ಆರ್​ಟಿಇ ವಿದ್ಯಾರ್ಥಿಗಳಿಗೆ ಶುಲ್ಕ ಫಜೀತಿ: ಸರ್ಕಾರದಿಂದ 600 ಕೋಟಿ ರೂ. ಬಾಕಿ, ಫೀಸ್ ಕಟ್ಟಲು ಶಾಲೆಗಳ ಒತ್ತಡ

ಬೆಂಗಳೂರು:ಜು-22 ಮೈತ್ರಿ ಸರ್ಕಾರದ ಆದ್ಯತಾ ಕ್ಷೇತ್ರಗಳಲ್ಲಿ ಶಿಕ್ಷಣವೂ ಒಂದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಂಡ ಮರುದಿನವೇ ವಿಚಿತ್ರ ಸುದ್ದಿಯೊಂದು ಹೊರಬಿದ್ದಿದ್ದು, ಸರ್ಕಾರ ಆರ್​ಟಿಇ ಬಾಕಿ ನೀಡದ ಕಾರಣ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಹಣ ಕಟ್ಟಿಸಿಕೊಳ್ಳಲು ಮುಂದಾಗಿವೆ.

ಸರ್ಕಾರ 2018ರ ಸೆಪ್ಟೆಂಬರ್​ನಿಂದ ಈವರೆಗೆ ಬರೋಬ್ಬರಿ 600 ಕೋಟಿ ರೂ. ಆರ್​ಟಿಇ ಬಾಬ್ತು ಬಾಕಿ ಉಳಿಸಿಕೊಂಡಿದೆ.

ಸರ್ಕಾರ ಬಾಕಿ ಚುಕ್ತ ಮಾಡದ ಕಾರಣ ಖಾಸಗಿ ಶಾಲೆಗಳು ಈ ಶೈಕ್ಷಣಿಕ ಸಾಲಿನಲ್ಲಿ ಆರ್​ಟಿಇ ಸೀಟು ಪಡೆದ ಮಕ್ಕಳಿಂದ ಶುಲ್ಕ ವಸೂಲಿಗೆ ಮುಂದಾಗಿವೆ. ಸರ್ಕಾರ ಬಾಕಿ ಹಣ ಕೊಟ್ಟ ಮೇಲೆ ನಿಮಗೆ ವಾಪಸು ಕೊಡುತ್ತೇವೆ, ಈಗ ನೀವು ಶುಲ್ಕ ತುಂಬುವುದು ಅನಿವಾರ್ಯ ಎಂದು ಕೆಲವು ಶಾಲೆಗಳು ಪಾಲಕರಿಗೆ ಅನೌಪಚಾರಿಕವಾಗಿ ಹೇಳಿವೆ. ಒಂದು ವೇಳೆ ಜೂನ್ 30ರೊಳಗೆ ಸರ್ಕಾರ ಬಾಕಿ ಪಾವತಿ ಮಾಡದಿದ್ದಲ್ಲಿ ಅಧಿಕೃತವಾಗಿಯೇ ವಿದ್ಯಾರ್ಥಿಗಳಿಂದ ಶುಲ್ಕ ಪಡೆದುಕೊಳ್ಳಲು ತೀರ್ಮಾನ ಮಾಡಿವೆ.

ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿರುವ ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನಕಾರ್ಯದರ್ಶಿ ಶಶಿಕುಮಾರ್ ‘ಬಹುತೇಕ ಶಾಲೆಗಳಿಗೆ 2018ನೇ ಶೈಕ್ಷಣಿಕ ಸಾಲಿನ ಮೊದಲ ಕಂತಿನ ಬಾಕಿ ಹಣವೇ ಬಂದಿಲ್ಲ. ಹೀಗಾದರೆ ಶಾಲೆ ನಡೆಸುವುದಾದರೂ ಹೇಗೆ?’ ಎಂದು ಪ್ರಶ್ನಿಸಿದ್ದಾರೆ.

