ಬೆಂಗಳೂರು,ಜುಲೈ,11,2023(www.justkannada.in): ಹೆಚ್ಚುವರಿ ಅಕ್ಕಿ ನೀಡುವಂತೆ ಕೇಳಿದರೂ ನೀಡದ ಕೇಂದ್ರ ಸರ್ಕಾರ ಇದೀಗ ಕಡಿಮೆ ಬೆಲೆಗೆ ಖಾಸಗಿಯವರಿಗೆ ಮಾರಲು ಇ-ಹರಾಜು ಕರೆದಿದ್ದು ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ಇ-ಹರಾಜು ಮೂಲಕ ಕೇಂದ್ರ ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡುತ್ತಿದೆ. ನಾವು ಕೊಡಲು ಒಪ್ಪಿದ ಮೊತ್ತಕ್ಕಿಂತ ಕಡಿಮೆ ಮೊತ್ತದಲ್ಲಿ ಅಕ್ಕಿ ಮಾರಾಟ ಮಾಡಲು ಹರಾಜು ಕರೆದಿದ್ದರೂ ಅಕ್ಕಿಯನ್ನು ಕೇಳುವವರೇ ಗತಿಯಿಲ್ಲ. ಇದರ ಬದಲು ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡಬಹುದಿತ್ತು. ಕನಿಷ್ಟ ಪಕ್ಷ ಇದರಿಂದ ರಾಜ್ಯದ ಬಡವರ ಹೊಟ್ಟೆಯಾದರೂ ತುಂಬುತಿತ್ತು.
ನಾವು ಕೇಂದ್ರಕ್ಕೆ ಒಂದು kg ಅಕ್ಕಿಗೆ ₹34 ಕೊಡಲು ಒಪ್ಪಿದ್ದೆವು. ಆದರೆ ನಮಗೆ ಅಕ್ಕಿ ನಿರಾಕರಿಸಿದ ಕೇಂದ್ರ ಸರ್ಕಾರ FCI ಮೂಲಕ kgಗೆ ₹31.75ರ ಬೆಲೆ ನಿಗದಿ ಪಡಿಸಿ ಖಾಸಗಿಯವರಿಗೆ ಮಾರಲು ಇ- ಹರಾಜು ಕರೆದಿದೆ. ಇದು ರಾಜ್ಯBJP ನಾಯಕರ ದೃಷ್ಟಿಯಲ್ಲಿ ದ್ರೋಹ ಎನಿಸುವುದಿಲ್ಲವೇ? ಈ ಬಗ್ಗೆ ಮಾತಾಡಲು ರಾಜ್ಯ BJP ನಾಯಕರಿಗೆ ಧಮ್ ಇಲ್ಲವೇ? ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಅಕ್ಕಿ ರಾಜಕೀಯ ಮಾಡಿ ಬಡವರ ಅನ್ನ ಕಸಿದು ಕ್ರೌರ್ಯ ತೋರಿಸಿದೆ. ಕೇಂದ್ರ ಅಕ್ಕಿ ಕೊಡದಿದ್ದರೂ ನಾವು ಬಡವರನ್ನು ಉಪವಾಸ ಕೆಡವುದಿಲ್ಲ. ಈಗಾಗಲೇ ಅಕ್ಕಿಯ ಬದಲು ಹಣ ನೀಡುತ್ತಿದ್ದೇವೆ. ಹೊಟ್ಟೆ ತುಂಬಿದ ಗಿರಾಕಿಗಳಾದ BJPಯವರಿಗೆ ಹಸಿವಿನ ಸಂಕಟ ಗೊತ್ತಿಲ್ಲ. ಇನ್ನಾದರೂ BJP ನಾಯಕರು ರಾಜಕೀಯ ಬಿಟ್ಟು ಕೇಂದ್ರದಿಂದ ಅಕ್ಕಿ ಕೊಡಿಸಲಿ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.
Key words: rice -low price – Central Govt-Minister -Dinesh Gundurao