ಬೆಂಗಳೂರು, ನವೆಂಬರ್ 5,2020(www.justkannada.in): 3 ಲಕ್ಷ ಅಧಿಕಾರಿ, ಸಿಬ್ಬಂದಿ ಇರುವ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು 6 ಕೋಟಿ ಕನ್ನಡಿಗರ ಆರೋಗ್ಯ ಕಾಪಾಡುವ ಹೊಣೆಯನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸುವ ಮೂಲಕ, ಸಮೃದ್ಧ ಕರ್ನಾಟಕವನ್ನು ಆರೋಗ್ಯ ಕರ್ನಾಟಕವಾಗಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಈಗ ಆರೋಗ್ಯ ಇಲಾಖೆಯೊಂದಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಜೊತೆಯಾಗಿದೆ. ಆರೋಗ್ಯ ಇಲಾಖೆಯಡಿ, 2.50 ಲಕ್ಷ ಸಿಬ್ಬಂದಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಡಿ 30-40 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡೂ ಇಲಾಖೆಗಳು ಸೇರಿ ಒಟ್ಟು 3 ಲಕ್ಷ ಸಿಬ್ಬಂದಿ ರಾಜ್ಯದ 6 ಕೋಟಿ ಜನರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟ ಕಡಿಮೆ, ಖಾಸಗಿ ಆಸ್ಪತ್ರೆಯಲ್ಲಿ ಗುಣಮಟ್ಟ ಹೆಚ್ಚು ಎನ್ನುವ ತಪ್ಪು ಕಲ್ಪನೆ ಇದೆ. ನಾವು ವೈದ್ಯರಾಗಿ ಈ ತಪ್ಪು ಕಲ್ಪನೆಯನ್ನು ದೂರ ಮಾಡಬೇಕು. ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಸರ್ಕಾರವು ಎಲ್ಲ ಬಗೆಯ ಮೂಲಸೌಕರ್ಯ ಹಾಗೂ ವೈದ್ಯರಿಗೆ ಸಿಗಬೇಕಾದ ಗೌರವವನ್ನು ನೀಡಲಿದೆ. ಇದಕ್ಕೆ ಪೂರಕವಾಗಿ ಕಾನೂನು ತಿದ್ದುಪಡಿ, ಹೊಸ ಕಾನೂನು ತರುವ ಉದ್ದೇಶವೂ ಇದೆ ಎಂದು ವಿವರಿಸಿದರು.
ಒಂದು ದಿನದ ಆಚರಣೆಯಲ್ಲ
ಕನ್ನಡ ರಾಜ್ಯೋತ್ಸವ ಆಚರಣೆ ಒಂದು ದಿನಕ್ಕೆ ಸೀಮಿತವಲ್ಲ. ಇಡೀ ವರ್ಷವೂ ಈ ನಾಡಹಬ್ಬವನ್ನು ಆಚರಿಸಬಹುದು. ಈಗ ಅನೇಕರು ಓದುವುದನ್ನು ಕಡಿಮೆ ಮಾಡಿದ್ದಾರೆ. ಮಾಧ್ಯಮಗಳು, ಸ್ಮಾರ್ಟ್ ಫೋನ್ ಗಳನ್ನು ಬಳಸಿಕೊಂಡು ಹೆಚ್ಚು ಓದಬಹುದು. ಆದರೆ ವ್ಯಕ್ತಿತ್ವ ವಿಕಸನವಾಗಲು ಪುಸ್ತಕಗಳ ಓದು ಬಹಳ ಮುಖ್ಯ. ಈ ಅಭ್ಯಾಸವನ್ನು ಬಾಲ್ಯದಿಂದಲೇ ಆರಂಭಿಸಬೇಕು” ಎಂದು ಸಚಿವರು ಸಲಹೆ ನೀಡಿದರು.
ಸ್ವಾತಂತ್ರ್ಯಪೂರ್ವದಲ್ಲೇ ಕರ್ನಾಟಕ ರಾಜ್ಯ ರಚಿಸುವ ಹೋರಾಟ ಆರಂಭವಾಗಿತ್ತು. ಎಲ್ಲ ಪ್ರಾಂತ್ಯಗಳನ್ನು ಒಟ್ಟುಗೂಡಿಸಲು ಅನೇಕರು ಹೋರಾಟ ಮಾಡಿದ್ದರು. ಆದಿಕವಿ ಪಂಪರಿಂದ ಆರಂಭವಾಗಿ ಈಗಿನ ಸಾಹಿತಿಗಳವರೆಗೆ, ಎಲ್ಲರ ಪ್ರಯತ್ನದಿಂದ ಭಾಷೆ ಸಮೃದ್ಧಿಯಾಗಿದೆ. ಕವಿ ಕುವೆಂಪು, ಇಡೀ ಜಗತ್ತಿಗೆ ಶಾಂತಿಯ ಪಾಠ ಮಾಡಿದರು. ವಿಶ್ವಮಾನವರಾಗಬೇಕು ಎಂಬ ಸಂದೇಶವನ್ನು ಅವರು ನೀಡಿದರು. ಅಂತಹ ಸಾಹಿತಿಗಳ ಆಶಯದಂತೆ ಕರ್ನಾಟಕವನ್ನು ಸಮೃದ್ಧವಾಗಿಸಬೇಕು ಎಂದರು.
ಸಮಾರಂಭದಲ್ಲಿ, ಆರೋಗ್ಯ ವಿಜ್ಞಾನಗಳ ಲೇಖಕರನ್ನು ಸನ್ಮಾನಿಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ವಿವಿ ಕುಲಪತಿ ಡಾ.ಎಸ್.ಸಚ್ಚಿದಾನಂದ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಮಾತೃಭಾಷೆಯಲ್ಲಿ ಮಾತನಾಡಿದರೆ ಕೀಳು ಎಂಬ ಭಾವನೆ ಇರಬಾರದು. ಈ ಮನೋಧೋರಣೆ ಬದಲಾಗಬೇಕು ಎಂದ ಸಚಿವ ಸುಧಾಕರ್, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಉತ್ತಮವಾಗಿ ಕೋವಿಡ್ ನಿಯಂತ್ರಿಸಲಾಗಿದೆ. ಭಾರತದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.1.3-1.4 ರಷ್ಟಿದೆ. ಕಳೆದ 10-12 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ನವೆಂಬರ್, ಡಿಸೆಂಬರ್, ಜನವರಿ ಚಳಿಗಾಲದ ದಿನಗಳು. ಇದೇ ಸಂದರ್ಭದಲ್ಲಿ ಹಬ್ಬಗಳು ಕೂಡ ಇದೆ. ಹಬ್ಬಗಳಲ್ಲಿ ಮುಂಜಾಗ್ರತಾ ಕ್ರಮಗಳು ಬಹಳ ಅವಶ್ಯ. ವೈದ್ಯರು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಕೋವಿಡ್ ನಿಯಂತ್ರಣದಲ್ಲಿ ರಾಜೀವ್ ಗಾಂಧಿ ವಿವಿ ಉತ್ತಮ ಕೆಲಸ ಮಾಡಿದೆ. ಅತೀ ಕಡಿಮೆ ಸಮಯದಲ್ಲಿ ಕೊರೊನಾ ಯೋಧರಿಗೆ ವಿಶ್ವವಿದ್ಯಾಲಯ ತರಬೇತಿ ನೀಡಿದೆ ಎಂದರು.
Key words: Responsible – maintaining – health – 6 crore –Kannadigas-3 lakh staff-minister-Dr. K. Sudhakar