ಬೆಂಗಳೂರು,ಏಪ್ರಿಲ್,24,2021(www.justkannada.in): ಬೆಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೊರೋನಾ ಸೊಂಕಿತರಿಗೆ ಚಿಕಿತ್ಸೆ ನೀಡಲು ಬಳಸಲಾಗುವ ರೆಮ್ಡಿಸಿವಿರ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 16 ಮಂದಿಯನ್ನು ಬಂಧಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿ ಮಾಹಿತಿ ನೀಡಿದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು, ಅಕ್ರಮವಾಗಿ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ 16 ಮಂದಿಯನ್ನ ಬಂಧಿಸಲಾಗಿದೆ. ‘ಅಕ್ರಮವಾಗಿ ಚುಚ್ಚುಮದ್ದು ಸಂಗ್ರಹಿಸಿಟ್ಟುಕೊಂಡಿದ್ದ ಆರೋಪಿಗಳು, 10 ಸಾವಿರ ರೂದಿಂದ 11 ಸಾವಿರ ರೂಗೆ ಮಾರಾಟ ಮಾಡುತ್ತಿದ್ದರು. ಈ ಜಾಲದಲ್ಲಿ ಮತ್ತಷ್ಟು ಮಂದಿ ಇದ್ದು, ಅವರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದಿದ್ದಾರೆ.
ಬೆಂಗಳೂರಿನ ಹಲವೆಡೆ ಏಕಕಾಲದಲ್ಲಿ ದಿಢೀರ್ ದಾಳಿ ಮಾಡಿದ ಸಿಸಿಬಿ ಪೊಲೀಸರು, 16 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ 55 ಚುಚ್ಚುಮದ್ದು ಬಾಟಲಿಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತರಲ್ಲಿ ಇಬ್ಬರು, ವೈದ್ಯಕೀಯ ಔಷಧಿಗಳ ವಿತರಕರಾಗಿದ್ದು, ಅವರೆಲ್ಲರ ವಿರುದ್ದ 6 ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
Key words: Remedicivir –sale- illegally-16 arrested – CCB- police