ಬೆಂಗಳೂರು, ಡಿಸೆಂಬರ್ ೨೧, ೨೦೨೧ (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ನಗರದ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ ಗಳಿಗೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದೆ.
ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘ (PHANA)ದೊಂದಿಗೆ ಬಿಬಿಎಂಪಿಯ ವಿಶೇಷ ಆಯುಕ್ತರಾದ (ಆರೋಗ್ಯ) ಡಾ. ಕೆ.ವಿ. ತ್ರಿಲೋಕ್ ಚಂದ್ರ ಅವರು ಒಂದು ಸಭೆ ನಡೆಸಿದರು. ಆ ಸಭೆಯಲ್ಲಿ ತ್ರಿಲೋಕ್ ಚಂದ್ರ ಅವರು ಖಾಸಗಿ ಆಸ್ಪತ್ರೆಗಳ ನಿರ್ವಾಹಕರಿಗೆ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ಮೀಸಲರಿಸುವುದನ್ನು ಖಾತ್ರಿಪಡಿಸುವಂತೆ ಸೂಚಿಸಿದ್ದಾರೆ.
“ಬೆಂಗಳೂರಿನ ನಗರದಲ್ಲಿ ಪ್ರಸ್ತುತ ಕೋವಿಡ್ ಪ್ರಕರಣಗಳ ಪ್ರಮಾಣ ಅಷ್ಟಾಗಿ ಇರದಿದ್ದರೂ ಸಹ, ಸರ್ಕಾರದ ವತಿಯಿಂದ ಈ ಹಿಂದೆ ನೀಡಿದ್ದಂತಹ ಆದೇಶಗಳ ಪ್ರಕಾರ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆಗಳನ್ನು ಮೀಸಲಿರಿಸಲು ಸಿದ್ಧರಾಗಿರಬೇಕಿದೆ,” ಎಂದು ಡಾ. ತ್ರಿಲೋಕ್ ಚಂದ್ರ ಅವರು ತಿಳಿಸಿದರು. ಜೊತೆಗೆ ಖಾಸಗಿ ಆಸ್ಪತ್ರೆಗಳು ವೆಬ್‌ಪೋರ್ಟಲ್ ನಲ್ಲಿ ಹಾಸಿಗೆಗಳ ಲಭ್ಯತೆಯ ಕುರಿತ ರಿಯಲ್-ಟೈಂ ವಿವರಗಳನ್ನು ಲಭ್ಯಗೊಳಿಸುವಂತೆಯೂ ತಿಳಿಸಿದ್ದಾರೆ.
ಜೊತೆಗೆ ಖಾಸಗಿ ಆಸ್ಪತ್ರೆಗಳಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಮಕ್ಕಳ ಹಾಸಿಗೆಗಳನ್ನೂ ಸಹ ಮೀಸಲಿಟ್ಟು, ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಮತ್ತು ಇತರೆ ಅಗತ್ಯ ಮೂಲಭೂಸೌಕರ್ಯಗಳು ಸಿದ್ಧವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದಂತಹ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ಬಿಬಿಎಂಪಿ, ಬೆಂಗಳೂರು ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳು ಹಾಗೂ ಪ್ರತಿಯೊಂದು ಆಸ್ಪತ್ರೆಯಲ್ಲೂ ಲಭ್ಯವಿರುವಂತಹ ಒಟ್ಟು ಹಾಸಿಗೆಗಳ ಸಂಖ್ಯೆಯಂತಹ ವಿವರಗಳಿರುವ ದತ್ತಾಂಶವನ್ನು ಕಲೆಹಾಕುತ್ತಿರುವುದಾಗಿ ತಿಳಿಸಿದರು.
“ಪ್ರತಿ ಬಾರಿಯೂ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಇಂತಿಷ್ಟು ಪ್ರಮಾಣದ ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡುವಂತೆ ತಿಳಿಸುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಇನ್ನೂ ಗೊಂದಲವಿದ್ದು, ಖಾಸಗಿ ಆಸ್ಪತ್ರೆಗಳು ತಮ್ಮ ಬಳಿ ಬಹಳ ಕಡಿಮೆ ಸಂಖ್ಯೆಯ ಹಾಸಿಗೆಗಳಿರುವುದಾಗಿ ಘೋಷಿಸಿರುವುದನ್ನು ಗಮನಿಸಿದ್ದೇವೆ. ಹಾಗಾಗಿ, ಬಿಬಿಎಂಪಿಯ ಅಧಿಕಾರಿಗಳ ತಂಡ ಪ್ರತಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಲಭ್ಯವಿರುವ ಹಾಸಿಗೆಗಳ ಸಂಖ್ಯೆ, ಯಾವ ರೀತಿಯ ಹಾಸಿಗೆಗಳು ಲಭ್ಯವಿವೆ, ಹಾಗೂ ಇತರೆ ವಿವರಗಳನ್ನು ಕಲೆ ಹಾಕಿ ಡಾಟಾಬೇಸ್ ಅನ್ನು ಸಿದ್ಧಪಡಿಸುತ್ತಿದೆ. ಜೊತೆಗೆ ಈ ತಪಾಸಣಾ ತಂಡಗಳು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಅನುಷ್ಠಾನಗೊಳಿಸಲಾಗಿದೆಯೋ ಇಲ್ಲವೋ ಎಂಬ ಅಂಶಗಳನ್ನೂ ಸಹ ಗಮನಿಸಲಿದೆ,” ಎಂದು ವಿವರಿಸಿದರು.
ತಮ್ಮ ಆಸ್ಪತ್ರೆಗಳಿಗೆ ಭೇಟಿ ನೀಡುವ ILI ಹಾಗೂ SARI ಎಲ್ಲಾ ರೋಗಿಗಳಿಗೂ ತಪ್ಪದೇ ಕೋವಿಡ್ ಪರೀಕ್ಷೆಯನ್ನು ನಡೆಸುವಂತೆಯೂ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಸೂಚಿಸಿದೆ. ಆಸ್ಪತ್ರೆಗಳಿಗೆ ಭೇಟಿ ನೀಡುವ ಇತರೆ ರೋಗಿಗಳ ಪೈಕಿ ಯಾರಿಗಾದರೂ ಸೂಚನೆಗಳಿದ್ದಲ್ಲಿ, ಅಂತಹವರಿಗೂ ಸಹ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ತಿಳಿಸಬೇಕೆಂದು, ಮತ್ತು ಎಲ್ಲಾ ರೋಗಿಗಳು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆಯೂ ತಿಳಿಸಲಾಗಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: ready – covid-19- 3rd wave-Advice – Private Hospitals – BBMP