ಬೆಂಗಳೂರು,ಸೆಪ್ಟಂಬರ್,13,2022(www.justkannada.in): ಸ್ವಂತ ಜೀವನದ ಅನುಭವ ಮತ್ತು ದೃಷ್ಟಾಂತಗಳನ್ನು ಸೇರಿಸಿಕೊಂಡಾಗ ಸಾಹಿತ್ಯಕ್ಕೆ ಶಕ್ತಿ ಬರುತ್ತದೆ. ಈಗಿನ ಕಾಲಮಾನದಲ್ಲಿ ಸಾಹಿತ್ಯವನ್ನು ಜನರಿಗೆ ತಲುಪಿಸುವಲ್ಲಿ ಅನುವಾದಕರ ಪಾತ್ರ ಮಹತ್ವದ್ದಾಗಿದೆ. ಇದರ ಜತೆಗೆ ಡಿಜಿಟಲ್ ಮತ್ತು ಸಮೂಹ ಮಾಧ್ಯಮಗಳು ಕೂಡ ಭಾಷೆ, ಸಾಹಿತ್ಯಗಳ ನಡುವೆ ಬೆಸುಗೆ ಏರ್ಪಡಬೇಕು” ಎಂದು ಲೇಖಕ ವಸುಧೇಂದ್ರ ಹೇಳಿದ್ದಾರೆ.
ಬೆಂಗಳೂರು ನಗರ ವಿಶ್ವವಿದ್ಯಾಲಯವು ಏರ್ಪಡಿಸಿರುವ ಎರಡು ದಿನಗಳ ’21ನೇ ಶತಮಾನದ ಸಾಹಿತ್ಯದಲ್ಲಿ ಸಂಸ್ಕೃತಿ ಮತ್ತು ಸಮಾಜಗಳ ಶೋಧ’ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಸೋಮವಾರ ಮಾತನಾಡಿದರು.
“ನನ್ನ ವೈಯಕ್ತಿಕ ಹಿನ್ನೆಲೆ ತುಂಬಾ ಜಟಿಲವಾಗಿದೆ. ಸಲಿಂಗಿಯಾಗಿರುವ ನನ್ನನ್ನು ಈ ಸಮಾಜ ಒಪ್ಪಿಕೊಂಡಿರುವುದು ಸಮಾಧಾನದ ಸಂಗತಿಯಾಗಿದೆ. ಆದರೆ, ಇದಕ್ಕೆ ಮೊದಲು ಅನುಭವಿಸಿದ ತೊಳಲಾಟ ತುಂಬಾ ಸಂಕೀರ್ಣವಾಗಿತ್ತು. ಅಂತಿಮವಾಗಿ ಸಾಹಿತ್ಯವು ಬದುಕನ್ನು ಸಹನೀಯಗೊಳಿಸುತ್ತದೆ. ಇದು ಸಮಾಜದ ಮೌಲ್ಯಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಬೀರುವ ಪ್ರಭಾವವು ಅಗೋಚರವಾಗಿರುತ್ತದೆ” ಎಂದು ಅವರು ನುಡಿದರು.
