ಮಂಡ್ಯ.ಫೆಬ್ರವರಿ,23,2022(www.justkannada.in): 2019-20ರಿಂದ ಸ್ಥಗಿತಗೊಂಡಿದ್ದ ಮೈ ಷುಗರ್ ಕಾರ್ಖಾನೆಯನ್ನು ಇದೇ ವರ್ಷದಲ್ಲಿ ಪುನರಾರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ಸರ್ಕಾರ ಮಂಡ್ಯ ರೈತರ ಪರವಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ಸಚಿವರಾದ ಶಂಕರ್. ಬಿ. ಪಾಟೀಲ ಹೇಳಿದರು.
ಇಂದು ನಗರದ ಮೈ ಷುಗರ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ತನ್ನದೇ ಇತಿಹಾಸವನ್ನು ಹೊಂದಿರುವ ಮೈ ಷುಗರ್ ಕಂಪನಿಯನ್ನು ಪುನಃಶ್ಚೇತನಗೊಳಿಸುವಲ್ಲಿ ಮಂಡ್ಯ ಜನತೆಯ ಪರವಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ರೈತರಿಗೆ ಯಾವುದೇ ಆತಂಕ ಬೇಡ ಎಂದರು.
ಈ ಸಂಬಂಧ ಈಗಾಗಲೇ ತಾಂತ್ರಿಕ ಸಮಿತಿ ಹಾಗೂ ಆರ್ಥಿಕ ಸಮಿಯೊಂದನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಮೈ ಷುಗರ್ ಕಂಪನಿ ಬಂದ್ ಆಗದಂತೆ ಬಂದಂತಂಹ ಅನೇಕ ವರದಿಯನ್ವಯ ಕಂಪನಿಯನ್ನು ಪ್ರಾರಂಭ ಮಾಡಲಾಗುವುದು ಎಂದರು.
ಮೈ ಶುಗರ್ ಕಂಪನಿಯ ಮತ್ತದೇ ಹಿಂದಿನ ವೈಭವವನ್ನು ನೋಡುವುದು ನಮ್ಮೆಲ್ಲರ ಗುರಿಯಾಗಿದ್ದು, ಕಾರ್ಖಾನೆಯ ಬಗ್ಗೆ ಒಳ್ಳೆಯ ಸುದ್ದಿಯನ್ನೇ ನಿಮಗೆ ನೀಡುತ್ತೇನೆ ಎಂದರು.ರಾಜ್ಯದಲ್ಲಿ ಇರುವ ಇತರೆ ಸರ್ಕಾರಿ ಕಾರ್ಖಾನೆಗಳನ್ನೂ ಕೂಡ ಉಳಿಸಿಕೊಳ್ಳುವಲ್ಲಿ ಶ್ರಮಿಸುತ್ತೇನೆ ಎಂದರು.
ಮೈಸೂರು ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಸಂಬಂಧ ಆಡಳಿತ, ಹಣಕಾಸು ಹಾಗೂ ತಾಂತ್ರಿಕ ವರದಿಯನ್ನು ನಿಗಧಿತ ಸಮಯದೊಳಗೆ ಪಡೆದು ಅದರ ಆಧಾರದ ಮೇಲೆ ಶೀಘ್ರದಲ್ಲಿಯೇ ಕಾರ್ಖಾನೆಯನ್ನು ಪುನರಾರಂಭಗೊಳಿಸಲಾಗುವುದು ಎಂದರು.
ಸಕ್ಕರೆ ಕಾರ್ಖಾನೆ ಸಂಬಂಧ ಮುಖ್ಯಮಂತ್ರಿಗಳ ಆದೇಶದಂತೆ ಹಾಗೂ ವಿಳಂಬವಾಗದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಲಾಗುವುದು ಖಾಸಗೀಕರಣದ ವಿಚಾರವಾಗಿ ಮಂಡ್ಯ ರೈತ ಜನತೆ ಚಿಂತಿಸುವಂತಿಲ್ಲ ಎಂದರು.
ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ಥೀಕರಣಗೊಳಿಸಲು ತುರ್ತು ಅಗತ್ಯವಿರುವ ಹಣವನ್ನು ಸರ್ಕಾರದಿಂದ ಬಿಡುಗಡೆಗೊಳಿಸಲು ಕ್ರಮವಹಿಸಲಾಗುದು ಎಂದರು.
ಸಭೆಯಲ್ಲಿ ಮಂಡ್ಯ ಸಂಸದರಾದ ಸುಮಲತಾ ಅಂಬರೀಶ್, ವಿಧಾನ ಸಭೆಯ ಸದಸ್ಯರುಗಳಾದ ಡಾ. ಅನ್ನದಾನಿ, ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿಗಳಾದ ಎಸ್.ಅಶ್ವತಿ, ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ, ವಾರ್ತಾಧಿಕಾರಿ ಟಿ.ಕೆ ಹರೀಶ್, ಮೈ ಷುಗರ್ ಕಾರ್ಖಾನೆಯ ಅಧ್ಯಕ್ಷ ಶಿವಲಿಂಗೇಗೌಡ ಹಾಗೂ ರೈತ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Key words: reopen – My Sugar Factory-Minister –Shankar patil