ಮೈಸೂರು,ಫೆಬ್ರವರಿ.16,2021(www.justkannada.in): ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಜಾರಿಯಾಗಿದೆ. ಇದರೊಂದಿಗೆ ಪೋಲಿಸ್ ಇಲಾಖೆಯ ಜವಾಬ್ದಾರಿ ಸಹ ಹೆಚ್ಚಾಗಿದೆ ಎಂದು ಪಶುಸಂಗೋಪನೆ ಸಚಿವರಾದ ಪ್ರಭು ಬಿ. ಚವ್ಹಾಣ್ ಅವರು ತಿಳಿಸಿದರು.
ಮಂಗಳವಾರ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಟಾನ ಹಾಗೂ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವ ಪ್ರಭು ಚೌಹಾಣ್, ಪಶುಸಂಗೋಪನೆ ಮತ್ತು ಪೊಲೀಸ್ ಇಲಾಖೆ ಜೊತೆಗೂಡಿ ಕೆಲಸ ಮಾಡಿದರೆ ಮೈಸೂರು ಜಿಲ್ಲೆಯಲ್ಲಿ ಅಕ್ರಮ ಗೋವುಗಳ ಸಾಗಣೆ ಮತ್ತು ವಧೆಗೆ ಕಡಿವಾಣ ಬೀಳುತ್ತದೆ. ಅಲ್ಲದೆ ಚೆಕ್ ಪೋಸ್ಟ್ ನಲ್ಲಿ ಕಡ್ಡಾಯವಾಗಿ ಒಬ್ಬ ಪಶುವೈದ್ಯ ಇರಲೇಬೇಕು ಎಂದು ಹೇಳಿದರು.
ಭಾರತ ದೇಶವು ಕೃಷಿಪ್ರಧಾನ ದೇಶವಾಗಿದ್ದು, ಗೋವುಗಳನ್ನು ನಾವು ಪೂಜ್ಯಭಾವದಿಂದ ಗೌರವಿಸುತ್ತೇವೆ. ಹೀಗಾಗಿ ನಮ್ಮ ಸರ್ಕಾರವು ಗೋವುಗಳ ಸಂರಕ್ಷಣೆಗೆಂದು ಈ ಕಾಯ್ದೆಯನ್ನು ಜಾರಿಮಾಡಿದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಪಶುಸಂಗೋಪನೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕು ಎಂದು ತಿಳಿಸಿದರು.
ಗೋಹತ್ಯೆ ನಿಷೇಧ ಕಾಯ್ದೆಯ ಎಲ್ಲ ಅಂಶಗಳನ್ನು ರೈತರಿಗೆ ಮನದಟ್ಟಾಗುವಂತೆ ಕಾಯ್ದೆಯ ಬಗ್ಗೆ ಪ್ರತಿ ಹಳ್ಳಿಗಳಿಗೂ ತೆರಳಿ ಗ್ರಾಮಸಭೆ ನಡೆಸುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೆ, ಗಂಡು ಕರುಗಳನ್ನು ಕನಿಷ್ಠ ಮೂರು ತಿಂಗಳ ಕಾಲ ನೋಡಿಕೊಂಡರೆ ಸಾಕು, ಆನಂತರ ಇಲಾಖೆಯ ಮೂಲಕ ಕರುಗಳನ್ನು ಗೋಶಾಲೆಗಳಿಗೆ ಕಳುಹಿಸಲಾಗುತ್ತದೆ ಎಂಬುದನ್ನು ಮನವರಿಕೆ ಮಾಡಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಮೈಸೂರಿನಲ್ಲಿ ಇರುವ ಗೋಮಾಳಗಳ ಒತ್ತುವರಿ ಆಗಿದ್ದರೆ ಅವುಗಳನ್ನು ತೆರವು ಮಾಡಿ ಮೇವು ಬೆಳೆಯಲು ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಸಚಿವ ಪ್ರಭು ಚೌಹಾಣ್ ಸೂಚನೆ ನೀಡಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ, ಇಲಾಖೆ ವತಿಯಿಂದ ನಡೆಸುವ ತರಬೇತಿಯಲ್ಲಿ ಹಾಗೂ ಗ್ರಾಮ ಸಭೆಗಳಲ್ಲಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ತಪ್ಪದೆ ಭಾಗವಹಿಸಿ ರೈತರ ಸಮಸ್ಯೆಗಳನ್ನು ಆಲಿಸಿ ಮತ್ತು ನಮ್ಮ ಇಲಾಖೆಯ ಎಲ್ಲ ಯೋಜನೆಗಳು ರೈತರಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು.
ಗ್ರಾಮೀಣ ಭಾಗದಲ್ಲಿ ಜಾನುವಾರು ಖಾಯಿಲೆಯಿಂದ ಪಶುಆಸ್ಪತ್ರೆಗಳಿಗೆ ಬಂದರೆ ಆಸ್ಪತ್ರೆಯ ವೈದ್ಯರು ಔಷದಿಗಾಗಿ ಹೊರಗಿನ ಅಂಗಡಿಗಳಿಗೆ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು. ಜಾನುವಾರುಗಳಿಗೆ ಆಸ್ಪತ್ರೆಯಲ್ಲಿ ಔಷದಿ ನೀಡಬೇಕು ಎಂದು ಹೇಳಿದರು.
ಜಾನುವಾರುಗಳ ಮಾಲೀಕರ ಮನೆಗೆ ವೈದ್ಯರೊಂದಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುವುವಂತಹ ಪಶು ಸಂಜೀವಿನಿ ಸೌಲಭ್ಯವು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಇದರಿಂದ ರೈತಾಪಿ ವರ್ಗದವರಿಗೆ, ಜಾನುವಾರು ಮಾಲೀಕರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.
ಇಲಾಖೆಯ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಯನ್ನು ಸಚಿವರು ಈ ಸಂದರ್ಭದಲ್ಲಿ ಅವಲೋಕಿಸಿದರು. ಎಲ್ಲ ಯೋಜನೆಗಳು 100 ರಷ್ಟು ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ, ಡಿಸಿಪಿ ಗೀತಾ ಪ್ರಸನ್ನ, ಉಪವಿಭಾಗಾಧಿಕಾರಿಗಳಾದ ಡಾ.ಎನ್.ಸಿ.ವೆಂಕಟರಾಜು, ವೀಣಾ, ಪಶುಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಪ್ರಸಾದ್ ಮೂರ್ತಿ, ಉಪನಿರ್ದೇಶಕ ಡಾ.ಮಾದಪ್ಪ ಸೇರಿದಂತೆ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Key words: responsibility – police department – increased – enactment – go killing-act- ban-Minister -Prabhu Chauhan