ಬೆಂಗಳೂರು,ಜು,11,2020(www.justkannada.in): ಬಿಎಸ್ಸಿ ಅಗ್ರಿಕಲ್ಚರ್ ಹಾಗೂ ಬಿಟೆಕ್ ಇಂಜಿನಿಯರಿಂಗ್ ಸೇರಿದಂತೆ ಕೃಷಿ ವಿಶ್ವವಿದ್ಯಾಲಯದ ಎಲ್ಲಾ ಬಿಎಸ್ಸಿ ಅಂತಿಮ ಪದವಿ ಪರೀಕ್ಷೆಗಳು ಈಗಾಗಲೇ ಆನ್ಲೈನ್‌ನಲ್ಲಿ ಜುಲೈ 8ರೊಳಗೆ ಮುಗಿದಿದ್ದು ಜುಲೈ ಅಂತ್ಯದೊಳಗೆ ಬಿಎಸ್ಸಿ ಅಗ್ರಿ ಡಿಗ್ರಿ ಪ್ರಮಾಣಪತ್ರ ಮತ್ತು ಅಂಕಪಟ್ಟಿ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಕೋವಿಡ್ ಆರಂಭವಾಗುವ ಹೊತ್ತಿಗೆ 90% ಹೆಚ್‌ಓಟಿ(ಹ್ಯಾಂಡ್ಸ್ ಆನ್ ಟ್ರೈನಿಂಗ್ ಅಥವಾ ರೂರಲ್ ಎಕ್ಸ್ಟೆನ್ಷನ್ ಅಗ್ರಿಕಲ್ಚರ್ ಡೆವಲಪ್ಮೆಂಟ್ ಯೋಜನೆ) ಪ್ರಕಾರ ತರಗತಿಗಳು ಮುಗಿದಿತ್ತು. ಗ್ರೂಪ್ ಡಿಸ್ಕಷನ್, ವರದಿ ಸಲ್ಲಿಕೆ ಬಾಕಿಯಿತ್ತು. ಈಗ ವಿದ್ಯಾರ್ಥಿಗಳನ್ನು ಸಾಮೂಹಿಕ ಚರ್ಚೆ ವರದಿ ಸಲ್ಲಿಕೆಗೆ ಸೇರಿಸಲು ಕೋವಿಡ್ ನಿಂದ ಸಾಧ್ಯವಾಗದ ಕಾರಣ ಶಿಕ್ಷಕರು ಈಗಾಗಲೇ ಆನ್ಲೈನ್ ಮೂಲಕ ಪರೀಕ್ಷೆಗಳನ್ನು ಮುಗಿಸಿರುತ್ತಾರೆ. ಗ್ರೇಡ್ ಅಂತಿಮಗೊಳಿಸಿ ಪರೀಕ್ಷಾಘಟಕಕ್ಕೆ ಜು.15ರೊಳಗೆ ಸಲ್ಲಿಸಬೇಕಿದ್ದು ಪ್ರಾವಿಝನಲ್ ಡಿಗ್ರಿ ಸರ್ಟಿಫಿಕೇಟ್ ಮತ್ತು ಅಂಕಪಟ್ಟಿ ಸಲ್ಲಿಕೆ ಜು. 15ರ ಬಳಿಕ ಆರಂಭವಾಗಲಿದೆ, ಬಹುತೇಕ ಜುಲೈ ಅಂತ್ಯದೊಳಗೆ ಎಲ್ಲಾ ವಿದ್ಯಾರ್ಥಿಗಳಿಗೆ ಡಿಗ್ರಿ ಅಂಕಪಟ್ಟಿ ನೀಡಲಾಗುವುದು ಎಂದು ಸಚಿವ ಬಿಸಿ ಪಾಟೀಲ್ ಮಾಹಿತಿ ನೀಡಿದರು.
ಇನ್ನು ಅಂತಿಮ ವರ್ಷದ ಎಂಎಸ್ಸಿ ಹಾಗೂ ಪಿಹೆಚ್‌ಡಿ ಪದವಿ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಆಗಸ್ಟ್ 31ರೊಳಗೆ ಸಲ್ಲಿಸಬೇಕು. ಸೆಪ್ಟೆಂಬರ್ 15 ರಿಂದ ಫಲಿತಾಂಶ ಮತ್ತು ಪ್ರಮಾಣಪತ್ರ ಸಲ್ಲಿಕೆ ಆರಂಭವಾಗಲಿದ್ದು , ಸೆಪ್ಟೆಂಬರ್ 30ರೊಳಗೆ ಎಲ್ಲಾ ಎಂಎಸ್ಸಿ, ಪಿಹೆಚ್‌ಡಿ ವಿದ್ಯಾರ್ಥಿಗಳು ತಮ್ಮ ಪದವಿ ಮುಗಿಸಬಹುದಾಗಿದೆ.ಬಳಿಕ ಹೈಯರ್ ಎಜುಕೇಷನ್ ಮಾಡಬಹುದಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಲಾಕ್ ಡೌನ್ ಮಾಡುವುದು ಕೊರೊನಾ ನಿಯಂತ್ರಣಕ್ಕೆ ಪರಿಹಾರವಲ್ಲ…
ತಮ್ಮ ಉಸ್ತುವಾರಿಯ ಕೊಪ್ಪಳದ ಜಿಲ್ಲೆಯಲ್ಲಿ ಕೊರೊನಾಗಾಗಿ ಲ್ಯಾಬ್ ತೆರೆಯಲಾಗಿದ್ದು ಪ್ರಯೋಗಾಲಯದಲ್ಲಿ ಪ್ರತಿದಿನ 500 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಇಂದಿನವರೆಗೂ 211 ಪಾಸಿಟಿವ್ ಪತ್ತೆಯಾಗಿವೆ. ಮುಂಬಯಿ, ಬಳ್ಳಾರಿಯ ಜಿಂದಾಲ್ ಹಾಗೂ ಆಂಧ್ರದ ಗಡಿ ಭಾಗದಿಂದ ಬರುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ಪ್ರಕರಣಗಳು ಪತ್ತೆಯಾಗಿದೆ. ಕೊರೊನಾ ಜೊತೆ ಜೀವನ ಮಾಡಬೇಕಾದಂತಹ ಪರಿಸ್ಥಿತಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.