ಸಾಹಿತ್ಯವನ್ನು ಇದಮಿತ್ಥಂ ಎಂದು ಹೇಳುವುದು ಸಾಧ್ಯವಿಲ್ಲ. ಅದು ಜೀವನಾನುಭವ, ಜೀವನವನ್ನು ನೋಡುವ ಕ್ರಮ, ಸಮಾಜದ ಲೋಪದೋಷಗಳು ಹೀಗೆ ಎಲ್ಲವನ್ನೂ ಒಳಗೊಂಡಿರುತ್ತದೆ. ಇದನ್ನೆಲ್ಲ ಅಭಿವ್ಯಕ್ತಿಸಲು ಸಮರ್ಥವಾದ ಭಾಷೆಯನ್ನು ನಮ್ಮದಾಗಿಸಿಕೊಳ್ಳಬೇಕು. ಆದಷ್ಟೂ ಮಟ್ಟಿಗೆ ಸ್ಥಳೀಯ ನುಡಿಗಟ್ಟುಗಳನ್ನು ಬಳಸುವುದು ಸಾಹಿತ್ಯದ ಪರಿಣಾಮವನ್ನು ತೀವ್ರಗೊಳಿಸಿ, ಒಂದು ಜೀವಂತಿಕೆಯನ್ನು ತರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಟಿ ಎನ್ ತಾಂಡವ ಗೌಡ ಮಾತನಾಡಿ, 21ನೇ ಶತಮಾನದ ಸಾಹಿತ್ಯ ಕುರಿತು ಇಂತಹ ಸಂಕಿರಣಗಳು ಹೆಚ್ಚಾಗಿ ನಡೆಯಬೇಕು. ಇದರಿಂದಾಗಿ ಶೈಕ್ಷಣಿಕ ವಲಯವು ಸಾಹಿತ್ಯದ ಅನುಸಂಧಾನ ನಡೆಸುವುದು ಸಾಧ್ಯವಾಗುತ್ತದೆ. ಜತೆಗೆ ವಿ.ವಿ.ಗಳಲ್ಲಿ ಇಂತಹ ಅನುಸಂಧಾನಗಳು ಹೆಚ್ಚಾಗಿ ನಡೆಯುವುದರಿಂದ ಸಾಹಿತ್ಯದ ಜತೆ ಮುಖಾಮುಖಿಯ ಸಂಸ್ಕೃತಿ ಬೆಳೆಯುತ್ತದೆ. ಒಂದು ಸಮಾಜಕ್ಕೆ ಇಂತಹ ಸೃಜನಶೀಲ ಚಟುವಟಿಕೆಗಳ ನಿಕಟತೆ ಅಗತ್ಯವಾಗಿರುತ್ತದೆ ಎಂದರು.
ಹಿರಿಯ ಲೇಖಕಿ ಪ್ರೊ.ರೇಣು ಎಲಿಜಬೆತ್ ಅಬ್ರಹಾಂ ಮಾತನಾಡಿ, ಈ ಕಾಲಮಾನದಲ್ಲಿ ಮನುಷ್ಯರೆಲ್ಲರೂ ಕೇವಲ ಡೇಟಾ ಆಗಿ ಬದಲಾಗಿದ್ದಾರೆ; ಡಿಜಿಟಲೀಕರಣದಿಂದಾಗಿ ನಾವು ಓದುವ ಮತ್ತು ಸಾಹಿತ್ಯವನ್ನು ಆಸ್ವಾದಿಸುವ ಕ್ರಮಗಳೇ ಆಮೂಲಾಗ್ರವಾಗಿ ಬದಲಾಗಿವೆ. ಹಿಂದಿನಂತೆ ಪಠ್ಯವು ಈಗ ಎಲ್ಲೋ ಪ್ರತ್ಯೇಕವಾಗಿಲ್ಲ. ಬದಲಿಗೆ ಅದು ಹಲವು ಬಗೆಯ ಮಾಧ್ಯಮಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ ಎಂದರು.
ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ಸಂಸ್ಕೃತಿ ಅಧ್ಯಯನವು 21ನೇ ಶತಮಾನದಲ್ಲಿ ಇಂಗ್ಲಿಷ್ ಅಧ್ಯಯನದ ಒಂದು ಕವಲಾಗಿದೆ. ಸಾಹಿತ್ಯವು ಮೂಲಭೂತವಾಗಿ ಸೀಮಾತೀತವಾಗಿದ್ದು, ಇಡೀ ಮನುಕುಲಕ್ಕೆ ಬೇಕಾಗಿರುವ ಚಿಂತನೆಗಳನ್ನು ಸೃಷ್ಟಿಸುವಷ್ಟು ಶಕ್ತಿಶಾಲಿ ಆಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಪ್ರಸಾದ್ ಗೌಡ, ಪ್ರೊ.ವಿ.ಎಸ್. ಶ್ರೀಧರ್, ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ಕಣ್ಣನ್, ಡಾ.ಪ್ರೀತಾ ವಾಸನ್ ಪ್ರೊ.ಡಾಮಿನಿಕ್ ಡೇವಿಡಪ್ಪ ಮುಂತಾದವರು ಉಪಸ್ಥಿತರಿದ್ದರು.
Key words: Role – Personal -Experiences – Literature- Author -Vasudhendra.