ಬೆಂಗಳೂರು,ಅಕ್ಟೋಬರ್,15,2020(www.justkannada.in): ಕೇಂದ್ರ ಸರಕಾರದ ಸೂಚನೆಯಂತೆ ಅತಿ ಶೀಘ್ರದಲ್ಲಿಯೇ ಕಾಲೇಜುಗಳು ಆರಂಭವಾಗುತ್ತಿದ್ದು, ಅದರಂತೆ ರಾಜ್ಯದಲ್ಲಿ ಕಾಲೇಜುಗಳು ಆರಂಭವಾದ ಕೂಡಲೇ ಕೌನ್ಸೆಲಿಂಗ್ ಮುಗಿಸಿಕೊಂಡು ನೇಮಕಾತಿ ಅದೇಶದ ನೀರಿಕ್ಷೆಯಲ್ಲಿರುವ ಎಲ್ಲ ಉಪನ್ಯಾಸಕರಿಗೆ ನೇಮಕಾತಿ ಪತ್ರವನ್ನು ನೀಡಲು ಸರಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನೇಮಕಾತಿ ಪತ್ರ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಪಿಯುಸಿ ಮಂಡಳಿ ಎದುರು ಧರಣಿ ನಡೆಸುತ್ತಿರವ ಭಾವಿ ಉಪನ್ಯಾಸಕರನ್ನು ಗುರುವಾರ ಭೇಟಿಯಾದ ಡಿಸಿಎಂ ಅಶ್ವಥ್ ನಾರಾಯಣ್, ಹಣಕಾಸು ಇಲಾಖೆಯ ಕೆಲ ಆಕ್ಷೇಪಗಳ ಕಾರಣಕ್ಕೆ ನೇಮಕಾತಿ ಪತ್ರಗಳನ್ನು ನೀಡುವುದು ತಡವಾಗಿದೆ. ಇದಕ್ಕೆ ಕೋವಿಡ್ ಕೂಡ ಒಂದು ಪ್ರಮೂಖ ಕಾರಣ. ಇದೀಗ ಸ್ವತಃ ಮುಖ್ಯಮಂತ್ರಿಗಳೇ ಹಣಕಾಸು ಇಲಾಖೆ ಎತ್ತಿದ್ದ ಆಕ್ಷೇಪಗಳನ್ನು ನಿವಾರಿಸಿ ಕಾಲೇಜುಗಳು ಆರಂಭವಾದ ಕೂಡಲೇ ನೇಮಕಾತಿ ಆದೇಶಗಳನ್ನು ನೀಡುವಂತೆ ಸೂಚಿಸಿದ್ದಾರೆಂದು ತಿಳಿಸಿದರು.
ದಿನೇದಿನೆ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಲೇಜುಗಳು ಶುರುವಾಗುವುದು ಇನ್ನೂ ತಡಡವಾಗಬಹುದು. ಹೀಗಾಗಿ ಈಗಲೇ ಆದೇಶ ಪತ್ರಗಳನ್ನು ನೀಡಿ ಎಂದು ಉಪನ್ಯಾಸಕರು ಒತ್ತಾಯ ಮಾಡಿದರು. ಇದಕ್ಕೆ ಉತ್ತರಿಸಿದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಕಾಲೇಜುಗಳನ್ನು ಅರಂಭ ಮಾಡಿ ಎಂದು ಈಗಾಗಲೇ ಕೇಂದ್ರ ಸರಕಾರ ಸ್ಪಷ್ಟ ಸೂಚನೆ ನೀಡಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ ಹಾಗೂ ಕೆಲ ಮೂಲಭೂತ ಸೌಕರ್ಯಗಳ ತಯಾರಿ ಮಾಡಿಕೊಳ್ಳುತ್ತಿದೆ. ನಿಮಗೆ ಅನುಮಾನವೇ ಬೇಡ. ಕಾಲೇಜುಗಳು ಖಂಡಿತವಾಗಿಯೂ ಆರಂಭವಾಗುತ್ತವೆ. ಸರಕಾರದ ಮೇಲೆ ನಂಬಿಕೆ ಇಡಿ ಎಂದು ಮನವಿ ಮಾಡಿದರು.
