ಬೆಂಗಳೂರು,ಅಕ್ಟೋಬರ್,19,2023(www.justkannada.in): ದೇಶದ ಜನರ ಆಹಾರ ಉತ್ಪಾದನೆ ಮಾಡುವ ರೈತರು ಕತ್ತಲಲ್ಲಿ, ಜನಸೇವಕರೆಂಬ ಜನಪ್ರತಿನಿಧಿಗಳು ಮೋಜಿನಲ್ಲಿ, ಬರಗಾಲದಿಂದ ನರಳುತ್ತಿರುವ ರೈತನ ಕೃಷಿ ಪಂಪ್ ಸೆಟ್ ಗಳಿಗೆ ಕೇವಲ 5 ಗಂಟೆ ವಿದ್ಯುತ್, ಕೈಗಾರಿಕೆಗಳಿಗೆ ಸಂಪೂರ್ಣ ವಿದ್ಯುತ್ , ಬರಗಾಲವಿದ್ದರೂ ಕಾವೇರಿ ಅಚ್ಚುಕಟ್ಟು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರು ಬಿಡದೆ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ದ್ರೋಹ ಬಗೆದ ಸರ್ಕಾರಕ್ಕೆ ಎಚ್ಚರಿಸಲು , ಸಂಕಷ್ಟ ಕಾಲದಲ್ಲೂ ಮೋಜಿಗಾಗಿ ವಿದ್ಯುತ್ ಜಗಮಗಿಸುವ ಸರ್ಕಾರದ ವಿರುದ್ದ ದಸರಾ ದಿನದಂದು ಅಕ್ಟೋಬರ್ 24 ರಂದು ಮೈಸೂರು ಚಾಮರಾಜನಗರ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ರೈತರು ರಸ್ತೆ ಬಂದ್ ಚಳುವಳಿ ನಡೆಸಲಾಗುವುದು ಎಂದು ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಅಕ್ಟೋಬರ್ 17ರಂದು ನಡೆದ ಕೃಷಿ ಬೆಲೆ ಆಯೋಗದ ಸಭೆಯಲ್ಲಿ ಕಬ್ಬಿನ ಎಫ್ ಆರ್ ಪಿ ದರ ನಿಗದಿ ಮಾನದಂಡ ಬದಲಾಯಿಸುವಂತೆ ಆಗ್ರಹಿಸಿರುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಹೇಳಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುರುಬೂರು ಶಾಂತಕುಮಾರ್, ಕಬ್ಬಿನ ಎಫ್ ಆರ್ ಪಿ ದರ ನಿಗದಿ ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ನಿಗದಿಯಾಗುತ್ತಿದೆ. ಸಕ್ಕರೆ ಇಳುವರಿ 8.5 ರಿಂದ 10.25 ವರಗೆ ಏರಿಕೆ ಮಾಡಿರುವುದು ಪ್ರತಿವರ್ಷ 50 ರೂ. 100 ರೂ. ಎಫ್ ಆರ್ ಪಿ ದರ ಏರಿಕೆ ರೈತರಿಗೆ ಪ್ರಯೋಜನವಾಗುತ್ತಿಲ್ಲ, ಒಂದು ಟನ್ ಕಬ್ಬು ಉತ್ಪಾದನಾ ವೆಚ್ಚ 3580 ರೂ.ಆಗುತ್ತದೆ. ಆದರೆ ಕೇಂದ್ರ ಸರ್ಕಾರ 3150 ರೂ. ನಿಗದಿ ಮಾಡುತ್ತದೆ. ಎಫ್ ಆರ್ ಪಿ ಏರಿಕೆ ಮಾಡಿದರೂ ಹೆಚ್ಚುವರಿ ಹಣ ರೈತರಿಗೆ ಸಿಗುತ್ತಿಲ್ಲ, ಕಬ್ಬಿನ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಗೊಳಿಸಿ ಎಂದು ದೆಹಲಿಯಲ್ಲಿ ನಡೆದ ಸಿಎಸಿಪಿ ಸಭೆಯಲ್ಲಿ ಒತ್ತಾಯಿಸಿರುವುದಾಗಿ ಕುರುಬೂರು ಶಾಂತಕುಮಾರ್ ತಿಳಿಸಿದರು.
