ಕಾರ್ಮಿಕರ ಸುರಕ್ಷತೆಗೆ ಆಯಾಯ ಕಂಪೆನಿಗಳೇ ಹೊಣೆ- ಮೊಹಮ್ಮದ್ ಮೊಹ್ಸಿನ್

ಬೆಂಗಳೂರು,ಜೂನ್,27,2024 (www.justkannada.in):  ಕೈಗಾರಿಕೆಗಳು ಸೇರಿದಂತೆ ಕಾರ್ಮಿಕ ಬಳಕೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆಯ ಸಂಪೂರ್ಣ ಹೊಣೆ ಆಯಾಯ ಕಂಪೆನಿಗಳದ್ದಾಗಿರುತ್ತದೆ ಎಂದು ಕಾರ್ಮಿಕ ಇಲಾಖೆ ಪ್ರಧಾನಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ತಿಳಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂದು ಮತ್ತು ನಾಳೆ ನಡೆಯುತ್ತಿರುವ ಓಎಸ್ ಹೆಚ್ ಇಂಡಿಯಾ-ಸೌತ್-2024 (South India’s largest occupational safety and health event) ಪ್ರದರ್ಶನ ಉದ್ಘಾಟಿಸಿ ಅವರು  ಮಾತನಾಡಿದರು.

ಕಾರ್ಮಿಕರು,ಇಂಜಿನಿಯರ್ಸ್ ಯಾರೇ ಆಗಲಿ ಅತಿ ಸೂಕ್ಷ್ಮ,ಸೂಕ್ಷ್ಮ ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಸುರಕ್ಷಿತ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದರೆ ಅಪಘಾತದಿಂದ ಪಾರಾಗಲು ಸಾಧ್ಯವೇ ಇಲ್ಲ ಎಂದ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹ್ಸಿನ್,ಯಾವುದೇ ಜೀವ ಅಮೂಲ್ಯವಾದದ್ದು,ಆದ್ದರಿಂದ ಪ್ರತಿಯೊಬ್ಬರು ಸುರಕ್ಷಾತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಮೊಹಮ್ಮದ್ ಮೊಹ್ಸಿನ್  ಮನವಿ ಮಾಡಿದರು.

ಕೈಗಾರಿಕಾ ಆಡಳಿತ ಮಂಡಳಿಯವರು ಆಗಾಗ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ವಿಚಾರಸಂಕಿರಣ ಮತ್ತು ವರ್ಕ್ ಶಾಪ್ ಗಳನ್ನು ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸುವಂತಾಗಬೇಕು. ದೇಶದ ಶೇ.30 ರಷ್ಟು ಸುರಕ್ಷತಾ ಉತ್ಪನ್ನ ತಯಾರಿಕಾ ಕಂಪೆನಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿವೆ ಎಂದು  ಹೇಳಿದರು.

ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಇಲಾಖೆ ಪ್ರಧಾನಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್,ಕಾರ್ಮಿಕರ ಸುರಕ್ಷತೆಯ ಬಗ್ಗೆ ಕರ್ನಾಟಕ ಸರ್ಕಾರ ಉತ್ತಮ ಕಾನೂನುಗಳನ್ನು ಅಳವಡಿಸಿಕೊಂಡಿದೆ ಎಂದು ತಿಳಿಸಿದರು.

ಕೈಗಾರಿಕಾ ಸುರಕ್ಷತಾ ಉತ್ಪನ್ನಗಳ ತಯಾರಿಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಅದರಲ್ಲೂ ಅಗ್ನಿ ಸುರಕ್ಷತಾ ಉತ್ಪನ್ನಗಳ ತಯಾರಿಕೆಯಲ್ಲಿ ನಂ.1 ಸ್ಥಾನದಲ್ಲಿದೆ ಎಂದು ಸುರಕ್ಷತಾ ಉತ್ಪನ್ನ ತಯಾರಿಕಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಹೇಶ್ ಕುಡವ್ ತಿಳಿಸಿದರು.

ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಓಎಸ್ ಹೆಚ್ -ಇಂಡಿಯಾ ಸೌತ್ ಪ್ರದರ್ಶನದಲ್ಲಿ 90 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದು 200 ಕ್ಕೂ ಹೆಚ್ಚು ಬ್ರಾಂಡ್ ಗಳ 300 ಕ್ಕೂ ಅಧಿಕ ಉತ್ಪನ್ನಗಳು ಪ್ರದರ್ಶನದಲ್ಲಿವೆ ಎಂದ ಎಕ್ಸ್ ಪೋ ದ ಮುಖ್ಯಸ್ಥ ಪಂಕಜ್ ಜೈನ್, ಈ ಸಂದರ್ಭದಲ್ಲಿ 12 ವಿಚಾರಸಂಕಿರಣಗಳನ್ನು ಆಯೋಜಿಸಲಾಗಿದ್ದು 40 ಕ್ಕೂ ಹೆಚ್ಚು ಪರಿಣಿತರು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು. ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಸಂಘದ ಅಧ್ಯಕ್ಷ ವಿ ಶ್ರೀರಾಮ್ ಕುಮಾರ್ ಮೊದಲಾದವರು ಹಾಜರಿದ್ದರು.

Key words: respective, companies,  responsible, Mohammad Mohsin