ಬೆಂಗಳೂರು, ಜುಲೈ,6, 2022 (www.justkannada.in): ಕರ್ನಾಟಕದಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಪರಿಚಯಗೊಂಡು ಒಂದು ದಶಕವೇ ಕಳೆದಿದೆ. ಆದರೆ ಈಗಲೂ ಸಹ ಸಾರ್ವಜನಿಕ ಶಿಕ್ಷಣ ಇಲಾಖೆ (ಡಿಡಿಪಿಐ) ಈ ಕಾಯ್ದೆಯಡಿ ಶಾಲೆಗಳಿಗೆ ಒದಗಿಸಬೇಕಾಗಿರುವ ಹಣ ಮರುಪಾವತಿ ವ್ಯವಸ್ಥೆಯನ್ನು ಸರಿಪಡಿಸುವುದು ಬಾಕಿ ಉಳಿದಿದೆ.
ಬೆಂಗಳೂರು ನಗರದಾದ್ಯಂತ ಅನೇಕ ಅನುದಾನರಹಿತ ಶಾಲೆಗಳ ಪ್ರತಿನಿಧಿಗಳು ತಿಳಿಸಿರುವ ಪ್ರಕಾರ ಆರ್ ಟಿಇ ಕಾಯ್ದೆಯಡಿ ಕಳೆದ ಶೈಕ್ಷಣಿಕ ವರ್ಷದ (೨೦೨೧-೨೨) ಹಣ ಮರುಪಾವತಿ ಇನ್ನೂ ಬಂದಿಲ್ಲವಂತೆ.
ಕರ್ನಾಟಕ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ಸಂಘದ ಪ್ರಕಾರ ನಗರದಲ್ಲಿರುವ ಶೇ.೮೦ರಷ್ಟು ಶಾಲೆಗಳಿಗೆ ಇನ್ನೂ ಕಳೆದ ಶೈಕ್ಷಣಿಕ ವರ್ಷದ ಮರುಪಾವತಿ ಮೊತ್ತ ಇನ್ನೂ ದೊರೆತಿಲ್ಲ. ಇದರಿಂದ ಶಾಲೆಗಳ ಆಡಳಿತ ಮಂಡಳಿಗಳಿಗೆ ಬಹಳ ಅನಾನುಕೂಲವಾಗಿದೆ, ಅದರಲ್ಲಿಯೂ ವಿಶೇಷವಾಗಿ ಕೋವಿಡ್-19ರ ನಂತರ ಆಫ್ ಲೈನ್ ತರಗತಿಗಳು ಆರಂಭವಾದ ನಂತರ ತೊಂದರೆಗಳು ಹೆಚ್ಚಾಗಿವೆ.
“ಕಳೆದ ಶೈಕ್ಷಣಿಕ ವರ್ಷದಲ್ಲಿ ನಮಗೆ ಒಂದೇ ಒಂದು ಕಂತಿನ ಮರಪಾವತಿ ಹಣವೂ ಲಭಿಸಿಲ್ಲ. ನಮ್ಮ ಶಾಲೆಯಲ್ಲಿ ೬೦ ಆರ್ಟಿಇ ವಿದ್ಯಾರ್ಥಿಗಳಿದ್ದಾರೆ. ಎಲ್ಲವನ್ನೂ ಒಟ್ಟುಗೂಡಿಸಿದರೆ ನಮಗೆ ಶಿಕ್ಷಣ ಇಲಾಖೆಯಿಂದ ಆರ್ಟಿಇ ಯೋಜನೆಯಡಿ ರೂ.೯ ಲಕ್ಷ ಬರಬೇಕಿದೆ,” ಎನ್ನುತ್ತಾರೆ ಹೊಸೂರು ರಸ್ತೆಯಲ್ಲಿರುವ ಕಾವೇರಿ ವಿದ್ಯಾಕ್ಷೇತ್ರಂ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಗಿರೀಶ್ ಎಸ್.ಎ.
ಮಾಧ್ಯಮದೊಂದಿಗೆ ಮಾತನಾಡಿದ ಶಾಲೆಯ ಅಧಿಕಾರಿಗಳು, ಹಣ ಮರುಪಾವತಿ ಕುರಿತು ಇಲಾಖೆ ನಮಗೆ ಯಾವುದೇ ಸಮಯಾವಕಾಶವನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.