ಖಾಸಗಿ ಶಾಲೆ ಎಂದ ಕೂಡಲೇ ಬೆಂಗಳೂರಿನಲ್ಲಿ ಹೆಚ್ಚು ಶುಲ್ಕ ವಸೂಲಿ ಮಾಡುತ್ತವೆಂದು ಭಾವಿಸಬೇಕಿಲ್ಲ. ಬಜೆಟ್ ಶುಲ್ಕದಲ್ಲಿ ನಡೆಯುವ ಶಾಲೆಗಳೂ ಇವೆ. ಅದರನ್ನೂ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಶಾಲೆಗಳಲ್ಲಿ ಶೇ.99 ಖಾಸಗಿ ಶಾಲೆಗಳು ಸರ್ಕಾರ ಬಾಕಿ ಉಳಿಸಿಕೊಂಡಿದ್ದರಿಂದ ಪರದಾಡುತ್ತಿವೆ ಎಂದರು. 5 ಸಾವಿರ ಶಾಲೆಗಳಿಗೆ ಹಿಂದಿನ ವರ್ಷದ ಬಾಕಿಯೇ ಬಂದಿಲ್ಲ. 2 ಸಾವಿರ ಶಾಲೆಗಳ ಪ್ರಸ್ತಾವನೆಯೇ ತಾಂತ್ರಿಕ ಕಾರಣಗಳಿಗೆ ಸ್ವೀಕಾರವಾಗಿಲ್ಲ. ಒಟ್ಟಾರೆ ಆರ್​ಟಿಇ ಹಣ ಪಾವತಿಗೆ ಗ್ರಹಣ ಬಡಿದಿದೆ. ಆರ್​ಟಿಇ ಕಾಯ್ದೆಯ ನಿಯಮದ ಪ್ರಕಾರ ಸೆಪ್ಟೆಂಬರ್ 30ರೊಳಗೆ ಮೊದಲ ಕಂತು ಹಾಗೂ ಜನವರಿ ಒಳಗಾಗಿ ಎರಡನೇ ಕಂತನ್ನು ಪಾವತಿಸಬೇಕಾಗುತ್ತದೆ. ಸರ್ಕಾರ ನಿಯಮದಂತೆ ನಡೆದುಕೊಂಡಿಲ್ಲ. ಶಾಲೆಗಳು ಮಾತ್ರ ಸಿಬ್ಬಂದಿ ಪಿಎಫ್ ಪಾವತಿ ತಡವಾದರೆ, ಇಎಸ್​ಐ ವಂತಿಗೆ ಕಟ್ಟುವುದು ತಡವಾದರೆ ದಂಡ ಹಾಕಲಾಗುತ್ತದೆ. ಸರ್ಕಾರ ನಿಯಮ ಮುರಿದರೆ ಯಾರು ಕ್ರಮಕೈಗೊಳ್ಳುವುದು ಎಂಬ ವಾದ ಶಾಲೆಗಳದ್ದು.

ಹಣದ ಕೊರತೆಯೇ?

ಸರ್ಕಾರ ಕಳೆದ ಆರ್ಥಿಕ ಸಾಲಿನಲ್ಲಿ ಮರುಪಾವತಿಗೆ ಬೇಕಾಗುವಷ್ಟು ಹಣವನ್ನು ಇಟ್ಟುಕೊಂಡಿರಲಿಲ್ಲ. ಕೊನೆಗೆ ಬಿಡುಗಡೆಯಾದ ಹಂಚಿಕೆಯಲ್ಲಿ 250 ಕೋಟಿಯಷ್ಟು ಹಣ ವಾಪಾಸು ಹೋಗಿದೆ. ಶಿಕ್ಷಣ ಇಲಾಖೆ ಮತ್ತು ಆರ್ಥಿಕ ಇಲಾಖೆ ನಡುವೆ ಸ್ಪಷ್ಟತೆ ಇಲ್ಲದಿರುವುದು ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.

ಪಾಲಕರ ಖಾತೆಗೆ ಹಣ ವರ್ಗಾಯಿಸಿ

ಆರ್​ಟಿಇ ಸೀಟು ಶುಲ್ಕವನ್ನು ಸರ್ಕಾರ ಶಾಲೆಗಳಿಗೆ ಬಿಡುಗಡೆ ಮಾಡುವ ಬದಲು ಮಕ್ಕಳ ಪೋಷಕರಿಗೆ ನೇರ ವರ್ಗಾವಣೆ ಮಾಡಲಿ ಎಂದು ಖಾಸಗಿ ಶಾಲೆಗಳು ಸರ್ಕಾರಕ್ಕೆ ಪ್ರಸ್ತಾಪ ಮುಂದಿಟ್ಟಿವೆ. ಈ ರೀತಿ ಮಾಡುವುದರಿಂದ ಗೊಂದಲ ಬಗೆಹರಿಯುತ್ತದೆ. ಪೋಷಕರಿಗೂ ಸರ್ಕಾರ ಮಾಡುತ್ತಿರುವ ಖರ್ಚಿನ ಬಗ್ಗೆ ಅರಿವಿರುತ್ತದೆ, ಪಾಲಕರು ಸಮಯಕ್ಕೆ ಶುಲ್ಕ ಕಟ್ಟುವುದರಿಂದ ಶಾಲೆಗಳು ನಿರಾತಂಕವಾಗಿ ನಡೆಯುತ್ತದೆ ಎಂದು ಹೊಸ ಸಾಧ್ಯತೆಯನ್ನು ಮುಂದಿಟ್ಟಿವೆ.

12 ಸಾವಿರ ಖಾಸಗಿ ಶಾಲೆ
6 ಲಕ್ಷ ಮಕ್ಕಳು
1-8ನೇ ತರಗತಿಯ ಶೇ.25 ಮಕ್ಕಳು
600 ಕೋಟಿ ಶುಲ್ಕ ಬಾಕಿ
ಹಳೆ ಬಾಕಿ ಈ ವರ್ಷಕ್ಕೆ ಸೇರಿ 1600 ಕೋಟಿ ಬೇಕಾಗುತ್ತದೆ
ಕೃಪೆ:ವಿಜಯವಾಣಿ

ಆರ್​ಟಿಇ ವಿದ್ಯಾರ್ಥಿಗಳಿಗೆ ಶುಲ್ಕ ಫಜೀತಿ: ಸರ್ಕಾರದಿಂದ 600 ಕೋಟಿ ರೂ. ಬಾಕಿ, ಫೀಸ್ ಕಟ್ಟಲು ಶಾಲೆಗಳ ಒತ್ತಡ
rte-student-education-state-govt-cm-kumaraswamy-govt-school/