ಲಾಕ್‌ಡೌನ್ ಮಾಡುವುದು ಕೊರೊನಾ ನಿಯಂತ್ರಣಕ್ಕೆ ಪರಿಹಾರವಲ್ಲ. ವಾರದಲ್ಲಿ ಎರಡೆರಡು ದಿನ ಲಾಕ್‌ಡೌನ್ ಮಾಡುವುದು ಪರಿಹಾರವಲ್ಲ. ಕರ್ನಾಟಕದಲ್ಲಿ ಅತಿಹೆಚ್ಚು ಪ್ರಯೋಗಲಾಯ ಸ್ಥಾಪಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಈಗ ಭಾನುವಾರ ಮಾತ್ರ ಲಾಕ್‌ಡೌನ್ ಮಾಡುತ್ತಿರುವುದು ಸರಿಯಿದೆ.ಗ್ರಾಮೀಣ ಭಾಗದಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಆ ಭಾಗದ ಜನ ಸ್ವಯಂಜಾಗೃತರಾಗಿಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ಬಳಸುತ್ತಿದ್ದಾರೆ ಎಂದರು.
ಪಾಸಿಟಿವ್ ಬಂದಾಕ್ಷಣ ಜನರು ಭಯಪಡುವುದಾಗಲೀ ಆತಂಕ ಗಾಬರಿಗೊಳಗಾಗುವುದು ಬೇಡ.ಆತ್ಮಸ್ಥೈರ್ಯ ಆತ್ಮವಿಶ್ವಾಸ ತಂದುಕೊಂಡು ಎದುರಿಸುವುದು ಮುಖ್ಯ ಎಂದು ಸಚಿವ ಬಿ.ಸಿ ಪಾಟೀಲ್ ಸಲಹೆ ನೀಡಿದರು.
ಲೆಕ್ಕ ಎಲ್ಲರಿಗೂ ಕೊಟ್ಟೇ ಕೊಡುತ್ತೇವೆ. ಲೆಕ್ಕ ಕೊಡದೇ ನಾವು ಎಲ್ಲಿಯೂ ಹೋಗುವುದಿಲ್ಲ.
ಕೋವಿಡ್ ಚಿಕಿತ್ಸೆ ಖರ್ಚುವೆಚ್ಚದ ಬಗ್ಗೆ ಸರ್ಕಾರ ಲೆಕ್ಕ ಖಂಡಿತ ಕೊಡುತ್ತದೆ. ಅದು ನ್ಯಾಯಯುತವೂ ಹೌದು. ಕಾಂಗ್ರೆಸ್ ನವರು ಲೆಕ್ಕಕೊಡಿ ಅಭಿಯಾನ ಮಾಡುವುದಕ್ಕಿಂತ ಜಾಗೃತ ಅಭಿಯಾನ ಮಾಡಿದರೆ ಒಳ್ಳೆಯದು. ಕಾಂಗ್ರೆಸ್ ಮಾಡುತ್ತಿರುವ ಆರೋಪವೆಲ್ಲವೂ ಸುಳ್ಳು ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.
ಕೋವಿಡ್-19 ಈ ಪರಿ ಹರಡಲು ತಬ್ಲಿಘಿಗಳು ಕಾರಣ.ಅವರಿಂದಲೇ ಕೊರೊನಾ ಹರಡುತ್ತಿರುವುದು.ತಬ್ಲಿಘಿಗಳು ಬಂದಮೇಲೆಯೇ ಕೊರೊನಾ ಹೆಚ್ಚು ಹರಡಿದೆ. ದೇಶಾದ್ಯಂತೆ ತಬ್ಲೀಘಿಗಳೇ ಕೊರೊನಾ ಹರಡಲು ಪ್ರಮುಖ ಕಾರಣರಾಗಿದ್ದಾರೆ. ಆದರೆ ಕಾಂಗ್ರೆಸ್‌ನವರು ತಬ್ಲಿಘಿಗಳಿಗೆ ಬೆಂಬಲಿಸಿ ಅವರನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಕೊರೊನಾ ಎಂದರೂ ತಪ್ಪಾಗುವುದಿಲ್ಲ ಎಂದು ಸಚಿವ ಬಿ.ಸಿ ಪಾಟೀಲ್ ತಿರುಗೇಟು ನೀಡಿದರು.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.ರಾಜಕೀಯ ಸುಳ್ಳು ಆರೋಪ ಬಿಟ್ಟು ಕಾಂಗ್ರೆಸ್ ಕೂಡ ನಮ್ಮ ಜೊತೆಗೆ ಕೈ ಜೋಡಿಸಬೇಕು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಮನವಿ ಮಾಡಿದರು.
Key words: Result –BSc- Final -Degree- Examinations -Agricultural university- July-Minister -BC Patil.