ಬಸವೇಶ್ವರ ಪ್ರೌಢಶಾಲೆಯ ಪ್ರಾಂಶುಪಾಲ ರಂಗಲಕ್ಷ್ಮಿ ಅವರ ಪ್ರಕಾರ, ಅವರ ಶಾಲೆಯಲ್ಲಿ ಆರ್ಟಿಇ ಯೋಜನೆಯಡಿ ೨೯ ವಿದ್ಯಾರ್ಥಿಗಳು ಓದುತ್ತಿದ್ದು, ಕಳೆದ ಶೈಕ್ಷಣಿಕ ವರ್ಷದಲ್ಲಿ ಇಲಾಖೆ ಇವರ ಶಾಲೆಗೆ ರೂ.೩.೮೫ ಲಕ್ಷ ನೀಡಬೇಕಿತ್ತಂತೆ, ಆದರೆ ಈವರೆಗೂ ಮೊದಲನೇ ಕಂತಿನ ಹಣವೂ ಇವರಿಗೆ ತಲುಪಿಲ್ಲ.
“ನಾವು ಫೆಬ್ರವರಿಯಲ್ಲಿ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದೆವು. ಆಗ ಅವರು ನಮಗೆ ನೀವು ಸರತಿ ಸಾಲಿನಲ್ಲಿ ಇದ್ದೀರಿ, ನಿಮ್ಮ ಸರದಿಗಾಗಿ ಕಾಯಿರಿ,” ಎಂದರು ಎಂದು ರಂಗಲಕ್ಷ್ಮಿ ಅವರು ತಿಳಿಸಿದರು.
ಆರ್ಟಿಇ ಕಾಯ್ದೆಯಡಿ, ನರ್ಸರಿ ಕಲಿಯುತ್ತಿರುವ ಒಂದು ಆರ್ಟಿಇ ಮಗುವಿಗೆ ರೂ.೮,೦೦೦ ಹಾಗೂ ಮೇಲ್ಮಟ್ಟದ ತರಗತಿಗಳಿಗೆ ರೂ.೧೬,೦೦೦ ಇಲಾಖೆ ನೀಡಬೇಕಾಗುತ್ತದೆ; ಜೂನ್ ತಿಂಗಳಲ್ಲಿ ಶಾಲೆಗಳಿಗೆ ಮೊದಲ ಕಂತು ತಲುಪಬೇಕು. ಅದೇ ರೀತಿಯ ಪ್ರತಿ ಶೈಕ್ಷಣಿಕ ವರ್ಷದ ಜನವರಿಯಲ್ಲಿ ಎರಡನೇ ಕಂತು ತಲುಪಬೇಕು. “ನಮ್ಮ ಶಾಲೆಯಲ್ಲಿ ಆರ್ ಟಿಇ ಕೋಟಾದಡಿ ೮೪ ವಿದ್ಯಾರ್ಥಿಗಳಿದ್ದು, ನಮಗೆ ಸರ್ಕಾರದಿಂದ ರೂ.೧೧ ಲಕ್ಷ ಬರಬೇಕಿದೆ. ಮೊದಲ ಕಂತಿನ ಹಣ ಮರುಪಾವತಿಯಾಗಿದ್ದು, ಎರಡನೆ ಕಂತು ಇನ್ನೂ ಬರಬೇಕಿದೆ. ಪ್ರಸ್ತುತ, ಆಫ್ ಲೈನ್ ತರಗತಿಗಳು ಆರಂಭವಾಗಿದ್ದು, ಪೋಷಕರು ಶುಲ್ಕವನ್ನು ಪಾವತಿಸಲಾರಂಭಿಸಿದ್ದಾರೆ, ಎಲ್ಲವೂ ಸರಿಯಾಗಿ ನಡೆಯುತ್ತಿದೆ. ಆದರೆ ಕಳೆದ ವರ್ಷ ಪರಿಸ್ಥಿತಿ ಬಹಳ ಕಠಿಣವಾಗಿತ್ತು,” ಎನ್ನುವುದು ವಿದ್ಯಾ ವೈಭವ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಕಿರಣ್ ಪ್ರಸಾದ್ ಅವರ ಅಭಿಪ್ರಾಯವಾಗಿದೆ.
