ಬೆಂಗಳೂರು:ಮೇ-6: ಸತತ ನಾಲ್ಕು ವರ್ಷಗಳ ಬರದಿಂದ ತತ್ತರಿಸಿರುವ ರೈತನಿಗೆ ಬೇಸಿಗೆ ಬಿಸಿಲು, ಅಕಾಲಿಕ ಹಾಗೂ ಆಲಿಕಲ್ಲು ಮಳೆ ಬರ ಸಿಡಿಲಿನಂತೆ ಬಡಿದಿದೆ.
ಕುಸಿದ ಅಂತರ್ಜಲ, ಕುಡಿಯುವ ನೀರಿಗೂ ತತ್ವಾರದಲ್ಲೂ ಹಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಬೆಳೆದ ಫಸಲು ರೈತರ ಕೈಗೆ ಸಿಗದಂತಾಗಿದೆ. ರಾಜ್ಯದಲ್ಲಿ ಅಕಾಲಿಕ ಮಳೆಗೆ ಸುಮಾರು 150 ಕೋಟಿ ರೂ. ಬೆಲೆಯ ತೋಟಗಾರಿಕೆ ಹಾಗೂ ಕೃಷಿ ಬೆಳೆ ಹಾನಿಗೀಡಾಗಿರುವುದಾಗಿ ಅಂದಾಜಿಸಲಾಗಿದೆ.
ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿ ತೆರಳಿದ ಬೆನ್ನಲ್ಲೇ ಬಿದ್ದ ಅಕಾಲಿಕ ಮತ್ತು ಆಲಿಕಲ್ಲು ಮಳೆ ತೋಟಗಾರಿಕೆ ಬೆಳೆಗಳಿಗೆ ಕುತ್ತು ತಂದಿದೆ. ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಾಮರಾಜನಗರ, ಕೊಪ್ಪಳ, ಹಾವೇರಿ, ಬೆಳಗಾವಿ, ಧಾರವಾಡ, ಮೈಸೂರು, ಚಿತ್ರದುರ್ಗ ಸೇರಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿ ರೈತರು ಹೈರಾಣಾಗಿದ್ದಾರೆ. ಅನೇಕ ಕಡೆ ಬಿರುಗಾಳಿ ಮಳೆಗೆ ತೋಟಕ್ಕೆ ತೋಟವೇ ನೆಲಸಮವಾಗಿ ರೈತರ ಕನಸುಗಳು ಕ್ಷಣಾರ್ಧದಲ್ಲೇ ನುಚ್ಚು ನೂರಾಗಿದ್ದು, ರೈತರು ಕಂಗಾಲಾಗಿದ್ದಾರೆ. ಬರದ ಜತೆಗೆ ಬೇಸಿಗೆ ಬಿಸಿಲ ಬರೆ ಬೆಳೆಯನ್ನು ಕೃಶವಾಗಿಸಿದೆ. ಹಣ್ಣು-ತರಕಾರಿಗಳಂತೂ ಬಿಸಿಲ ಝುಳಕ್ಕೆ ಮುರುಟಿಕೊಂಡಿವೆ.
ಯಾವ ಬೆಳೆ ಹಾನಿ? ಮಾವು, ತೆಂಗು, ಅಡಕೆ, ದ್ರಾಕ್ಷಿ, ಬಾಳೆ, ಕಬ್ಬು, ವೀಳ್ಯದೆಲೆ, ತರಕಾರಿ ಬೆಳೆಗಳು ಸಾಕಷ್ಟು ಹಾನಿಗೀಡಾಗಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿವೆ. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಂತೂ ಅಡಕೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಪೂರೈಸಿದವರು ಬರಿಗೈ ಆಗಿದ್ದಾರೆ. ಆಲಿಕಲ್ಲು ಮತ್ತು ಬಿರುಗಾಳಿ ಮಳೆಗೆ ದ್ರಾಕ್ಷಿ ಬೆಳೆ ನೆಲಕ್ಕುರುಳಿದೆ. ಬಿಸಿಲ ತಾಪಕ್ಕೆ ಮಾವಿನ ಕಾಯಿಗೆ ರಸ ಹರಿವ ಪ್ರಕ್ರಿಯೆ (ಖಚಟ ಞಟಡಛಿಞಛ್ಞಿಠಿ) ಕಡಿಮೆಯಾಗಿ ಮಾವಿನ ಹಣ್ಣಿನ ಗಾತ್ರವೇ ಕುಂಠಿತಗೊಂಡಿದೆ. ಬಾಳೆ ನೆಲಕ್ಕಪ್ಪಳಿಸಿದ್ದರೆ, ಕಲ್ಲಂಗಡಿಗಳು ಬಸವಳಿದಿವೆ.
