ಮೈಸೂರು, ನವೆಂಬರ್ 17, 2019 (www.justkannada.in): ಅಧಿಕಾರ ದುರುಪಯೋಗ ಪಡಿಸಿಕೊಂಡ ಮೈಸೂರು ತಾಲೂಕು ಕಚೇರಿಯ RRT ಶಿರಸ್ತೇದಾರ್ ಮಹದೇವ್ ಮೇಲೆ ಕ್ರಮ ಕೈಗೊಳ್ಳುವಂತೆ ಮೈಸೂರಿನ ಹಿರಿಯ ವಕೀಲರಾದ ಬಿ.ಆರ್.ಚಂದ್ರಮೌಳಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ತಮಗೆ ಅಧಿಕಾರ ಇಲ್ಲದಿದ್ದರೂ ನ್ಯಾಯಾಲಯದ ಪ್ರಕರಣವೊಂದನ್ನ ಇತ್ಯರ್ಥಗೊಳಿಸಿ ತಮ್ಮ ಕಕ್ಷಿದಾರರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ತಮ್ಮ ಕಕ್ಷಿದಾರ ಜನಾರ್ಧನ್ ಶರ್ಮ ಎಂಬುವರಿಗೆ ಸೇರಿದ ಬೆಲವತ್ತಾ ಗ್ರಾಮದ ಸರ್ವೆ ನಂಬರ್ ೧೭೩ ರ ೨೫ ಗುಂಟೆ ಜಮೀನಿಗೆ ಸಂಭಂಧಿಸಿದಂತೆ ಮೈಸೂರು ತಹಸೀಲ್ದಾರ್ ನ್ಯಾಯಾಲಯದಲ್ಲಿ ತಕರಾರು ಪ್ರಕರಣ ದಾಖಲಾಗಿತ್ತು.ಪ್ರಕರಣಕ್ಕೆ ಸಂಭಂಧಿಸಿದಂತೆ ಲಿಖಿತ ವಾದ ಮಂಡಿಸಲು ಅವಕಾಶ ನೀಡದೆ ಏಕಪಕ್ಷೀಯವಾಗಿ ಎದುರು ಪಾರ್ಟಿಯವರಿಗೆ ಖಾತೆ ಮಾಡಲು ಆದೇಶ ಮಾಡಿ ಕಕ್ಷಿದಾರರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ RRT ಶಿರಸ್ತೇದಾರ್ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಕರ್ನಾಟಕ ರಾಜ್ಯಪಾಲರ ಸರ್ಕಾರಿ ಸುತ್ತೋಲೆಯ ಆಜ್ಞಾನುಸಾರ ಕಂ.ಇ.೧೪೧ ಟಿ.ಆರ್.ಎಂ.೨೦೧೯ ದಿನಾಂಕ ೧೬-೭-೨೦೧೯ ಅನ್ವಯದಂತೆ ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳು ಕಂದಾಯ ಇಲಾಖೆ ಆದೇಶದಂತೆ ತಾಲೂಕು ಕಸಬಾ ಹೋಬಳಿಯ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಗ್ರೇಡ್ ೧ ತಹಸೀಲ್ದಾರ್ ಗೆ ಹಾಗೂ ಉಳಿದ ಹೋಬಳಿ ಪ್ರಕರಣಗಳನ್ನು ಗ್ರೇಡ್ ೨ ತಹಸೀಲ್ದಾರ್ ಇತ್ಯರ್ಥ ಪಡಿಸುವಂತೆ ಆದೇಶಿಸಿ ನಿರ್ದೇಶನ ನೀಡಿದ್ದಾರೆ.ಸದರಿ ಆದೇಶದಂತೆ ೩೧-೭-೨೦೧೯ ರಂದು ತಹಸೀಲ್ದಾರ್ ರಮೇಶ್ ಬಾಬು ರವರು Disputed Mutation Case ಪ್ರಕರಣಗಳ ಕಡತಗಳನ್ನ ದಿನಾಂಕ ೧-೮-೨೦೧೯ ರ ಸಂಜೆ ೫ ಗಂಟೆ ಒಳಗೆ ನಾಡಕಚೇರಿಯ ನಿರ್ವಾಹಕರಾದ ರಂಜಿತಾ ರವರಿಗೆ ನೀಡುವಂತೆ ಆದೇಶಿಸಿದ್ದಾರೆ.
ಇದೆಲ್ಲವನ್ನೂ ಮರೆಮಾಚಿದ ಶಿರಸ್ತೇದಾರ್ ಮಹದೇವು ರವರು ೨೦-೮-೨೦೧೯ ರಂದು RRT ಸಂಖ್ಯೆ ೧೨೪/೧೪-೧೫ ಪ್ರಕರಣವನ್ನು ಕೈಗೆತ್ತಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡು ತಹಸೀಲ್ದಾರ್ ಕಾರ್ಯಾಲಯದಲ್ಲಿ ಖಾತೆ ಮಾಡಲು ಆದೇಶಿಸಿದ್ದಾರೆ. ಈ ವಿಚಾರದಲ್ಲಿ ಲಿಖಿತ ವಾದ ಮಂಡಿಸಲು ಅವಕಾಶ ನೀಡದೆ ನಮ್ಮ ಕಕ್ಷಿದಾರರಿಗೆ ಜನಾರ್ಧನ್ ಶರ್ಮ ರವರ ಪುತ್ರ ಶ್ರೀನಿವಾಸ್ ರವರಿಗೆ ಅನ್ಯಾಯ ಮಾಡಿದ್ದಾರೆಂದು ವಕೀಲರಾದ ಬಿ.ಆರ್.ಚಂದ್ರಮೌಳಿ ದೂರಿನಲ್ಲಿ ತಿಳಿಸಿದ್ದಾರೆ.ಅಲ್ಲದೆ ಮಹದೇವ್ ವಿರುದ್ದ kcsr ಕಾಯಿದೆ ನಿಯಮದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದಾರೆ.