ವಿಜಯಪುರ, ಮಾರ್ಚ್,1,2021(www.justkannada.in): ಪ್ರಸಕ್ತ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿದ್ದರೂ ಕಾಮಗಾರಿ ನಡೆಯದಿರುವುದಕ್ಕೆ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸ್ಯಾಂಖಿಕ ಸಚಿವ ಡಾ. ನಾರಾಯಣಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಇಂದು ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ನಾರಾಯಣಗೌಡ, ಅಧಿಕಾರಿಗಳ ನಿಷ್ಕ್ರೀಯತೆಗೆ ಚಾಟಿ ಬೀಸಿದರು. ಹಿಂದಿನ ಸಾಲಿನ 12 ಕೋಟಿ ರೂ. ಅನುದಾನ ಬಳಕೆಯಾಗದೆ ಇರುವುದನ್ನು ಗಮನಿಸಿದ ಸಚಿವ ನಾರಾಯಣಗೌಡ, ಅಧಿಕಾರಿಗಳಿಗೆ ಬೊಟ್ಟು ಮಾಡಿ ತೋರಿಸಿದರು. ಕೆಲವೇ ದಿನಗಳಲ್ಲಿ ಆರ್ಥಿಕ ವರ್ಷವೇ ಮುಗಿಯುತ್ತದೆ. ಆದರೂ ಅನುದಾನ ಬಳಸದೆ ಉಳಿಸಿಕೊಂಡಿದ್ದೀರಿ. ಹೀಗೆ ಮಾಡಿದರೆ ಮುಂದಿನ ಸಾಲಿನ ಅನುದಾನ ಪಡೆಯಲು ಕಷ್ಟವಾಗುತ್ತದೆ. ತಕ್ಷಣವೇ ಅನುದಾನ ಬಳಕೆ ಆಗುವಂತೆ ಕ್ರಮವಹಿಸಿ ಎಂದು ಸೂಚಿಸಿದರು.
ಪ್ರಸಕ್ತ ಸಾಲಿನಲ್ಲಿ ವಿಧಾನ ಪರಿಷತ್ ಸದಸ್ಯರೂ ಸೇರಿದಂತೆ ಒಟ್ಟು 11 ಶಾಸಕರ ಪೈಕಿ, ಕೇವಲ ನಾಲ್ವರು ಶಾಸಕರು ಮಾತ್ರ ಅನುದಾನ ಬಳಕೆಗೆ ಕ್ರಿಯಾಯೋಜನೆ ನೀಡಿದ್ದಾರೆ. ಇನ್ನೂ 7 ಜನ ಶಾಸಕರು ಕ್ರೀಯಾಯೋಜನೆ ನೀಡಬೇಕಾಗಿದೆ. ಅಧಿಕಾರಿಗಳು ಈ ಬಗ್ಗೆ ಶಾಸಕರನ್ನ ಯಾಕೆ ಸಂಪರ್ಕಿಸಿಲ್ಲ ಎಂದು ಸಚಿವ ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಶಾಸಕರನ್ನ ಸಂಪರ್ಕಿಸಿ, ಕ್ರಿಯಾಯೋಜನೆ ಪಡೆದು ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಅನುದಾನ ಹಿಂಪಡೆಯುವುದಾಗಿ ಸಚಿವ ಡಾ. ನಾರಾಯಣಗೌಡ ಎಚ್ಚರಿಸಿದರು.
ಪಿ.ಡಿ. ಖಾತೆಯಿಂದ ಹಿಂಪಡೆಯುವ ಬಗ್ಗೆ ಯೋಚನೆ.!
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಬಿಡುಗಡೆಯಾಗುವ ಅನುದಾನವನ್ನು ಆಯಾ ವರ್ಷವೇ ವೆಚ್ಚ ಮಾಡದೆ, ಪಿ.ಡಿ. ಖಾತೆಯಲ್ಲಿ ಇಡುತ್ತಿದ್ದು, ಅನುದಾನದ ಬಳಕೆಗೆ ಮಂದಗತಿಯ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಆಯಾವರ್ಷ ನೀಡುವ ಅನುದಾನವನ್ನು ಪಿ.ಡಿ. ಖಾತೆಯಲ್ಲಿ ಇಡದೇ ಮಾರ್ಚ್ ಅಂತ್ಯದೊಳಗೆ ಬಳಸುವಂತೆ, ಇಲ್ಲದಿದ್ದಲ್ಲಿ ಬಿಡುಗಡೆಯಾದ ಅನುದಾನವನ್ನು ವ್ಯಪಗತ ಅಥವಾ ಹಿಂಪಡೆಯುವ ಬಗ್ಗೆ ಯೋಚಿಸಲಾಗಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರವೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕ್ರೀಡಾ ಇಲಾಖೆಗೆ ಜಿಲ್ಲಾ ಪಂಚಾಯತ್ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇ. 63 ರಷ್ಟು ಮಾತ್ರ ಬಳಕೆಯಾಗಿರುವುದನ್ನು ಗಮನಿಸಿದ ಸಚಿವ ನಾರಾಯಣಗೌಡ, ಆರ್ಥಿಕ ವರ್ಷ ಮುಗಿಯಲು 20 ದಿನಗಳು ಮಾತ್ರ ಬಾಕಿ ಇದ್ದು, ಅಷ್ಟರೊಳಗೆ ಶೇ. 100 ರಷ್ಟು ವೆಚ್ಚವಾಗಬೇಕು. ಯಾವುದಾದರು ಲೆಕ್ಕ ಶೀರ್ಷಿಕೆಯಲ್ಲಿ ಅನುದಾನ ಉಳಿತಾಯವಾದಲ್ಲಿ ಆ ಅನುದಾನ ವ್ಯಪಗತಮಾಡದಂತೆ ಮರು ಹೊಂದಾಣಿಕೆ ಮೂಲಕ ಕ್ರೀಡಾ ವಿದ್ಯಾರ್ಥಿ ನಿಲಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು. ನಿಗದಿತ ಅವಧಿಯೊಳಗೆ ಸಂಪೂರ್ಣ ವೆಚ್ಚ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಸುನೀಲ್ ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥರಿದ್ದರು.
Key words: Released –grant- no work-Minister- Narayana Gowda – officer-vijayapur