ಸರಕಾರ ನಿಮ್ಮ ಪರವಾಗಿದೆ…
ಎಲ್ಲರಿಗೂ ಗೊತ್ತಿರುವಂತೆ ಶೈಕ್ಷಣಿಕ ವರ್ಷ ನಿಲ್ಲಬಾರದು ಎಂಬ ಉದ್ದೇಶದಿಂದ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಪಿಯುಸಿ, ಎಸ್ಸೆಸೆಲ್ಸಿ, ಸಿಇಟಿ, ನೀಟ್ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಯಾವುದೇ ಕಾರಣಕ್ಕೂ ಅಕಾಡೆಮಿಕ್ ವರ್ಷ ನಿಲ್ಲುವುದಿಲ್ಲ. ಶೈಕ್ಷಣಿಕ ಚಟುವಟಿಕೆಗಳು ನಿರಾತಂಕವಾಗಿ ನಡೆಯಲೇಬೇಕು. ಜತೆಗೆ ನಮ್ಮ ಸರಕಾರವು ಶಿಕ್ಷಕರು, ಉಪನ್ಯಾಸಕರ ಪರವಾಗಿದೆ. ನಿಮ್ಮ ಬೇಡಿಕೆಯನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿದ್ದಾರೆಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದರು.
ಹಣಕಾಸು ಇಲಾಖೆ ಎತ್ತಿದ್ದ ಆಕ್ಷೇಪಗಳ ನಡುವೆಯೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸುರೆಶ್ ಕುಮಾರ್ ಅವರ ಒತ್ತಾಸೆಯಿಂದ ಕೋವಿಡ್ ನಡುವೆಯೇ ಕೌನ್ಸೆಲಿಂಗ್ ನಡೆಸಲಾಗಿದೆ. ಉದ್ಯೋಗ ಸ್ಥಳವನ್ನೂ ತೋರಿಸಲಾಗಿದೆ. ಒಂದು ವರ್ಷದೊಳಗೆ ನೇಮಕಾತಿ ಆದೇಶ ಬೇಕು ಎನ್ನುವ ನಿಮ್ಮ ಆತಂಕ ಸರಕಾರಕ್ಕೆ ಅರ್ಥವಾಗುತ್ತದೆ. ಯಾವುದೇ ಆತಂಕ ನಿಮಗೆ ಬೇಡ. ನಂಬಿಕೆ ಇಡಿ; ಧರಣಿ ಕೈಬಿಡಿ. ತರಗತಿಗಳು ಆರಂಭವಾಗುತ್ತಿದ್ದಂತೇ ನೇಮಕಾತಿ ಆದೇಶ ಪತ್ರಗಳು ನಿಮ್ಮನ್ನು ತಲುಪುತ್ತವೆ ಎಂದು ಡಾ.ಅಶ್ವತ್ಥನಾರಾಯಣ ಉಪನ್ಯಾಸಕರಿಗೆ ಭರವಸೆ ನೀಡಿದರು.
ಕೋವಿಡ್ ಕಾರಣದಿಂದ ದೇಶದ ಯಾವುದೇ ರಾಜ್ಯದಲ್ಲೂ ನೇಮಕಾತಿಗಳು ನಡೆಯುತ್ತಿಲ್ಲ. ಅಷ್ಟೇ ಏಕೆ..? ನಮ್ಮ ರಾಜ್ಯದ ಎಲ್ಲಾ ಇಲಾಖೆಗಳಲ್ಲೂ ಹೊಸ ನೇಮಕಾತಿಯನ್ನು ಸಂಪೂರ್ಣವಾಗಿ ತಡೆ ಹಿಡಿಯಲಾಗಿದೆ. ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪನ್ಯಾಸಕರ ನೇಮಕಕ್ಕೆ ಸರಕಾರ ಎಲ್ಲಾ ಅಡ್ಡಿಗಳನ್ನು ಬದಿಗೊತ್ತಿ ಒಪ್ಪಿಕೊಂಡಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ವಿವರಿಸಿದರು.
ನಿರ್ದೇಶಕರ ಜತೆ ಮಾತುಕತೆ…
ಇದೇ ವೇಳೆ ಉಪ ಮುಖ್ಯಮಂತ್ರಿಗಳು ಪಿಯುಸಿ ಮಂಡಳಿ ನಿರ್ದೇಶಕಿ ಸ್ನೇಹಾಲ್ ಅವರ ಜತೆ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿ ಮಾತುಕತೆ ನಡೆಸಿದರು. ಈ ಬಗ್ಗೆ ಅವರಿಂದ ಎಲ್ಲ ಮಾಹಿತಿಯನ್ನು ಪಡೆದುಕೊಂಡರು.
Key words: recruitment -order – college lecturers – soon – start college- DCM -Ashwath Narayan