ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976ರ ಕಲಂ 38(ಸಿ) ತಿದ್ದುಪಡಿಗೊಳಿಸಿ ಹೊಸದಾಗಿ ಕಲಂ 38(ಡಿ) ಅನ್ನು ಜಾರಿಗೊಳಿಸಿ ಈಗಾಗಲೇ ಅರ್ಜಿ ಸಲ್ಲಿಕೆಯು ಆನ್ಲೈನ್ ಮುಖಾಂತರ ಪ್ರಾರಂಭವಾಗಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ ಸಂವ್ಯಶಾಇ:೫೨/ಶಾಸನ:೨೦೧೬, ದಿನಾಂಕ ೨೮.೦೫.೨೦೨೦ರಂತೆ ಪ್ರಾಧಿಕಾರದ ಕಾಯ್ದೆ ೧೯೭೬ರ ಕಲಂ ೩೮(ಸಿ) ತಿದ್ದುಪಡಿಗೊಳಿಸಿ ಕಲಂ ೩೮(ಡಿ) ಸೇರ್ಪಡೆಗೊಳಿಸಿ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿರುವ ಮೇರೆಗೆ, ಪ್ರಾಧಿಕಾರದ ಅಂತಿಮ ಅಧಿಸೂಚನೆ ಒಳಪಟ್ಟು, ಐ-ತೀರ್ಪು ಅನುಮೋದನೆಗೊಂಡು, ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿನ ಅನಧಿಕೃತ ಕಟ್ಟಡಗಳನ್ನು ಸರ್ಕಾರದ ಸುಗ್ರೀವಾಜ್ಞೆ ದಿನಾಂಕದಿಂದ ೧೨ ವರ್ಷಗಳ ಹಿಂದೆ ವಾಸಯೋಗ ಮನೆಗಳನ್ನು ನಿರ್ಮಿಸಿದ್ದಲ್ಲಿ ಮರುಮಂಜೂರಾತಿ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ನಿಗದಿತ ಅರ್ಜಿ ನಮೂನೆಯೊಂದಿಗೆ ಜಮೀನಿನ ಮೂಲ ಖಾತೆದಾರರಿಂದ ಖರೀದಿಸಲ್ಪಟ್ಟ ಕಂದಾಯ ನಿವೇಶನಗಳಲ್ಲಿನ ಕಟ್ಟಡದ ಕ್ರಯಪತ್ರಗಳ ದೃಢೀಕೃತ ಪ್ರತಿ, ಜಮೀನಿನ ಮೂಲ ಖಾತೆದಾರರಿಂದ ಖರೀದಿಸಲ್ಪಟ್ಟ ಕಂದಾಯ ನಿವೇಶನದಲ್ಲಿನ ಕಟ್ಟಡ ಕ್ರಯಪತ್ರಗಳ ಇತ್ತೀಚಿನವರೆಗಿನ ನಮೂನೆ-೧೫ರಲ್ಲಿ ಮೂಲ ಋಣಭಾರ ಪ್ರಮಾಣ ಪತ್ರ, ನಿಗದಿತ ನಮೂನೆಯಲ್ಲಿ ಇತ್ತೀಚಿನ ಭಾವಚಿತ್ರ / ಮಾದರಿ ಸಹಿ ದೃಢೀಕರಣ ಪತ್ರ (ಗೆಜೆಟೆಡ್ ಅಧಿಕಾರಿಯ ದೃಢೀಕರಣ), ಸ್ವಪ್ರಮಾಣ ಪತ್ರ (ನೋಟರಿ ದೃಢೀಕೃತ), ಇತ್ತೀಚಿನ ಕಂದಾಯ ರಶೀದಿ, ಖಾತಾ ದೃಢೀಕರಣ ಪತ್ರ, ಖಾತಾ ನಕಲು ಪ್ರತಿ, ಮಂಜೂರಾದ ಕಟ್ಟಡದ ನಕ್ಷೆ, ನೀರಿನ ಸಂಪರ್ಕ ಕಾರ್ಯಾದೇಶ, ವಿದ್ಯುಚ್ಛಕ್ತಿ ಸಂಪರ್ಕ ಕಾರ್ಯಾದೇಶ, ವಾಸದ ವಿಳಾಸಕ್ಕೆ ಪುರಾವೆ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಇತರೆ) ಈ ಎಲ್ಲಾ ದಾಖಲಾತಿಗಳನ್ನು ನಿಗದಿತ ಶುಲ್ಕವನ್ನು ಕಡ್ಡಾಯವಾಗಿ ಆನ್ಲೈನ್ ಮುಖಾಂತರವೇ ಪಾವತಿಸತಕ್ಕದ್ದು.