ಶಾಲೆಗಳ ಆಡಳಿತ ಅಧಿಕಾರಿಗಳ ಪ್ರಕಾರ, ಶಿಕ್ಷಕರಿಗೆ ವೇತನ ಪಾವತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸುವ ಗುತ್ತಿಗೆದಾರರಿಗೆ ನೀಡುವ ಹಣದಂತಹ ದೈನಂದಿನ ಚಟುವಟಿಕೆಗಳ ಮೇಲೆ ಹಣಕಾಸಿನ ಕೊರತೆ ಪರಿಣಾಮ ಬೀರುತ್ತಿದೆಯಂತೆ. “ನಮ್ಮಂತಹ ಚಿಕ್ಕ ಶಾಲೆಗೆ ರೂ.೯ ಲಕ್ಷ ಬಹಳ ದೊಡ್ಡ ಮೊತ್ತ. ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಪರಿಣಾಮವನ್ನು ಇನ್ನೂ ಅನುಭವಿಸುತ್ತಿದ್ದೇವೆ. ನಮ್ಮ ಶಾಲೆಯ ವಿವಿಧ ಕೆಲಸಗಳನ್ನು ನಿರ್ವಹಿಸಲು ನಾವು ಹಣ ಸಾಲ ಪಡೆಯುತ್ತಿದ್ದೇವೆ. ಮೇಲಾಗಿ, ನಮ್ಮ ಸಿಬ್ಬಂದಿಗಳಿಗೆ ಪೂರ್ಣ ವೇತನವನ್ನು ಇನ್ನೂ ನೀಡಿಲ್ಲ. ಶಿಕ್ಷಕರಿಗೂ ಇನ್ನೂ ವೇತನ ಸಂಪೂರ್ಣವಾಗಿ ನೀಡಿಲ್ಲ. ಶಾಲೆಯ ಮೂಲಭೂತ ಸೌಕರ್ಯಗಳನ್ನು ನಿರ್ವಹಿಸುವ ಗುತ್ತಿಗೆದಾರರಿಗೆ ಇನ್ನೂ ಹಣ ಪಾವತಿಸುವುದಿದೆ,” ಎಂದು ಗಿರೀಶ್ ತಮ್ಮ ಸಂಕಟವನ್ನು ಹಂಚಿಕೊಂಡಿದ್ದಾರೆ.
ಶಾಲಾ ಆಡಳಿತಗಾರ ಪ್ರಕಾರ, ಇಂತಹ ವಿಳಂಬಗಳಿಗೆ ಒಂದು ದಂಡ ವಿಧಿಸುವ ಪದ್ಧತಿಯೂ ಇರಬೇಕಂತೆ. ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಸಂಘದ ಕಾರ್ಯದರ್ಶಿ ಡಿ. ಶಶಿ ಕುಮಾರ್ ಅವರ ಪ್ರಕಾರ ಡಿಡಿಪಿಐ ಹಾಗೂ ಬಿಇಒ ಕಚೇರಿಗಳ ನಡುವೆ ಸಂಪೂರ್ಣ ಸಂಯೋಜನೆ ಕೊರತೆಯಿದೆ, ಇದರಿಂದಾಗಿಯೇ ಮರುಪಾವತಿ ವಿಳಂಬವಾಗುತ್ತಿದೆಯಂತೆ. “ಸರ್ಕಾರದಿಂದ ಸಾಕಷ್ಟು ಹಣ ಹಂಚಿಕೆ ಆಗಿದ್ದರೂ ಸಹ ಬಿಇಒಗಳು ಶಾಲೆಗಳಿಗೆ ಹಣ ಹಂಚಲು ವಿಫಲರಾಗಿದ್ದಾರೆ. ಇದೊಂದು ಆವರ್ತ ವೆಚ್ಚವಾಗಿದ್ದು, ಪಾವತಿ ವಿಳಂಬವಾದರೆ ಶಾಲೆಗಳಿಗೆ ಹೊರೆಯಾಗುತ್ತದೆ. ಇದರಿಂದಾಗಿ ಇತರೆ ವಿದ್ಯಾರ್ಥಿಗಳ ಮೇಲಿನ ಹೊರೆ ಹೆಚ್ಚುತ್ತದೆ,” ಎಂದು ಕುಮಾರ್ ತಿಳಿಸಿದ್ದಾರೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Refunds – schools- under – RTE Act – still- pending.