ಬೆಂಗಳೂರು, ಮೇ 18, 2022 (www.justkannada.in): ಕಳೆದ ಮೂರು ವರ್ಷಗಳಲ್ಲಿ ಯಾವುದೇ ಹೊಸ ಬಸ್ಸುಗಳನ್ನು ಖರೀದಿಸದೇ ಇರುವ ಕಾರಣದಿಂದಾಗಿ ಹಾಗೂ ಶೇ.೪೦ಕ್ಕಿಂತ ಹೆಚ್ಚಿನ ಪ್ರಮಾಣದ ಹಾಲಿ ಬಸ್ಸುಗಳು ಸ್ಕ್ರ್ಯಾಪ್ ಗೊಂಡಿರುವ ಕಾರಣದಿಂದಾಗಿ ರಾಜ್ಯದ ಮೂರು ಪ್ರಾದೇಶಿಕ ಸಾರಿಗೆ ನಿಗಮಗಳು (ಆರ್ ಟಿಸಿಗಳು) ಗ್ರಾಮೀಣ ಭಾಗಗಳಿಗೆ ಸಾರಿಗೆ ಸೇವೆಗಳನ್ನು ತಲುಪಿಸುವಲ್ಲಿ ತೊಂದರೆ ಎದುರಿಸುತ್ತಿವೆ.
ಫೆಬ್ರವರಿ ೨೦೨೨ರಂದಿಗೆ ಕರ್ನಾಟಕದ ಸುಮಾರು ೨,೬೯೩ ಕಂದಾಯ ಗ್ರಾಮಗಳು ಸರ್ಕಾರಿ ಬಸ್ಸುಗಳ ಸೇವೆಗಳಿಂದ ವಂಚಿತಗೊಂಡಿವೆ.
17 ಜಿಲ್ಲೆಗಳಿಗೆ ಸೇವೆಗಳನ್ನು ಒದಗಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ), ಸರ್ಕಾರಿ ಬಸ್ ಸೌಲಭ್ಯ ಸೇವೆಗಳಿಂದ ವಂಚಿತವಾಗಿರುವ ಅತೀ ಹೆಚ್ಚಿನ ಸಂಖ್ಯೆಯ ಗ್ರಾಮಗಳನ್ನು (೨,೫೯೪) ಒಳಗೊಂಡಿವೆ. ಈ ಗ್ರಾಮಗಳ ಪೈಕಿ ೧,೩೨೨ ಗ್ರಾಮಗಳಿಗೆ ಖಾಸಗಿ ಬಸ್ ಸೇವೆಗಳಿದ್ದರೆ, ೩೦೬ ಗ್ರಾಮಗಳಿಗೆ ಸೂಕ್ತ ರಸ್ತೆಗಳ ಕೊರತೆಯಿಂದಾಗಿ ಯಾವುದೇ ಸಾರಿಗೆ ಸೇವೆ ಸೌಲಭ್ಯಗಳೇ ಇಲ್ಲವಾಗಿದೆ. ಉಳಿದ ೯೬೬ ಗ್ರಾಮಗಳು ವಿವಿಧ ಕಾರಣಗಳಿಂದಾಗಿ ಸಾರಿಗೆ ಸಂಪರ್ಕವಿಲ್ಲದೆ ತೊಂದರೆ ಎದುರಿಸುತ್ತಿವೆ.
ಕಿತ್ತೂರು ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಸಾರಿಗೆ ಸೇವೆಗಳನ್ನು ಒದಗಿಸುತ್ತಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಡಿ (ಎನ್ಡಬ್ಲೂಕೆಆರ್ ಟಿಸಿ), ಬಸ್ ಸೌಲಭ್ಯವಿಲ್ಲದಿರುವ ಅತೀ ಕಡಿಮೆ ಸಂಖ್ಯೆಯ (೪೯) ಗ್ರಾಮಗಳಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ಅಡಿ ೫೦ ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ. ಈ ಪೈಕಿ ಬಹುಪಾಲು ಗ್ರಾಮಗಳಿಗೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ.
ಈ ಮೂರೂ ನಿಗಮಗಳ ಬಳಿ, ಬಸ್ ಸಂಪರ್ಕದ ಕೊರತೆಯಿರುವಂತಹ ತಾಂಡಾಗಳು ಹಾಗೂ ಕುಗ್ರಾಮಗಳಂತಹ ಮಾನವ ವಾಸಸ್ತಾನಗಳ ಕುರಿತ ಯಾವುದೇ ದತ್ತಾಂಶವೇ ಇಲ್ಲ.
ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅವರು ಈ ಸಂಬಂಧ ಮಾತನಾಡಿ, ಈ ಗ್ರಾಮಗಳಿಗೆ ಹತ್ತಿರದ ಭವಿಷ್ಯದಲ್ಲಿಯೂ ಬಸ್ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ, ಏಕೆಂದರೆ ಕಳೆದ ಮೂರು ವರ್ಷಗಳಿಂದ ಯಾವುದೇ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯಾಗಿಲ್ಲ. “ಕೋವಿಡ್ ಹಾಗೂ ಇತರೆ ಕಾರಣಗಳಿಂದಾಗಿ ನಮಗೆ ಹೊಸ ಬಸ್ಸುಗಳನ್ನು ಖರೀದಿಸುವುದು ಸಾಧ್ಯವಾಗಿಲ್ಲ,” ಎಂದರು. ಜೊತೆಗೆ, ಕೆಎಸ್ ಆರ್ ಟಿಸಿ ಒಂದಕ್ಕೇ ಸಂಪರ್ಕರಹಿತ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಒಂದು ವರ್ಷಕ್ಕೆ ೧,೦೦೦ ಹೊಸ ಬಸ್ಸುಗಳ ಅಗತ್ಯವಿದೆ ಎಂದಿದ್ದಾರೆ.
ಕೆಆರ್ಟಿಸಿ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ಗಜೇಂದ್ರ ಕುಮಾರ್ ಅವರು ಮಾತನಾಡಿ, “ಬಸ್ಸುಗಳ ನಿಯಮಿತವಾದ ನಿರ್ವಹಣೆ ಹಾಗೂ ಬಿಡಿ ಭಾಗಗಳ ಬದಲಾವಣೆಯೊಂದಿಗೆ ನಾವು ಪ್ರಸ್ತುತ ೧೫ ಲಕ್ಷ ಕಿ.ಮೀ.ಗಳವರೆಗೆ ಮಾತ್ರ ಹೊಸ ಬಸ್ಸುಗಳನ್ನು ನಡೆಸುವುದು ಸಾಧ್ಯವಾಗುತ್ತಿದೆ,” ಎಂದರು.
“ಗ್ರಾಮಗಳಿಗೆ ಬಸ್ಸುಗಳ ಸಂಪರ್ಕದ ಸಮಸ್ಯೆಗೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವುದೊಂದೆ ಪರಿಹಾರವಾಗುವುದಿಲ್ಲ. ಜೊತೆಗೆ ಹೆಚ್ಚುವರಿ ಮಾನವ ಸಂಪನ್ಮೂಲವೂ ಬೇಕಾಗುತ್ತದೆ. ೨೦೧೭-೧೮ರಿಂದ ಕೆಎಸ್ಆರ್ಟಿಸಿ ಹೊಸ ಚಾಲಕರು ಹಾಗೂ ನಿರ್ವಾಹಕರ ನೇಮಕಾತಿ ಮಾಡಿಕೊಂಡಿಲ್ಲ,” ಎಂದು ಅನ್ಬುಕುಮಾರ್ ವಿವರಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Reduced – KSRTC –buses- villages – deprived – transport -services