ಮೈಸೂರು,ಫೆಬ್ರವರಿ,14,2025 (www.justkannada.in): ಮೈಸೂರು- ಬೆಂಗಳೂರು ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ದರೋಡೆ ಮಾಡಿದ್ದ ನಾಲ್ವರು ಖದೀಮರನ್ನ ಮೈಸೂರಿನ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಶೈಕ್ ಸೋಹ್ಮಲ್, ಸೋಹೈಲ್ ಖಾನ್, ಮೊಹಮ್ಮದ್ ಯಾಸೀನ್, 17 ವರ್ಷದ ಅಪ್ರಾಪ್ತ ಬಂಧಿತ ಆರೋಪಿಗಳು. ಬಂಧಿತರಿಂದ 6,885 ರೂ ನಗದು, 9 ಬೆಲೆ ಬಾಳುವ ಮೊಬೈಲ್ ಫೋನ್ ಗಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೆಬ್ರವರಿ 11ರ ಮಧ್ಯರಾತ್ರಿ ರೈಲಿನಲ್ಲಿ ಈ ದರೋಡೆ ಪ್ರಕರಣ ನಡೆದಿತ್ತು. ಮದ್ದೂರು ಸಮೀಪ ರೈಲಿಗೆ ಹತ್ತಿದ್ದ ಈ ದರೋಡೆಕೋರರು ಮಲಗಿದ್ದ ಚಂದನ್ ಎಂಬವರ ಮೇಲೆರಗಿ ದಾಳಿ ಮಾಡಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದರು. ನಂತರ ಬಟನ್ ಚಾಕು ತೋರಿಸಿ ಚಂದನ್ ಬಳಿಯಿದ್ದ ಹಣ, ಮೊಬೈಲ್ ಕಸಿದಿದ್ದ ಖದೀಮರು ಬಳಿಕ ಗಗನ್, ಶಿವಾನಂದ್ ಸೇರಿ ಹಲವರ ಮೇಲೂ ಹಲ್ಲೆ ನಡೆಸಿ ನಂತರ ಚನ್ನಪಟ್ಟಣ ಸ್ಟೇಷನ್ ಬಳಿ ಇಳಿದು ಪರಾರಿಯಾಗಿದ್ದರು.
ಮರುದಿನ ಚಂದನ್ ಮೈಸೂರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ರೈಲ್ವೆ ನಿಲ್ದಾಣಗಳ ಸಿಸಿಟಿವಿ ಆಧರಿಸಿ ಕಾರ್ಯಾಚರಣೆ ನಡೆಸಿದ ಮೈಸೂರು ರೈಲ್ವೆ ಪೊಲೀಸರು ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
Key words: Mysore-Bengaluru, train, robbed, passenger, arrested