ದೆಹಲಿ, ಡಿಸೆಂಬರ್ 29, 2019 (www.justkannada.in): ರಾಜಧಾನಿ ದೆಹಲಿಯಲ್ಲೀಗ ಮೈ ಕೊರೆಯುವ ಚಳಿ ಚಳಿ. ತಾಪಮಾನ ತೀವ್ರ ಇಳಿಮುಖ ಸ್ಥಿತಿಯಲ್ಲಿಯೇ ಮುಂದುವರಿದಿದೆ.
ಹೀಗಾಗಿ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ದೆಹಲಿಯಲ್ಲಿ ರೆಡ್ ಅಲರ್ಟ್ ಎಚ್ಚರಿಕೆ ಜಾರಿಗೊಳಿಸಿದೆ. ದೆಹಲಿಯ ಸಫ್ತರ್‍ಜಂಗ್ ಪ್ರದೇಶದಲ್ಲಿ ಇಂದು ಮುಂಜಾನೆ 6.10ರಲ್ಲಿ 3.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ದೆಹಲಿಯಾದ್ಯಂತ ದಟ್ಟ ಮಂಜಿನ ತೆರೆ ಆವರಿಸಿದ್ದು, ಸಫ್ದರ್‍ಜಂಗ್, ಪಲಂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾಹನ ಸವಾರರಿಗೆ ಮಬ್ಬು ದೃಷ್ಟಿ ಸಮಸ್ಯೆ ಎದುರಾಯಿತು. ಬೆಳಗ್ಗೆ 5.30ರಿಂದ ಬಿಸಿಲೇರುವ ತನಕ ಇದೇ ಪರಿಸ್ಥಿತಿ ಮುಂದುವರಿದಿತ್ತು.
ನಿನ್ನೆ ದೆಹಲಿಯ ಕೆಲವೆಡೆ ಸರಾಸರಿ ತಾಪಮಾನ 2 ಡಿಗ್ರಿ ಸೆಲ್ಸಿಯಸ್‍ಗಿಂತ ಕೆಳಮಟ್ಟಕ್ಕೆ ಇಳಿದು, ಉಷ್ಟಾಂಶ ಕುಸಿತದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು. ಅತ್ಯಂತ ಶೀತ ಮತ್ತು ಭಾರೀ ಚಳಿಯಿಂದ ದೆಹಲಿ ಜನರೆ ನಡುಗುವಂತಾಗಿದೆ.