ಬೆಂಗಳೂರು,ಫೆಬ್ರವರಿ,25,2021(www.justkannada.in) : ನ್ಯಾಯಾಲಯಗಳಲ್ಲಿ ಕಾವೇರಿ, ಕೃಷ್ಣ ಸೇರಿದಂತೆ ರಾಜ್ಯದ ಜಲ ವಿವಾದಗಳ ಬಗ್ಗೆ ದಶಕಗಳ ಕಾಲ ಸಮರ್ಪಕವಾಗಿ ವಾದ ಮಂಡಿಸಿ ನ್ಯಾಯ ಒದಗಿಸುತ್ತಿದ್ದ ಖ್ಯಾತ ವಕೀಲ ಪಾಲಿ ನಾರಿಮನ್ ಸೇವೆಯಿಂದ ನಿವೃತ್ತರಾಗಿದ್ದಾರೆ.
ಬೇರೊಬ್ಬ ವಕೀಲರನ್ನು ನೇಮಿಸಿಕೊಳ್ಳುವಂತೆ ಸರ್ಕಾರಕ್ಕೆ ಪತ್ರ
ವಯಸ್ಸಾದ ಹಿನ್ನೆಲೆಯಲ್ಲಿ ಇನ್ನು ನ್ಯಾಯಾಲಯಗಳಲ್ಲಿ ತಾವು ಕರ್ನಾಟಕ ಪರ ವಾದ ಮಂಡಿಸಲು ಸಾಧ್ಯವಾಗುತ್ತಿಲ್ಲ. ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಬೇರೊಬ್ಬ ವಕೀಲರನ್ನು ನೇಮಿಸಿಕೊಳ್ಳಬೇಕೆಂದು ನಾರಿಮನ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಸಮರ್ಥರನ್ನೇ ನೇಮಿಸಿಕೊಳ್ಳುವ ಅನಿವಾರ್ಯತೆ
ಇದರಿಂದಾಗಿ ಕರ್ನಾಟಕಕ್ಕೆ ಕಾನೂನು ಸಮರದಲ್ಲಿ ತುಸು ಹಿನ್ನಡೆಯಾಗಿದ್ದು, ಇದೀಗ ಸರ್ಕಾರ ಪಾಲಿ ನಾರಿಮನ್ ಅವರಂತಹ ಸಮರ್ಥರನ್ನೇ ನೇಮಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. 92 ವರ್ಷದ ನಾರಿಮನ್ ಅವರು ಕಾವೇರಿ ಮತ್ತು ಜಲ ವಿವಾದದಗಳನ್ನು ಸುಪ್ರೀಂಕೋರ್ಟ್ನಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಅನೇಕ ಬಾರಿ ರಾಜ್ಯದ ಪರವಾಗಿ ವಾದ ಮಂಡಿಸಿ ರಾಜ್ಯಕ್ಕೆ ನೀರನ್ನು ದಕ್ಕಿಸಿಕೊಟ್ಟಿದ್ದರು
ವಿಶೇಷವಾಗಿ ತಮಿಳುನಾಡು ಕಾವೇರಿ ನದಿನೀರು ಹಂಚಿಕೆ ವಿವಾದವನ್ನು ಮುಂದಿಟ್ಟುಕೊಂಡು ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ವೇಳೆ ನ್ಯಾಯಾಲಯದಲ್ಲಿ ಅನೇಕ ಬಾರಿ ರಾಜ್ಯದ ಪರವಾಗಿ ವಾದ ಮಂಡಿಸಿ ಕರ್ನಾಟಕಕ್ಕೆ ಸಿಗಬೇಕಾಗಿದ್ದ ನೀರನ್ನು ದಕ್ಕಿಸಿಕೊಟ್ಟಿದ್ದರು.
ಕಾವೇರಿ ನದಿ ನೀರು ವಿವಾದ ಸುಪ್ರೀಂಕೋರ್ಟ್ ತನಕ ಕೊಂಡೊಯ್ದುವರು
ಸರಿಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ಜಲವಿವಾದಗಳನ್ನು ಬಗೆಹರಿಸಿದ್ದ ಅವರು ರಾಜ್ಯಕ್ಕೆ ಕಂಟಕ ಎದುರಾದ ಸಂದರ್ಭದಲ್ಲಿ ಆಪತ್ಬಾಂಧವರಂತೆ ರಾಜ್ಯವನ್ನು ಪ್ರತಿನಿದಿಸಿದ್ದರು. ಕೃಷ್ಣ ಜಲ ವಿವಾದಕ್ಕಿಂತ ಹೆಚ್ಚಾಗಿ ಕಾವೇರಿ ನದಿ ನೀರು ವಿವಾದವನ್ನು ಸುಪ್ರೀಂಕೋರ್ಟ್ ತನಕ ಕೊಂಡೊಯ್ದು ರಾಜ್ಯಕ್ಕೆ ನ್ಯಾಯ ಕೊಡಿಸುವಲ್ಲಿ ಅವರ ಪರಿಶ್ರಮ ಅಪರಿಮಿತವಾಗಿದೆ.
key words : Renowned-lawyer-Pali Nariman-retires-service