ಬೆಂಗಳೂರು, ಜನವರಿ 7, 2022 (www.justkannada.in): ಬಿಬಿಎಂಪಿ ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ, ಬೆಂಗಳೂರು ನಗರದ ಅತೀ ಹೆಚ್ಚಿನ ವಾಹನ ಸಂಚಾರ ದಟ್ಟಣೆಯಿರುವ ಹೆಬ್ಬಾಳ ಜಂಕ್ಷನ್ ನ ಸಮಸ್ಯೆಯನ್ನು ತಗ್ಗಿಸುವ ಯೋಜನೆಯೊಂದಿಗೆ, ನಗರದ ಮೂಲಭೂತಸೌಕರ್ಯಗಳನ್ನು ಹೆಚ್ಚಿಸಲು ಬರೋಬ್ಬರಿ ರೂ.೬,೦೦೦ ಕೋಟಿಗಳನ್ನು ಮಂಜೂರು ಮಾಡಿದೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು, “ಮುಂದಿನ ಮೂರು ವರ್ಷಗಳಲ್ಲಿ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರಕ್ಕೆ ವಾರ್ಷಿಕ ರೂ.೨,೦೦೦ ಕೋಟಿ ಅನುದಾನದಂತೆ ಒಟ್ಟು ರೂ.೬,೦೦೦ ಕೋಟಿ ಲಭ್ಯವಾಗಲಿದೆ,” ಎಂದು ವಿವರಿಸಿದರು.
ಈ ಮೊತ್ತವನ್ನು ನಗರದ ಮೂಲಭೂತಸೌಕರ್ಯ ಅಭಿವೃದ್ಧಿಗೆ ಬಳಸಲಾಗುವುದು. ಇದು ಬಿಬಿಎಂಪಿ ಈಗಾಗಲೇ ಕೈಗೊಂಡಿರುವ ಇತರೆ ಕಾಮಗಾರಿಗಳನ್ನು ಹೊರತುಪಡಿಸಿದೆ, ಎಂದರು. ವಿಮಾನ ನಿಲ್ದಾಣದ ದಾರಿಯಲ್ಲಿ ಬರುವಂತಹ ಅತ್ಯಂತ ಹೆಚ್ಚಿನ ವಾಹನ ಸಂಚಾರ ದಟ್ಟಣೆ ಇರುವಂತಹ ಹೆಬ್ಬಾಳ ಜಂಕ್ಷನ್ ನಲ್ಲಿ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಸರ್ಕಾರದ ಯೋಜನೆಯನ್ನೂ ಮಾಧುಸ್ವಾಮಿ ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಈ ಯೋಜನೆ, ಅತಿ ದುರ್ಬರ ಪರಿಸ್ಥಿತಿ ಇರುವಂತಹ ಕೆ.ಆರ್. ಪುರಂ ಹಾಗೂ ತುಮಕೂರು ರಸ್ತೆಗಳಲ್ಲಿ ಕೈಗೊಳ್ಳಲಾಗುವ ಮಧ್ಯಸ್ಥಿಕೆಗಳು ಒಳಗೊಂಡಿದೆ.
ನಗರದ ವಿವಿಧ ನಾಗರಿಕ ಸಂಸ್ಥೆಗಳಿಗೆ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸುವಂತೆ ನಿರ್ದೇಶಿಸಲಾಗಿದೆ. “ಬಿಎಂಆರ್‌ಸಿಎಲ್, ೨೦೫೧ರವರೆಗಿನ ಸಂಭವನೀಯ ವಾಹನ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಹೆಬ್ಬಾಳ ಜಂಕ್ಷನ್ ಬಳಿ ವಾಹನ ದಟ್ಟಣೆಯನ್ನು ಕಡಿಮೆಗೊಳಿಸುವ ಸಂಬಂಧ ಸಮಗ್ರ ಅಧ್ಯಯನವೊಂದನ್ನು ಆರಂಭಿಸಿದೆ,” ಎಂದು ವಿವರಿಸಿದರು. ಬಿಬಿಎಂಪಿ, ಬಿಡಿಎ, ಬಿಎಂಟಿಸಿ ಹಾಗೂ ಇನ್ನಿತರೆ ಏಜೆನ್ಸಿಗಳೂ ಸಹ ಇದರಲ್ಲಿ ಕೈಜೋಡಿಸಲಿವೆ.
