ಬೆಂಗಳೂರು,ಮೇ,30,2023(www.justkannada.in): ಸಿಎಂ ಸಿದ್ದರಾಮಯ್ಯ ಅವರಿಗೆ ಜೀವಬೆದರಿಕೆ ಹಾಕಿದ ಆರೋಪದಡಿ ಶಾಸಕ ಅಶ್ವತ್ಥ್ ನಾರಾಯಣ್ ವಿರುದ್ಧ ಮೈಸೂರಿನ ದೇವರಾಜ ಠಾಣೆಯಲ್ಲಿ ದಾಖಲಾಗಿದ್ದ ಎಫ್ ಐಆರ್ ಗೆ ಹೈಕೋರ್ಟ್ ತಡೆ ನೀಡಿದೆ.
ಈ ಮೂಲಕ ಶಾಸಕ ಅಶ್ವಥ್ ನಾರಾಯಣ್ ಗೆ ರಿಲೀಫ್ ಸಿಕ್ಕಂತಾಗಿದೆ. ಮುಂದಿನ ವಿಚಾರಣೆಯನ್ನು 4 ವಾರಗಳಿಗೆ ಮುಂದೂಡಿ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಲಾಗಿದ್ದು, ಬಂಧನ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಬಂಧನ ವಿಚಾರವೇ ಇಲ್ಲ, ತನಿಖೆ ನಡೆಯಲಿ ಎಂದು ಸರ್ಕಾರದ ವಕೀಲರು ಹೇಳಿಕೆ ನೀಡಿದ್ದಾರೆ.
ಶಾಸಕ ಅಶ್ವಥ್ ನಾರಾಯಣ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ವಾದ ಮಂಡನೆ ಮಾಡಿದ್ದರು. 2023ರ ಫೆ.15ರಂದು ಮಂಡ್ಯದ ಸಾತನೂರಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅಶ್ವತ್ ನಾರಾಯಣ್ ಅವರು, ಟಿಪ್ಪುವನ್ನು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು ಎಂಬುದಾಗಿ ಹೇಳಿಕೆ ನೀಡಿದ್ದರು. ಈ ಸಂಬಂಧ ಮೈಸೂರಿನ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ಫೆ.17ರಂದು ದೂರು ನೀಡಿದ್ದರು. ಆ ದೂರು ಆಧರಿಸಿ ಮಾ. 24ರಂದು ಮೈಸೂರಿನ ದೇವರಾಜ ಠಾಣಾ ಪೊಲೀಸರು, ಕ್ರಿಮಿನಲ್ ಬೆದರಿಕೆ ಹಾಗೂ ಗಲಭೆಗೆ ಪ್ರಚೋದನೆ ನೀಡಿದ ಅಪರಾಧ ಸಂಬಂಧ ಎಫ್ಐಆರ್ ದಾಖಲಿಸಿದ್ದರು. a
ಈ ಎಫ್ ಐ ಆರ್ ರದ್ದು ಕೋರಿ ಶಾಸಕ ಅಶ್ವಥ್ ನಾರಾಯಣ್ ಹೈಕೋರ್ಟ್ ಗೆ ಅರ್ಜಿಸಲ್ಲಿಸಿದ್ದರು. ‘ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವ ಏಕೈಕ ಉದ್ದೇಶದಿಂದ ಭಾಷಣ ಮಾಡಲಾಗಿತ್ತು. ಆ ಕುರಿತು ಸದನ ಮತ್ತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿದ್ದೇನೆ. ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಉದ್ದೇಶ ಇರಲಿಲ್ಲ. ತಮ್ಮ ಭಾಷಣದ ನಂತರ ಯಾವುದೇ ಗಲಭೆ ನಡೆದಿಲ್ಲ. ಪ್ರಕರಣ ಈಗಾಗಲೇ ಮುಗಿದ ಅಧ್ಯಾಯ. ಆದರೂ ಸಹ ಅನಗತ್ಯವಾಗಿ ಎಫ್ಐಆರ್ ದಾಖಲಿಸಲಾಗಿದೆ. ಎಫ್ ಐಆರ್ ರದ್ದುಪಡಿಸಬೇಕು ಎಂದು ಅಶ್ವಥ್ ನಾರಾಯಣ್ ಮನವಿ ಮಾಡಿದ್ದರು.
Key words: Relief – MLA- Ashwath Narayan-High Court – FIR.