ಮೈಸೂರು,ಅಕ್ಟೋಬರ್,24,2020(www.justkannada.in): ಮೈಸೂರು ನಗರದ ರಿಂಗ್ ರಸ್ತೆ ಒಳಗಿರುವ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪತ್ರ ಬರೆದಿದ್ದಾರೆ.
ಈ ಕುರಿತು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಸಂಸದ ಪ್ರತಾಪ್ ಸಿಂಹ, ಆಲನಹನಳ್ಳಿ, ಶ್ರೀರಾಮಪುರ, ಚಾಮುಂಡಿಬೆಟ್ಟ ಹಾಗೂ ಹಿನಕಲ್ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವಂತೆ ಕೋರಿದ್ದಾರೆ. ಈಗಾಗಲೇ ಈ ಗ್ರಾಮಗಳು ಸಾಕಷ್ಟು ಅಭಿವೃದ್ಧಿ ಹೊಂದಿ ಅಲ್ಲಿ ಹಲವು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿನ ಜನಸಂಖ್ಯೆ ಹಾಗೂ ಪಂಚಾಯಿತಿ ದಿನೇ ದಿನೇ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೌರಾಡಳಿತ ಕಾಯ್ದೆಯನ್ವಯ ಆ ಗ್ರಾಮಗಳನ್ನು ಮೇಲ್ದರ್ಜೆಗೇರಿಸಲು ಅವಕಾಶ ಹಾಗೂ ಅವಶ್ಯಕತೆ ಎರಡೂ ಇದೆ.
ಆ ಗ್ರಾಮಗಳಿಗೆ ಇನ್ನು ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ನೀಡುವ ಸಲುವಾಗಿ ಪಾಲಿಕೆ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು. ಮುಂದಿನ ಪಾಲಿಕೆ ಸಭೆಯ ಕಾರ್ಯಸೂಚಿ ಒಳಗೆ ಈ ವಿಷಯ ಪ್ರಸ್ತಾಪಿಸಿ ಸಕಾರಾತ್ಮಕ ನಿರ್ಣಯ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಸಂಸದ ಪ್ರತಾಪ್ ಸಿಂಹ ಪ್ರಸ್ತಾವನೆ ನೀಡಿದ್ದಾರೆ.
Key words: Ring Road -villages -Mysore City corporation- Letter -MP Pratap Simha.