“ಪ್ರಾಥಮಿಕವಾಗಿ ಸರ್ಕಾರ, ನಗರದ ಪ್ರಮುಖ ಸ್ಥಳಗಳಲ್ಲಿ ಸಂಚಾರಿ ಲೇನ್ ಗಳ ಸಂಖ್ಯೆಯನ್ನು ಹೆಚ್ಚಿಸುವ ೧೨ ಯೋಜನೆಗಳನ್ನು ಪಟ್ಟಿ ಮಾಡಿದೆ. “ಈ ಎಲ್ಲಾ ಯೋಜನೆಗಳ ಅಂದಾಜು ಮೊತ್ತವನ್ನು ಇನ್ನೂ ಅಂದಾಜಿಸಬೇಕಿದೆ. ಯೋಜನೆಗೆ ಅಗತ್ಯವಿರುವ ಹಣವನ್ನು ಮುಂದಿನ ಆಯವ್ಯಯದಲ್ಲಿ ಮಂಜೂರು ಮಾಡಲಾಗುತ್ತದೆ,” ಎಂದು ಮಾಧುಸ್ವಾಮಿ ಅವರು ಮಾಹಿತಿ ನೀಡಿದರು.
ಪರಿಶೋಧಿಸುತ್ತಿರುವ ಪ್ರಸ್ತಾವನೆಯ ಪ್ರಕಾರ ಬೆಂಗಳೂರು ನಗರದಿಂದ ವಿಮಾನ ನಿಲ್ದಾಣದ ಕಡೆಗೆ ತೆರಳುವ ಮಾರ್ಗದಲ್ಲಿ ಬಳ್ಳಾರಿ ರಸ್ತೆಯಲ್ಲಿ ಸಂಚಾರ ಪಥಗಳನ್ನು ಎರಡೂ ಕಡೆ ಮೂರರಿಂದ ಐದಕ್ಕೆ ವಿಸ್ತರಿಸುವ ಯೋಜನೆ ಸೇರಿದೆ. ತುಮಕೂರು ರಸ್ತೆಯಿಂದ ಕೆ.ಆರ್. ಪುರಂವರೆಗೆ ಮೂರು ಪಥಗಳ ಅಂಡರ್ ಪಾಸ್, ಕೆ.ಆರ್. ಪುರಂನಿಂದ ನಗರದ ಕೇಂದ್ರ ಭಾಗದವರೆಗೆ ಎರಡು-ಪಥಗಳ ಫ್ಲೈಓವರ್, ಕೆ.ಆರ್.ಪುರಂ ನಿಂದ ವಿಮಾನ ನಿಲ್ದಾಣದ ಕಡೆಗೆ ಎರಡು-ಪಥಗಳ ಫ್ಲೈಓವರ್, ವಿಮಾನ ನಿಲ್ದಾಣದಿಂದ ಕೆ.ಆರ್. ಪುರಂವರೆಗಿನ ಸರ್ವೀಸ್ ರಸ್ತೆಯನ್ನು ಎರಡರಿಂದ ಮೂರಕ್ಕೆ ವಿಸ್ತರಣೆ ಮಾಡುವುದು, ಕೆ.ಆರ್. ಪುರಂ-ತುಮಕೂರು ರಸ್ತೆಯನ್ನು ನಾಲ್ಕು-ಪಥಗಳಿಗೆ ವಿಸ್ತರಿಸುವುದು, ಇತರೆ ಉಪಕ್ರಮಗಳಲ್ಲಿ ಸೇರಿವೆ.
ಬಸ್ ನಿಲ್ದಾಣ, ಬನಶಂಕರಿ ದೇವಸ್ಥಾನ ಹಾಗೂ ಮಾರುಕಟ್ಟೆಗಳಿರುವಂತಹ ಅತ್ಯಂತ ಜನನಿಬಿಡ ಬನಶಂಕರಿ ಮೆಟ್ರೊ ನಿಲ್ದಾಣದ ವೃತ್ತದ ಬಳಿ ಎತ್ತರಿಸಿರುವ ವೃತ್ತಾಕಾರದ ಸ್ಕೈವಾಕ್ ಅನ್ನೂ ಸಹ ನಿರ್ಮಾಣ ಮಾಡಲು ಪ್ರಸ್ತಾಪಿಸಲಾಗಿದೆ. ಈ ಸ್ಕೈವಾಕ್ ಪಾದಚಾರಿಗಳಿಗೆ ಸಹಾಯವಾಗುತ್ತದೆ. ಆ ಮೂಲಕ ಈ ಸ್ಥಳದಲ್ಲಿ ಬಿಎಂಟಿಸಿ ಬಸ್ಸುಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಿದೆ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.
ಇನ್ನೊಂದು ನಿರ್ಧಾರದಲ್ಲಿ ರಾಜ್ಯ ಸಚಿವ ಸಂಪುಟವು ರೂ.೧೦೦ ಕೋಟಿ ಮೊತ್ತದಲ್ಲಿ ಬೆಂಗಳೂರು ನಗರಕ್ಕೆ ೩೦೦ ವಿದ್ಯುತ್ ಚಾಲಿತ ಬಸ್ಸುಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Rs.6000 crore – infrastructure- development -Bangalore.