ಕೀವ್,ಮಾರ್ಚ್,4,2022(www.justkannada.in): ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದರೂ ಕೂಡ ಯುದ್ಧ ಮುಂದುವರೆದಿದ್ದು ಈ ಮಧ್ಯೆ ಉಕ್ರೇನ್ ನ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ದಾಳಿ ನಡೆಸಿದೆ.
ಉಕ್ರೇನ್ನಲ್ಲಿರುವ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಯುರೋಪಿನಲ್ಲೇ ಅತ್ಯಂತ ದೊಡ್ಡ ಸ್ಥಾವರವಾಗಿದ್ದು, ಈ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾದ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಸಮೀಪದ ಪಟ್ಟಣ ಎನರ್ಗೋಡರ್ನ ಮೇಯರ್ ಡಿಮಿಟ್ರೋ ಓರ್ಲೋವ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರಷ್ಯಾ ಈಗಾಗಲೇ ನಿಷ್ಕ್ರಿಯವಾಗಿರುವ ಚೆರ್ನೋಬಿಲ್ ಸ್ಥಾವರವನ್ನು ವಶಪಡಿಸಿಕೊಂಡಿದೆ.
ಉಕ್ರೇನ್ನ ಜಫೋರಿಝಿಯಾದ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾ ದಾಳಿ ನಡೆಸಿರುವುದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾದಿಂದ ಪರಮಾಣು ಭಯೋತ್ಪಾದನೆ ನಡೆಸಲಾಗುತ್ತಿದ್ದು, ಚೆರ್ನೋಬಿಲ್ ದುರಂತ ಪುನರಾವರ್ತಿಸಲು ರಷ್ಯಾ ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಿಸಿ ವಾರದ ಮೇಲಾಗಿದ್ದು, ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ನ ತನ್ನ ಪ್ರತಿರೋಧದಿಂದ ರಷ್ಯಾವನ್ನು ಎದುರಿಸುತ್ತಿದೆ. ಕಳೆದ ಕೆಲವು ದಿನಗಳಿಂದ ರಷ್ಯಾದ ಆಕ್ರಮಣ ತೀವ್ರವಾಗಿದ್ದು, ಜನವಸತಿ ಪ್ರದೇಶ ಸೇರಿದಂತೆ ನಾಗರಿಕ ಆವಾಸ ಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.
Key words: Russia-attacks-Ukraine- nuclear- power plant.