ಮೈಸೂರು.ನವೆಂಬರ್,17,2020(www.justkannada.in): ಕಾಡುಗಳ್ಳ, ನರಹಂತಕ ವೀರಪ್ಪನ್ ನ ಅಟ್ಟಹಾಸ, ಆತನ ವಿರುದ್ಧದ ಪೊಲೀಸ್ ಕಾರ್ಯಾಚರಣೆ, ಆತನ ಹತ್ಯೆ ಕುರಿತು ಮತ್ತೊಂದು ಪುಸ್ತಕ ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಸಾಹಿತಿ, ಅಂಕಣಕಾರ ಡಾ.ಡಿ.ವಿ.ಗುರುಪ್ರಸಾದ್ ಈ ಕೃತಿಯನ್ನು ರಚಿಸಿದ್ದಾರೆ. ದಂತಕಥೆಯಾದ ದಂತಚೋರ ಎಂಬ ಈ ಕೃತಿಯಲ್ಲಿ ವೀರಪ್ಪನ್ ಬಾಲ್ಯದಿಂದ ಹಿಡಿದು ಆತ ಹತನಾಗುವವರೆಗಿನ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಸುಮಾರು 340 ಪುಟಗಳ ಈ ಕೃತಿಯನ್ನು ಸಪ್ನಾ ಬುಕ್ ಹೌಸ್ ಹೊರ ತಂದಿದೆ. ಆನ್ಲೈನ್ನಲ್ಲಿಈ ಪುಸ್ತಕ ಈಗಾಗಲೇ ಲಭ್ಯವಿದೆ. ಈ ಪುಸ್ತಕದ ಬೆಲೆ 250 ರೂಪಾಯಿಗಳು.
ವೀರಪ್ಪನ್ ದುಷ್ಕೃತ್ಯಗಳು, ಆತನನ್ನು ಸೆರೆ ಹಿಡಿಯುವ ಕಾರ್ಯಾಚರಣೆ, ಇನ್ನೇನು ವೀರಪ್ಪನ್ ಸೆರೆ ಸಿಕ್ಕ ಇಲ್ಲವೇ ಹೊಡೆದುರುಳಿಸಬೇಕೆನ್ನುವಷ್ಟರಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾದ ಪೊಲೀಸರು, ವೀರಪ್ಪನ್ ಹತ್ಯೆಗೈದ ಕಾರ್ಯಾಚರಣೆ ಹೀಗೆ ವಿವಿಧ ಚಿತ್ರಣವನ್ನು ಇಲ್ಲಿ ನೀಡಲಾಗಿದೆ. ಈ ಎಲ್ಲ ಚಿತ್ರಣವನ್ನು ಪ್ರತ್ಯಕ್ಷದರ್ಶಿಗಳು, ಕಾರ್ಯಾಚರಣೆ ನಡೆಸಿದ ಪೊಲೀಸರ ಹೇಳಿಕೆ , ಪೊಲೀಸ್ ದಾಖಲೆಗಳ ಮೂಲಕವೇ ಮುಂದಿಡಲಾಗಿದೆ. ವೀರಪ್ಪನ್ನಿಂದ ಹತ್ಯೆಗೀಡಾದ ಎಲ್ಲ ಹುತಾತ್ಮರಿಗೆ ಈ ಕೃತಿಯನ್ನು ಅರ್ಪಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಸಚಿವ ಸುರೇಶ್ಕುಮಾರ್ ಈ ಕೃತಿ ಕುರಿತು ಹೀಗೆ ಹೇಳುತ್ತಾರೆ-
ನಾನು ಇದುವರೆವಿಗೂ ವೀರಪ್ಪನ್ ಕುರಿತು ಪೊಲೀಸ್ ಅಧಿಕಾರಿಗಳಾದ ದಿನಕರ್, ವಿಜಯಕುಮಾರ್, ಬಿ.ಬಿ.ಅಶೋಕ್ಕುಮಾರ್ ಅವರು ಬರೆದಿರುವ ಪುಸ್ತಕಗಳನ್ನು ಓದಿದ್ದೇನೆ. ಆದರೆ, ಈ ಪುಸ್ತಕ ವಿಶಿಷ್ಟವಾಗಿದೆ. ಯಾವುದೇ ರಾಗ-ದ್ವೇಷವಿಲ್ಲದೇ ವೀರಪ್ಪನ್ನ ವ್ಯಕ್ತಿತ್ವವನ್ನು ಅವನ ಓರೆ-ಕೋರೆಗಳ ಸಹಿತ ನಮ್ಮ ಮುಂದೆ ಪ್ರಸ್ತುತಪಡಿಸಿರುವ ಪುಸ್ತಕವಿದು ಎಂದಿದ್ದಾರೆ.
