ಬೆಂಗಳೂರು,ಜೂನ್,30,2023(www.justkannada.in): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೊದಲ ತಿಂಗಳ ವರ್ಕ್ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ.
ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಇಲಾಖೆಯಲ್ಲಿ ತಾವು ಜವಾಬ್ದಾರಿ ವಹಿಸಿಕೊಂಡ ನಂತರದಿಂದ ಮಾಡಿರುವ ಎಲ್ಲಾ ಸಭೆ ಹಾಗೂ ಕೆಲಸಗಳ ಪಟ್ಟಿ ಮಾಡಿ ವರ್ಕ್ ರಿಪೋರ್ಟ್ ಅನ್ನು ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಂತಹ ಬೃಹತ್ ಇಲಾಖೆ ಜೊತೆಗೆ ಐಟಿಬಿಟಿ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಬೇಕಿರುವ ದೊಡ್ಡ ಜವಾಬ್ದಾರಿಯೂ ನನ್ನ ಮೇಲಿದೆ, ಈ ಹಿನ್ನಲೆಯಲ್ಲಿ ನಮ್ಮ ಇಲಾಖೆಯನ್ನು ಜನಸ್ನೇಹಿಯಾಗಿಸಲು, ಸರಳೀಕರಣಗೊಳಿಸಲು ಹಾಗೂ ಸಬಲೀಕರಣಗೊಳಿಸಲುಸಮಗ್ರ ಕಾರ್ಯನಿರ್ವಹಣೆಯನ್ನು ಕೇಂದ್ರೀಕರಿಸಲಾಗಿದೆ. ಇಲಾಖೆಯ ಪ್ರತಿಯೊಂದು ಕಾರ್ಯದಲ್ಲಿಯೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ನಾನು ಈ ಮೊದಲ ತಿಂಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತಿದ್ದೇನೆ. ಇದನ್ನು ಪ್ರತಿ ತಿಂಗಳು ಮುಂದುವರೆಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ಈ ರಿಪೋರ್ಟ್ ಕಾರ್ಡ್ ನಲ್ಲಿ ನಾನು ಸರ್ಕಾರದ ಮಟ್ಟದಲ್ಲಿ ನಡೆಸಿದ ಸಭೆಗಳು ಹಾಗೂ ಕೈಗೊಂಡ ಪ್ರಮುಖ ನಿರ್ಧಾರಗಳ ಮಾಹಿತಿಯನ್ನು ಒಳಗೊಂಡಿರಲಿದೆ. ಈ ನಿಟ್ಟಿನಲ್ಲಿ ಈ ಎರಡೂ ಇಲಾಖೆಯನ್ನು ಜನರ ಬಳಿಗೆ ಕರೆದೊಯ್ಯಲು ನಿಮ್ಮೆಲ್ಲರ ಸಹನೆ, ಸಹಕಾರ ಹಾಗೂ ಬಹುಮುಖ್ಯವಾಗಿ ಸಲಹೆಗಳು ಅತ್ಯಗತ್ಯ ಎಂದೂ ಈ ಮೂಲಕ ಕೋರಿಕೊಳ್ಳುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
Key words: Release – first month -work report – Rural Development- Minister -Priyank Kharge.