ಕಬ್ಬಿನಿಂದ ಯಥನಾಲ್ ಉತ್ಪಾದನೆ ಬೆಲ್ಲದ ಗಾಣಗಳಲ್ಲಿ ಉತ್ಪಾದಿಸಲು ರೈತರಿಗೆ ಅವಕಾಶ ಕೊಡಬೇಕು. ಸಕ್ಕರೆ ಕಾರ್ಖಾನೆಗಳು ಉತ್ಪಾದಿಸಿದ ವಿದ್ಯುತ್ತನ್ನು ಸಂಪೂರ್ಣವಾಗಿ ಸರ್ಕಾರ ಖರೀದಿಸಿ ಇದರ ಹಣವನ್ನು ರೈತರ ಕಬ್ಬಿನ ಬಿಲ್ ಬಾಕಿಗೆ ಬಳಸಬೇಕು. ಕಬ್ಬಿನ ಬೆಳೆ ಸಾಲ 12 ತಿಂಗಳಿಗೆ ಸುಸ್ತಿಯಾಗುತ್ತದೆ. ಯಾವುದೇ ರೈತ 14-15 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಕಡಿತ ಮಾಡುವುದಿಲ್ಲ. ಆದ್ದರಿಂದ ಕಬ್ಬು ಬೆಳೆಗಾರರಿಗೆ ಸರ್ಕಾರದ ರಿಯಾಯಿತಿ ಬಡ್ಡಿ ಸಾಲ ಸೌಲಭ್ಯ ಸಿಗುವುದಿಲ್ಲ ,ಕಬ್ಬಿನ ಬೆಳೆ ಸಾಲದ ಅವಧಿಯನ್ನು 18 ತಿಂಗಳಿಗೆ ವಿಸ್ತರಿಸಬೇಕು. ಇದರಿಂದ ಸಿಬಿಲ್ ಸ್ಕೋರಲ್ಲಿ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ . ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಸಕ್ಕರೆ ಕಾರ್ಖಾನೆಗಳು ಪರಿಶೀಲಿಸಿ ವರದಿ ಕೊಡುವ ಕಾರಣ ಇಳುವರಿ ನ್ಯಾಯ ಸಮತವಾಗಿ ಕೊಡುತ್ತಿಲ್ಲ ,ತೂಕದಲ್ಲೂ ರೈತರಿಗೆ ಮೋಸವಾಗುತ್ತಿದೆ ,ಇದನ್ನು ತಪ್ಪಿಸಲು ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸುವಂತೆ ಸರ್ಕಾರ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಕಬ್ಬಿಗೆ ಬೆಂಕಿ ಬಿದ್ದಾಗ ಸಕ್ಕರೆ ಕಾರ್ಖಾನೆಗಳು ಶೇಕಡ. 25ರಷ್ಟು ಹಣ ಕಡಿತ ಮಾಡಿಕೊಂಡು ಪಾವತಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಸಕ್ಕರೆ ನಿಯಂತ್ರಣ ಕಾಯ್ದೆ ಕಾನೂನು ತಿದ್ದುಪಡಿ ಮಾಡಬೇಕು. ಈ ಕಾನೂನು ಪ್ರಕಾರ 14 ದಿನದಲ್ಲಿ ಕಬ್ಬಿನ ಹಣ ಪಾವತಿ ಮಾಡದೆ ಇರುವ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕಾನೂನು ಜಾರಿ ಮಾಡಬೇಕು. ಅತಿವೃಷ್ಟಿ, ಪ್ರವಾಹಹಾನಿ, ಬರಗಾಲ ತುತ್ತಾದಾಗ ಕಬ್ಬು ಬೆಳೆ ನಷ್ಟ ಪರಿಹಾರ ಸಿಗುವಂತಾಗಲು ಎನ್ ಡಿಆರ್ ಎಫ್ ಮಾನದಂಡ ತಿದ್ದುಪಡಿ ಮಾಡಬೇಕು. ಕಬ್ಬಿಗೆ ಬೆಳೆವಿಮೆ ಜಾರಿ ತರಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸೋಮಶೇಖರ್, ಹತ್ತಳ್ಳಿ ದೇವರಾಜ್, ಬರಡನಫುರ ನಾಗರಾಜ್, ಕಿರಗಸೂರ ಶಂಕರ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕುರುಬೂರ್ ಸಿದ್ದೇಶ್, ವೆಂಕಟೇಶ್, ರಾಜಣ್ಣ, ಮಂಜುನಾಥ್ ಮುಂತಾದವರಿದ್ದರು.
Key words: Road bandh -movement – villages- against- government-Kuruburu Shanthakumar