ಬೆಂಗಳೂರು,ಮಾರ್ಚ್,29,2021(www.justkannada.in): ಕೇಂದ್ರ ಸರ್ಕಾರ ಪ್ರಾಯೋಜಿತ ಓದು-ಬರಹ (ಪಢನಾ-ಲಿಖನಾ) ಅಭಿಯಾನಕ್ಕೆ ಏಪ್ರಿಲ್ 2, 2021 ರಂದು ಚಾಲನೆ ನೀಡುವ ಮೂಲಕ ಮೇ-2021ರ ಒಳಗೆ 3.20 ಲಕ್ಷ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ಲೋಕ ಶಿಕ್ಷಣ ನಿರ್ದೇಶನಾಲಯದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ 24 ತಾಲ್ಲೂಕು, 219 ಗ್ರಾಮ ಪಂಚಾಯಿತಿ ಮತ್ತು 19 ನಗರ/ಪಟ್ಟಣ ಪ್ರದೇಶಗಳಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, 15 ರಿಂದ 50 ವರ್ಷದ 2.4 ಲಕ್ಷ ಮಹಿಳೆಯರು ಮತ್ತು 80,000 ಪುರುಷ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಗುರಿ ಹೊಂದಲಾಗಿದೆ. ಕಲಿಕೆ ಪೂರ್ಣಗೊಂಡ ನಂತರ ಕಲಿಕಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ ಉತ್ತೀರ್ಣರಾದವರಿಗೆ ಇಲಾಖೆಯಿಂದ ಸಾಕ್ಷರತಾ ಪ್ರಮಾಣ ಪತ್ರವನ್ನು ನೀಡಲಾಗುವುದು. ರಾಜ್ಯದಲ್ಲಿ ಗುರುತಿಸಲಾಗಿರುವ 1.26 ಕೋಟಿ ಅನಕ್ಷರಸ್ಥರ ಪೈಕಿ ಈಗಾಗಲೇ 57.00 ಲಕ್ಷ ಜನರನ್ನು ಸಾಕ್ಷರರನ್ನಾಗಿ ಮಾಡಲಾಗಿದ್ದು, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಸಾಕ್ಷರತೆಯ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೊಸ ಸ್ತರಕ್ಕೆ ಕೊಂಡೊಯ್ಯಲು ಇಲಾಖೆಯು ಕ್ರಿಯಾ ಯೋಜನೆಯನ್ನು ರೂಪಿಸುತ್ತಿದೆ. ನವ ಸಾಕ್ಷರರಿಗೆ ಜೀವನೋಪಾಯ ಕೌಶಲ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಯೋಗ:
ಇತ್ತೀಚೆಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿರುವ ಅನಕ್ಷರಸ್ಥ ಸದಸ್ಯರುಗಳಿಗೆ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ನಿರಂತರ ಸಾಕ್ಷರತಾ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಬೇಕೆಂದು, ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಸುರೇಶ್ ಕುಮಾರ್, ಈ ಬಗ್ಗೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರೊಂದಿಗೆ ಚರ್ಚಿಸಿ, ಕೂಡಲೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ನಿರ್ದೇಶಿಸಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ನಿರ್ವಹಿಸುತ್ತಿರುವ ಗ್ರಾಮೀಣ ಗ್ರಂಥಾಲಯಗಳಲ್ಲಿ ನವ ಸಾಕ್ಷರರುಗಳ ಕಲಿಕೆಗೆ ಪೂರಕವಾಗಿ ಪ್ರತ್ಯೇಕ ಆಸನಗಳು ಹಾಗೂ ಪುಸ್ತಕ ಸಂಗ್ರಹಣ ಕಪಾಟುಗಳನ್ನು ಪೂರೈಸುವ ವ್ಯವಸ್ಥೆಯಾಗಬೇಕು, ಇದಕ್ಕೆ ಪೂರ್ವಭಾವಿ ಕ್ರಮಗಳಿಗೆ ಕೂಡಲೆ ಚಾಲನೆ ನೀಡಬೇಕೆಂದು ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ ನೀಡಿದರು.
ಯಶೋಗಾಥೆ:
ಸ್ವಯಂ ಪ್ರೇರಿತರಾಗಿ ಕಲಿಕೆಗೆ ತೊಡಗಿಸಿಕೊಂಡ ನವ ಸಾಕ್ಷರರುಗಳ ಯಶೋಗಾಥೆಯನ್ನು ಪ್ರಕಟಣೆಯ ಮೂಲಕ ಹೊರತರಲು ನಿರ್ದೇಶನ ನೀಡಿದ ಸಚಿವ ಸುರೇಶ್ ಕುಮಾರ್, ಇಂತಹ ಪ್ರಯತ್ನಗಳು ಇಲಾಖೆಯ ಕೆಲಸಗಳಿಗೆ ಅರ್ಥಪೂರ್ಣತೆಯನ್ನು ತಂದುಕೊಡುತ್ತವೆ ಎಂದರು. ಚಂದನ ವಾಹಿನಿಯಲ್ಲಿ ಈ ರೀತಿಯ ಯಶೋಗಾಥೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಯೋಜನೆ ರೂಪಿಸಬೇಕಂದು ಅವರು ಸಲಹೆಯನ್ನು ನೀಡಿದರು. ಸಮಾಜದಲ್ಲಿ ಗಾರ್ಮೆಂಟ್ ನೌಕರರು, ಸಿದ್ಧಿ ಜನಾಂಗದಂತಹ ವಿವಿಧ ಹಿಂದುಳಿದ ವರ್ಗಗಳ ಅನಕ್ಷರಸ್ಥರೂ ಸೇರಿದಂತೆ ವಿಭಿನ್ನ ವರ್ಗಗಳ ಸಾಕ್ಷರತೆಗೆ ವಿನೂತನ ಕಾರ್ಯಕ್ರಮಗಳನ್ನ ಇಲಾಖೆಯೂ ಹಮ್ಮಿಕೊಳ್ಳಬೇಕಿದೆ ಎಂದು ಅವರು ಸೂಚಿಸಿದರು.
ಬಡತನ ಮತ್ತು ಹಲವಾರು ಕಾರಣಗಳಿಂದ ಶಿಕ್ಷಣ ವಂಚಿತರಾದವರಿಗೆ ಮರಳಿ ಕಲಿಯಲು ಕಾಲ ಕೂಡಿ ಬಂದಿದೆ ಎಂಬ ಭಾವನೆಯನ್ನ ಜನಸಾಮಾನ್ಯರಲ್ಲಿ ಮೂಡಿಸುವ ನಿಟ್ಟಿನಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಲೋಕ ಶಿಕ್ಷಣ ಇಲಾಖೆಯ ನಿರ್ದೇಶಕಿ ಶ್ರೀಮತಿ ಸುಶಮ ಗೋಡಬೋಲೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: read-writing -campaign – make – 3.20 lakh illiterates-Minister- Suresh Kumar.