ಸುದ್ದಿ ಬಿತ್ತರಿಸುವ ಭರದಲ್ಲಿ ಸಾರ ಮರೆಯದಿರಿ: ಪತ್ರಕರ್ತರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ

ಬೆಂಗಳೂರು, ಜುಲೈ 1: ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಾಗಿಸುವ ತಂತ್ರಜ್ಞಾನದ ಯುಗದಲ್ಲಿ ಸುದ್ದಿ ಬಿತ್ತರಿಸುವ ರಭಸದಲ್ಲಿ ಸುದ್ದಿಯ ಸಾರವನ್ನು ಮರೆಯುವಂತಾಗಬಾರದು ಎಂಬ ಎಚ್ಚರವೂ ಇಂದು ಅಗತ್ಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದರು.

ಸುಮಾರು ಎರಡು ಶತಮಾನಗಳ ಹಿಂದೆ ಹರ್ಮನ್ ಮೊಗ್ಲಿಂಗ್ ಪ್ರಾರಂಭ ಮಾಡಿದ ಮಂಗಳೂರು ಸಮಾಚಾರ ಕನ್ನಡದ ಮೊತ್ತ ಮೊದಲ ಪತ್ರಿಕೆ. ಹೀಗೆ ಕರ್ನಾಟಕದಲ್ಲಿ ಆರಂಭಗೊಂಡ ಪತ್ರಿಕೋದ್ಯಮ ಇಂದು ಹಲವು ಸ್ಥಿತ್ಯಂತರಗಳನ್ನು ಕಂಡಿದೆ. ಅಂತರ್ಜಾಲ ಹಾಗೂ ತಂತ್ರಜ್ಞಾನದಿಂದಾಗಿ ಪತ್ರಿಕೋದ್ಯಮದ ಸ್ವರೂಪವೇ ಇಂದು ಬದಲಾಗಿದೆ. ಅದಾಗ್ಯೂ ಸತ್ಯ, ಪ್ರಾಮಾಣಿಕತೆ, ವಸ್ತುನಿಷ್ಠತೆಯ ನೆಲೆಗಟ್ಟಿನಲ್ಲಿ ವರದಿಗಳು ಮೂಡಿಬಂದಾಗ ಮಾತ್ರ ಮಾಧ್ಯಮದ ನಿಜ ಧ್ಯೇಯವನ್ನು ಸಾಧಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿಗಳು ನುಡಿದರು.

ಮಾಧ್ಯಮ ಕ್ಷೇತ್ರ ಹಾಗೂ ಪತ್ರಕರ್ತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಪತ್ರಕರ್ತರು ಅತ್ಯಂತ ಕ್ರಿಯಾಶೀಲರಾಗಿ ದುಡಿದಿದ್ದಾರೆ. ಅನೇಕರು ಅಸುನೀಗಿದ್ದಾರೆ. ಕೋವಿಡ್‍ನಿಂದ ಮೃತಪಟ್ಟ 31 ಪತ್ರಕತ೵ರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ.ಗಳ ನೆರವು ನೀಡಲಾಗಿದೆ ಎಂದು ಅವರು ನುಡಿದರು.

ರಾಜ್ಯ ಸರ್ಕಾರ ಪತ್ರಕರ್ತರ ಕಾರ್ಯವನ್ನು ಮನಗಂಡು ಕೋವಿಡ್ ವಾರಿಯರ್ಸ್ ಎಂದು ಘೋಷಿಸಿ ಪತ್ರಿಕಾ ವಿತರಕರೂ ಸೇರಿದಂತೆ ಸುಮಾರು 25 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ಉಚಿತವಾಗಿ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆಯನ್ನು ಹಾಕಿಸಲಾಗಿದೆ. ಪತ್ರಕರ್ತರ ಕ್ಷೇಮ ನಿಧಿಗೆ 5 ಕೋಟಿ ರೂ.ಗಳ ನೆರವನ್ನು ಆಯವ್ಯಯದಲ್ಲಿ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ನೆರವು, 56 ಕೋಟಿ ಜಾಹೀರಾತು ಬಾಕಿ ಬಿಡುಗಡೆ, ಹೆಲ್ತ್ ಕಾರ್ಡ್ ಸೌಲಭ್ಯ ನೀಡಿರುವುದನ್ನು ಸ್ಮರಿಸಿ, ಅಭಿನಂದನೆ ಸಲ್ಲಿಸಿದರು.

ತಮಿಳುನಾಡಿನ ಮಾದರಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪತ್ರಕರ್ತರಿಗೆ ಆರ್ಥಿಕ ನೆರವು ನೀಡಬೇಕು. ಗ್ರಾಮೀಣ ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ಮತ್ತು ಬಸ್ ಪಾಸ್ ಸೌಲಭ್ಯ ಒದಗಿಸಬೇಕು. ಕನ್ನಡದ ಮೊಟ್ಟ ಮೊದಲ ಪತ್ರಿಕೆ ಹೊರ ತಂದ ಹರ್ಮನ್ ಮೊಂಗ್ಲಿನ್ ಅವರ ನೆನಪಿಗಾಗಿ ಮಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ತಗಡೂರು ಒತ್ತಾಯಿಸಿದರು.
ಪತ್ರಕರ್ತರ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲನೆ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

ಕಲಬುರ್ಗಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಪತ್ರಕರ್ತರು ಈ ವರ್ಚುವಲ್ ಸಮಾರಂಭದಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಮುಖ್ಯಮಂತ್ರಿಯವರ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಮಾಧ್ಯಮ ಸಲಹೆಗಾರ ಎನ್. ಭೃಂಗೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್. ಹರ್ಷ, IFWJ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕಟ್ಟಡ ಸಮಿತಿ ಅಧ್ಯಕ್ಷ ಮದನಗೌಡ,
ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮತ್ತಿಕೆರೆ ಜಯರಾಂ, ಲೋಕೇಶ್, ಪುಂಡಲೀಕ ಬಾಳೋಜಿ, ಬ ಮಲ್ಲಿಕಾರ್ಜುನ, ಸಂಜೀವ ರಾವ್ ಕುಲಕರ್ಣಿ, ಡಾ.ಉಮೇಶ್ವರ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಕೆಂಚೇಗೌಡ
ಉಪಸ್ಥಿತರಿದ್ದರು.