ಹುಮ್ನಾಬಾದ್ ,ಏಪ್ರಿಲ್,15,2021(www.justkannada.in): ದೇಹದಲ್ಲಿ ಕೋವಿಡ್ ವೈರಾಣು ಪ್ರಮಾಣ ಹೆಚ್ಚಾದಾಗ ನೀಡಲಾಗುವ ರಿಮಿಡೆಸಿವಿರ್ ( remidesivir) ಚುಚ್ಚುಮದ್ದು ಔಷಧಿಯ ಕೃತಕ ಅಭಾವ ಸೃಷ್ಟಿಸಿ ದುಬಾರಿ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕೋವಿಡ್ ನಿಯಂತ್ರಣ ಕಾಯ್ದೆ ಅಡಿ ಕಠಿಣ ಕ್ರಮ ಜರುಗಿಸುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಹುಮ್ನಾಬಾದ್ ನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ರಿಮಿಡೆಸಿವಿರ್ ಔಷಧ ಕೊರತೆ ಇಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಆದರೆ ಈ ಔಷಧಿಯ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ. ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇಂಥ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಈ ಚುಚ್ಚುಮದ್ದನ್ನು ಕೃತಕ ಅಭಾವ ಸೃಷ್ಟಿಸಿ ಕಳ್ಳ ಮಾರುಕಟ್ಟೆಯಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡಿ ದುರ್ಲಾಭ ಪಡೆದರೆ ಕಠಿಣ ಕ್ರಮ ಜರುಗಿಸುವುದಾಗಿ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಸರ್ಕಾರ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿತ್ತು. ಆದರೆ ಈಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಸ್ಪತ್ರೆಗಳಲ್ಲಿ ಕೋವಿಡ್ ಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಅಳವಡಿಸಲಾಗಿದೆ. ಲಸಿಕೆ ಕೊರತೆಯೂ ಇಲ್ಲ ಎಂದು ಅವರು ಹೇಳಿದರು.
ಹಿರಿಯ ಅಧಿಕಾರಿಗಳ ಸಭೆ
ಕೋವಿಡ್ ನಿಂದ ಗೃಹ ಇಲಾಖೆಯ ಸಿಬ್ಬಂದಿಯ ಸುರಕ್ಷತೆ ಮತ್ತು ಗೃಹ ಇಲಾಖೆಯಿಂದ ಕೋವಿಡ್ ನಿಯಂತ್ರಣಕ್ಕೆ ಆಗಬೇಕಾಗಿರುವ ಸೇವೆ ಬಗ್ಗೆ ಚರ್ಚೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
Key words: Rimidasevir -drug -abuse – tough step-Home Minister -Basavaraja Bommai – warns