ಬೆಳಗಾವಿ,ಅ,4,2019(www.justkannada.in): ನೆರೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿಲ್ಲ. ವರದಿ ಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ ಅಷ್ಟೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಪ್ರವಾಹ ಪರಿಹಾರ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೂ, ಕೇಂದ್ರದ ವರದಿಗೂ ತಾಳೆಯಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಅಂಕಿ ಅಂಶಗಳ ಪರಿಶೀಲನೆ ಮಾಡಬೇಕು ಎಂದು ಹೇಳಿದೆ. ವರದಿ ಪರಿಶೀಲನೆಗೆ ಅಮಿತ್ ಶಾ ರಾಜ್ಯದ ಅಧಿಕಾರಿಗಳನ್ನ ಕರೆಸಿಕೊಂಡಿದ್ದಾರೆ. ಪ್ರಸ್ತಾವನೆ ತಿರಸ್ಕರಿಸಿದೆ ಎಂದು ಹೇಳಿರುವುದು ಸುಳ್ಳು ಎಂದು ಸಮರ್ಥಿಸಿಕೊಂಡರು.
ನೆರೆ ಪರಿಹಾರ ಸಂಬಂಧ ಈಗಾಗಲೇ ಎಲ್ಲಾ ಕೇಂದ್ರ ಸಚಿವರ ಜೊತೆಗೂ ಮಾತುಕತೆ ನಡೆಸಿದ್ದೇನೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಪರಿಹಾರ ಬಿಡುಗಡೆಯಾಗಲಿದೆ. ದೇಶದ ನೆರೆ ಪೀಡಿತ ಯಾವುದೇ ರಾಜ್ಯಗಳಿಗೂ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ ಎಂದರು.
ಹಾಗೆಯೇ ರಾಜ್ಯದ ಬೊಕ್ಕಸ ಇನ್ನೂ ಖಾಲಿಯಾಗಿಲ್ಲ. ಖಾಲಿಯಾಗಿದ್ದರೇ ಪರಿಹಾರ ನೀಡಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ನೀಡುವ ವಿಶ್ವಾಸವಿದೆ ಸಿಎಂ ಬಿಎಸ್ ವೈ ತಿಳಿಸಿದರು.
Key words: Rejection –flood-compensation- center-CM BS yeddyurappa