ಚಾಮರಾಜನಗರದಲ್ಲಿ ಕಬ್ಬು, ಬಾಳೆ, ತೆಂಗು ಗಾಳಿ-ಮಳೆಗೆ ಹಾನಿಗೀಡಾಗಿದ್ದು, ಜಿಲ್ಲಾಡಳಿತ ಬೆಳೆ ಹಾನಿ ಪರೀಶೀಲಿಸಿ, ಎಷ್ಟು ಎಕರೆ ಪ್ರದೇಶದಲ್ಲಿ ಎಷ್ಟು ಮೌಲ್ಯದ ಬೆಳೆ ನಷ್ಟವಾಗಿದೆ ಎಂಬ ವರದಿ ನೀಡುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸೂಚಿಸಿದೆ. ಕಾಯಿ ಕಟ್ಟುವ ಸಂದರ್ಭ ಮಳೆಯ ಕೊರತೆ, ಫಲ ಕೊಡುವ ವೇಳೆ ಬಿಸಿಲ ಬೇಗೆಯಿಂದ ಬಾಯಲ್ಲಿ ನೀರೂರಿಸುವ ಬಾದಾಮಿ, ರಸಪುರಿ, ಮಲ್ಲಿಕಾ, ಬಂಗನಪಲ್ಲಿ, ನೀಲಂ, ಮಲಗೋವಾ, ತೋತಾಪುರಿ, ರತ್ನಗಿರಿ ತಳಿಯ ಮಾವು ಕಟಾವಿಗೆ ಬರುವುದು ತಡವಾಗಿದ್ದರಿಂದ ಬೆಲೆ ಗಗನಕ್ಕೇರಿದೆ.
ಎಲ್ಲಿ ಹೆಚ್ಚು ಹಾನಿ?
ತೋಟಗಾರಿಕೆ ಇಲಾಖೆ ವರದಿ ಪ್ರಕಾರ ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಾಮರಾಜನಗರ ಮತ್ತು ಕೊಪ್ಪಳದಲ್ಲಿ ಬೆಳೆದ ತೋಟಗಾರಿಕೆ ಬೆಳೆಗೆ ಹೆಚ್ಚು ಹಾನಿಯಾಗಿದೆ. ರಾಮನಗರ ಜಿಲ್ಲೆಯ ಭೂ ಹಳ್ಳಿಯ ವೀಳ್ಯೆದೆಲೆ ತೋಟಗಳು ನೆಲಕ್ಕುರುಳಿವೆ. ಇನ್ನೂ ಅನೇಕ ಕಡೆ ಅಡಕೆ, ತೆಂಗು ಬೆಳೆಗಳು ಜಖಂಗೊಂಡಿವೆ. ಹಾವೇರಿ ಜಿಲ್ಲೆಯ ಅನೇಕ ಕಡೆ ಬೀಸಿದ ಭಾರಿ ಗಾಳಿ-ಮಳೆಗೆ ಬಾಳೆ ಬೆಳೆ ನೆಲಕ್ಕುರುಳಿ ಅಪಾರ ಹಾನಿ ಸಂಭವಿಸಿದೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕಿಡಾಗಿದ್ದಾರೆ.
