಬದಲಾಗದೇ ಇದ್ದರೆ ಪರಿಣಾಮ ಬೀರುತ್ತದೆ,” ಎಂದು ವಿವರಿಸಿದರು.
Key words: RBI-increased- repo rates – 40 bps-amount – home loan -vehicle loan-installments