ಬೆಂಗಳೂರು, ಜೂನ್ 08, 2021 (www.justkannada.in): ಕೊರೊನಾ ಸೋಂಕಿತರು ಅಥವಾ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ದಂತ ಆರೋಗ್ಯದ ಕುರಿತು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ಇಲ್ಲದಿದ್ದರೆ ಇತ್ತೀಚಿಗೆ ಆತಂಕ ಸೃಷ್ಟಿಸಿರುವ ಬ್ಲ್ಯಾಕ್ ಫಂಗಸ್ ನ ಪರಿಣಾಮ ಎದುರಿಸಬೇಕಾಗುತ್ತದೆ.
ಹಲ್ಲಿನಿಂದಲೂ ಬ್ಲ್ಯಾಕ್ ಫಂಗಸ್ ಹರಡಿ ಜೀವಕ್ಕೆ ಕುತ್ತು ತರಬಹುದಾದ ಅಪಾಯವಿದ್ದು, ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ಕುರಿತು ಬೆಂಗಳೂರಿನ ಕೋಣನಕುಂಟೆಯಲ್ಲಿರುವ ಆಸ್ಟ್ರಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್, ದಂತ ಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಡಾ.ಗಿರೀಶ್ ಗೌಡ ಅವರು ಸಂಶೋಧನೆ ನಡೆಸಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಡಾ.ಗಿರೀಶ್ ಗೌಡ ಅವರು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಮ್ಯೂಕೋರ್ಮೈಕೋಸಿಸ್ ಅಥವಾ ಈ ಬ್ಲಾಕ್ ಫಂಗಸ್ ಹೆಚ್ಚಲು ಪ್ರಮುಖ ಕಾರಣ ಕೊರೊನಾ ಚಿಕಿತ್ಸೆಯ ಸಮಯದಲ್ಲಿ ಸ್ಟೀರಾಯ್ಡ್ ಗಳ ಬಳಕೆ ಅಥವಾ ದೀರ್ಘಕಾಲ ಐಸಿಯು ಅಥವಾ ಆಕ್ಸಿಜನ್ ಬಳಕೆ, ನಿಯಂತ್ರಣಕ್ಕೆ ಬಾರದ ಮಧುಮೇಹದಿಂದ ಬಳಲುತ್ತಿರುವವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ 1ರಿಂದ ಆರು ವಾರಗಳ ಕಾಲ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕಿದೆ.
ಕೇವಲ ಹಲ್ಲುನೋವೆಂದು ನಿರ್ಲಕ್ಷ್ಯ ಬೇಡ
ಹಲ್ಲಿನಲ್ಲಿ ಹುಣ್ಣು, ವಸಡಿನಲ್ಲಿ ನೋವು, ಹಲ್ಲುಗಳ ಮಧ್ಯೆ ಕೀವು ಅಥವಾ ನೋವಿನಿಂದ ಕೂಡಿದ ವಸಡುಗಳು, ಹಲ್ಲಿನ ಸಂದಿಯಲ್ಲಿ ಕೀವು, ವಸಡಿಯಲ್ಲಿ ಕೀವು ಕಾಣಿಸಿಕೊಳ್ಳುವುದು, ಹಲ್ಲು ಅಥವಾ ವಸಡು ಮರಗಟ್ಟಿದಂತೆ ಆಗುವುದು, ಕೆಳ ತುಟಿ ಅಥವಾ ಮುಖದ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಹಲ್ಲು, ವಸಡು ಅಥವ ಬಾಯಿಯ ಅಂಗಳದಲ್ಲಿ ಕಂದು, ಕಪ್ಪು ಬಣ್ಣಕ್ಕೆ ತಿರುಗುವುದು, ಸಡಿಲವಾಗುವುದು ಸೇರಿದಂತೆ ದಂತ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೇ ದಂದ ವೈದ್ಯರನ್ನು ಸಂಪರ್ಕಿಸಿ ಆರಂಭಿಕ ಹಂತದಲ್ಲಿಯೇ ಸೂಕ್ತ ಚಿಕತ್ಸೆ ಪಡೆಯುವಂತೆ ಡಾ.ಗಿರೀಶ್ ಗೌಡ ಸಲಹೆ ನೀಡಿದ್ದಾರೆ.
ಸಣ್ಣ ನಿರ್ಲಕ್ಷ್ಯದಿಂದ ಜೀವಕ್ಕೆ ಕುತ್ತು…
ಸಾಮಾನ್ಯ ಜನರಿಗೆ ಬ್ಲ್ಯಾಕ್ ಫಂಗಸ್ ಕುರಿತು ಜಾಗೃತಿ ಕೊರತೆಯಿಂದ ಕೆಲವು ವೇಳೆ ಹಲ್ಲು ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಿ ಮೆಡಿಕಲ್ ಗಳಲ್ಲಿ ಮಾತ್ರೆ ತೆಗೆದುಕೊಂಡು ಸುಮ್ಮನಾಗುತ್ತಾರೆ. ಈ ಸಂಬಂಧ ಜಾಗೃತಿ ಮೂಡಿಸಿ ಕ್ರಮ ವಹಿಸುವಂತೆ ಕರ್ನಾಟಕ ಮುಖ,ದವಡೆ ಶಸ್ತ್ರಚಿಕಿತ್ಸಕ ಸಂಘದಿಂದ ಸರಕಾರಕ್ಕೂ ವರದಿ ಸಲ್ಲಿಸಲು ಚಿಂತಿಸಲಾಗಿದೆ ಎಂದು ಡಾ.ಗಿರೀಶ್ ಗೌಡ ಮಾಹಿತಿ ನೀಡಿದ್ದಾರೆ.
ಆರಂಭದಲ್ಲೇ ಸಮಸ್ಯೆ ಗುರುತಿಸಿ ಚಿಕಿತ್ಸೆ ಪಡೆದರೆ ಹೆಚ್ಚಿನ ಅಪಾಯ ತಪ್ಪಿಸಬಹುದಾಗಿದೆ. ಜತೆಗೆ ಶಸ್ತ್ರ ಚಿಕಿತ್ಸೆಯಿಂದ ಮುಖ ವಿಕಾರ ಮಾಡಿಕೊಳ್ಳುವುದರಿಂದಲೂ ತಪ್ಪಿಸಿಕೊಳ್ಳಬಹುದಾಗಿದೆ. ತಡ ಮಾಡಿದರೆ ಹಲ್ಲಿನಿಂದ ಬೇರೆ ಬೇರೆ ಭಾಗಗಳಿಂದ ಸೋಂಕು ಹರಡಿ ನಂತರ ಮೆದುಳು ತಲುಪಿ ಪ್ರಾಣ ಕಳೆದುಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಕೊರೊನಾದಿಂದ ಗುಣಮುಖರಾದ ಒಂದರಿಂದ ಆರು ವಾರದವರೆಗೆ ಒಂದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ದಂತ ಸಮಸ್ಯೆ ಕಾಣಿಸಿಕೊಂಡರೆ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರೂ ಕೂಡ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿ ಬ್ಲ್ಯಾಕ್ ಫಂಗಸ್ ಕುರಿತು ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಡಾ.ಗಿರೀಶ್ ಗೌಡ ಸಲಹೆ ನೀಡಿದ್ದಾರೆ.