ಈ ಕೃತಿಯನ್ನು ಓದಿರುವ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ ಅವರು ಕೃತಿ ಕುರಿತು ತಮ್ಮ ಅನಿಸಿಕೆಯನ್ನು ದಾಖಲಿಸಿದ್ದಾರೆ. ಅತ್ಯಂತ ನಿರುದ್ವಿಗ್ನವಾಗಿ ಓದುಗನಿಗೆ ಸಾಹಿತ್ಯಿಕವಾಗಿ ಸಂತೋಷಕರವಾಗುವ ರೀತಿಯಲ್ಲಿಡಾ.ಗುರುಪ್ರಸಾದ್ ಈ ಕೃತಿ ಬರೆದಿದ್ದಾರೆ. ಒಬ್ಬ ಬರಹಗಾರನಿಗೆ ನಿರುದ್ವಿಗ್ನತೆಯನ್ನು ಸಾಧಿಸುವುದು ಕಷ್ಟ. ಆದರೆ, ಗುರುಪ್ರಸಾದ್ ದೂರದಲ್ಲಿನಿಂತು ನೋಡುವ ಒಬ್ಬ ಪೊಲೀಸ್ ಅಧಿಕಾರಿಯಾಗಿ, ಒಬ್ಬ ವೀಕ್ಷಕನಾಗಿ ಆ ನಿರುದ್ವಿಗ್ನತೆಯನ್ನು ತಮ್ಮ ಮಾನವೀಯ ಹೃದಯದಲ್ಲಿನೆಲೆಸಿಕೊಂಡು ಈ ಕಥೆಯನ್ನು ಹೇಳಿದ್ದಾರೆ ಎಂದು ಟಿ.ಎನ್.ಸೀತಾರಾಮನ್ ತಮ್ಮ ಅನಿಸಿಕೆಯನ್ನು ಕೃತಿಯಲ್ಲಿದಾಖಲಿಸಿದ್ದಾರೆ.
ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ವೀರಪ್ಪನ್ ಅಟ್ಟಹಾಸ ಹಾಗೂ ಆತನ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಸುಮಾರು 10 ವರ್ಷಗಳ ಕಾಲ ಸಂಯುಕ್ತ ಕರ್ನಾಟಕ ಹಾಗೂ ಕನ್ನಡಪ್ರಭ ಪತ್ರಿಕೆಗಳಿಗೆ ಮೈಸೂರು ಜಿಲ್ಲಾವರದಿಗಾರನಾಗಿ ಹತ್ತಿರದಿಂದ ವರದಿ ಮಾಡಿರುವ ಅವರು ಈ ಕೃತಿ ಕುರಿತು ಹೀಗೆ ಹೇಳುತ್ತಾರೆ-
ವೀರಪ್ಪನ್ ಇನ್ನೇನು ಸೆರೆ ಸಿಕ್ಕ ಇಲ್ಲವೇ ಕೊಂದು ಹಾಕಬಹುದು ಎಂಬಂತಹ ಸನ್ನಿವೇಶದಲ್ಲಿ ಪೊಲೀಸರು ಹೇಗೆ ಎಡವಿದರು ಎಂಬುದನ್ನು ಈ ಕೃತಿಯಲ್ಲಿ ಪೊಲೀಸರ ಹೇಳಿಕೆಗಳಿಂದಲೇ ಗೊತ್ತಾಗುತ್ತದೆ. ಹೀಗಾಗಿ, ಭವಿಷ್ಯದಲ್ಲಿ ಇಂತಹ ಸನ್ನಿವೇಶದಲ್ಲಿಯಾವ ತಪ್ಪುಗಳನ್ನು ಮಾಡಬಾರದು ಎಂದು ಪೊಲೀಸರಿಗೆ ತಿಳಿಸಿಕೊಡುವ ಕಾರ್ಯವನ್ನು ಈ ಕೃತಿ ಮಾಡಿದೆ ಎಂದು ಹೇಳಿದ್ದಾರೆ.