ಪರಿಹಾರ ನೀಡುವಂತೆ ರೈತರ ಆಗ್ರಹ
ಅಕಾಲಿಕ ಮತ್ತು ಬಿರುಗಾಳಿ ಮಳೆಯಿಂದ ಬೆಳೆ ನಾಶವಾಗಿದ್ದು, ಅದಕ್ಕಾಗಿ ಮಾಡಿದ್ದ ಖರ್ಚು ಕೂಡ ಕೈಗೆ ಸಿಗದಂತಾಗಿದೆ. ಭಾರಿ ಗಾಳಿಗೆ ಮಾವು, ಬಾಳೆ, ಭತ್ತ, ತೆಂಗು, ಅಡಕೆ ನೆಲಕ್ಕೆ ಬಿದ್ದು, ಅಪಾರ ಹಾನಿಯಾಗಿದೆ. ಬೆಳೆ ಹಾನಿಗೀಡಾದವರಿಗೆ ಬೆಳೆಗೆ ಅನುಗುಣವಾಗಿ ಪರಿಹಾರ ನೀಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ.
ರೈತರಲ್ಲಿ ಇನ್ನೂ ಫೊನಿ ಫೋಬಿಯಾ
ಫೊನಿ ಚಂಡಮಾರುತ ಹಾಗೂ ಮೇಲ್ಮೆ ೖ ಸುಳಿಯ ಪ್ರಭಾವ ತಗ್ಗಿದ್ದರಿಂದ ಸದ್ಯ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಗಳಿಲ್ಲ. ಆದರೆ, ಒಂದೆರಡು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಆದರೂ ರೈತರಲ್ಲಿ ಭಯ ಕಡಿಮೆಯಾಗಿಲ್ಲ.
ಸರ್ಕಾರ ರೈತರ ಕಣ್ಣೊರೆಸುವ ಕೆಲಸ ಮಾಡಬಾರದು. ನಿಜವಾದ ಬೆಳೆ ನಷ್ಟ ಸಮೀಕ್ಷೆ ಮಾಡಿಸಿ ಪರಿಹಾರ ನೀಡಬೇಕು. ಬಾಳೆ, ವೀಳ್ಯೆದೆಲೆ, ಮಾವಿಗೆ ನಿರ್ದಿಷ್ಟ ಪರಿಹಾರ ಕೊಡದಿದ್ದರೆ ರೈತರಿಗೆ ಬಹುದೊಡ್ಡ ಸಂಕಷ್ಟ ಎದುರಾಗಲಿದೆ. ರೈತರ ಪರಿಶ್ರಮ, ಪರಿಸ್ಥಿತಿ ಅರ್ಥ ಮಾಡಿಕೊಂಡು ಬೆಳೆ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.
| ಕೆ.ಎಸ್. ಲಕ್ಷ್ಮಣಸ್ವಾಮಿ ರಾಮನಗರ ಜಿಲ್ಲಾ ರೈತ ಸಂಘದ ಅಧ್ಯಕ್ಷ.
ನಾಳೆ-ನಾಡಿದ್ದು ಕೆಲವೆಡೆ ಮಳೆ ಸಾಧ್ಯತೆ
ಬೆಂಗಳೂರು: ಕರಾವಳಿ ಕರ್ನಾಟಕ ಮತ್ತು ರಾಜ್ಯದ ಉತ್ತರ ಒಳನಾಡಿನಲ್ಲಿ ಒಣಹವೆ ವಾತಾವರಣ ಮುಂದುವರಿದಿದೆ. ದಕ್ಷಿಣ ಒಳನಾಡಿನ ಕೆಲವೆಡೆ ತುಂತುರು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ತಾಪಮಾನ ಇಳಿಮುಖವಾಗಿದೆ. ಮಂಗಳವಾರ ಮತ್ತು ಬುಧವಾರ ಕರಾವಳಿ ಕರ್ನಾಟಕದ ಎಲ್ಲ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೃಪೆ:ವಿಜಯವಾಣಿ