ಮೊದಲ ಹಂತದಲ್ಲಿ ಪಿಳ್ಳಣ್ಣ ಗಾರ್ಡನ್ ೩ನೇ ಹಂತದ ಬಡಾವಣೆಯಲ್ಲಿ ೭೮೩ ಅನಧಿಕೃತ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈ ಪೈಕಿ ೫೧೬ ಅನಧಿಕೃತ ಕಟ್ಟಡದಾರರುಗಳಿಗೆ ಡಿಮಾಂಡ್ ನೋಟಿಸ್ ಅನ್ನು ಜಾರಿಗೊಳಿಸಲಾಗಿರುತ್ತದೆ. ಆರ್.ಎಂ.ವಿ. ಬಡಾವಣೆಯಲ್ಲಿ ೧೬೦ ಅನಧಿಕೃತ ಕಟ್ಟಡದಾರರುಗಳು ಮತ್ತು ಹೆಚ್.ಆರ್.ಬಿ.ಆರ್. ಬಡಾವಣೆಯಲ್ಲಿ ೪೧ ಅನಧಿಕೃತ ಕಟ್ಟಡದಾರರುಗಳಿಗೆ ಡಿಮಾಂಡ್ ನೋಟಿಸ್ ಅನ್ನು ಜಾರಿಗೊಳಿಸಲಾಗಿದೆ.
ಪೂರ್ವ ವಿಭಾಗಕ್ಕೆ ಸಂಬಂಧಪಟ್ಟಂತೆ ಹೆಚ್.ಎಸ್.ಆರ್. ಬಡಾವಣೆಯಲ್ಲಿ ೫೫೫ ಅನಧಿಕೃತ ಕಟ್ಟಡಗಳನ್ನು ಗುರುತಿಸಿದ್ದು, ಈ ಪೈಕಿ ೧೧೩ ಅನಧಿಕೃತ ಕಟ್ಟಡದಾರರುಗಳಿಗೆ ಡಿಮಾಂಡ್ ನೋಟಿಸ್ ಅನ್ನು ಜಾರಿಗೊಳಿಸಲಾಗಿದೆ. ಉಳಿದ ಬಡಾವಣೆಗಳಿಗೆ ಹಂತ-ಹಂತವಾಗಿ ನೋಟಿಸ್ ಅನ್ನು ಜಾರಿಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
ಸದರಿ ಬಡಾವಣೆಗಳಿಗೆ ಸಂಬಂಧಿಸಿದಂತೆ ಪ್ರಾಧಿಕಾರದ ಕಂದಾಯ ಅಧಿಕಾರಿಗಳು ಮತ್ತು ಅಭಿಯಂತರರ ಸಹಯೋಗದೊಂದಿಗೆ ಅನಧಿಕೃತ ನಿರ್ಮಾಣ ಮಾಡಿಕೊಂಡಿರುವ ಕಟ್ಟಡಗಳ ಮಾಲೀಕರುಗಳಿಗೆ ತಿಳುವಳಿಕೆ ಪತ್ರಗಳನ್ನು ಜಾರಿಗೊಳಿಸುವ ಕಾರ್ಯವು ಪ್ರಗತಿಯಲ್ಲಿದೆ.