ಮೂಲತಃ ಆನೆಗಳ ಬೇಟೆಗಾರನಾಗಿದ್ದ ವೀರಪ್ಪನ್ ತನ್ನ ಬೇಟೆಯ ತಂತ್ರವನ್ನು ಮಾನವನ ವಿರುದ್ಧವೂ ಹೇಗೆ ಬಳಸಿದ ಎಂಬುದನ್ನು ಈ ಕೃತಿಯಲ್ಲಿದಾಖಲಿಸಲಾಗಿದೆ. ವೀರಪ್ಪನ್ ಎದುರಾಳಿಗಳನ್ನು ನೇರವಾಗಿ ಎದುರಿಸದೇ ಮರೆಯಲ್ಲಿಕುಳಿತು ಏಕಾಏಕಿ ದಾಳಿ ಮಾಡುತ್ತಿದುದ್ದನ್ನು ಘಟನೆಗಳ ಸಮೇತ ಇಲ್ಲಿವಿವರಿಸಲಾಗಿದೆ. ಇಂತಹ ಸನ್ನಿವೇಶಗಳು ಭವಿಷ್ಯದಲ್ಲಿಪೊಲೀಸರಿಗೆ ಹಂತಕರನ್ನು ಸೆರೆ ಹಿಡಿಯುವ ಕಾರ್ಯದಲ್ಲಿಮುನ್ನೆಚರಿಕೆಯ ಪಾಠವಾಗಿದೆ ಎಂದು ತಮ್ಮ ಮುನ್ನುಡಿಯಲ್ಲಿಡಾ. ಕೂಡ್ಲಿಗುರುರಾಜ ಹೇಳಿದ್ದಾರೆ.
ಲೇಖಕ ಡಾ. ಡಿ.ವಿ.ಗುರುಪ್ರಸಾದ್ ಈ ಕೃತಿಯಲ್ಲಿ ಹೀಗೆ ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ- ಪುಸ್ತಕ ಬರೆಯುವ ಮುನ್ನ ಸುಮಾರು ಒಂದೂವರೆ ವರ್ಷಗಳ ಕಾಲ ಸಂಶೋಧನೆಯನ್ನು ನಡೆಸಿದೆ. ವೀರಪ್ಪನ್ ಒಡನಾಡಿಗಳು, ಕುಟುಂಬ, ಅವನ ವಿರುದ್ಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಮತ್ತು ತಮಿಳುನಾಡಿನ ಹಲವಾರು ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಸಂದರ್ಶನವನ್ನು ಮಾಡಿದೆ. ಅವನು ಹುಟ್ಟಿದ ಊರಿನಿಂದ ಹಿಡಿದು ಆತ ಚಿರನಿದ್ರೆಯಲ್ಲಿದ್ದ ಸ್ಥಳವನ್ನೂ, ಆತನ ವಿರುದ್ಧ ಕಾರ್ಯಾಚರಣೆ ನಡೆದಿದ್ದ ಸರಿಸುಮಾರು ಎಲ್ಲಜಾಗಗಳಿಗೂ ಭೇಟಿ ನೀಡಿದೆ. ಈ ಸಂಶೋಧನೆಯ ಫಲವಾಗಿ ಮೂಡಿ ಬಂದಿರುವುದೇ ದಂತಕಥೆಯಾದ ದಂತಚೋರ ಎಂಬ ಈ ಪುಸ್ತಕ ಎಂದು ಡಾ.ಗುರುಪ್ರಸಾದ್ ತಿಳಿಸಿದ್ದಾರೆ.
Key words: Released – dantakatheyada danthachora-book –market- mysore