ಹಂಪಿ, ನ.19, 2020 : (www.justkannada.in news) 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಬಳ್ಳಾರಿ ಜಿಲ್ಲೆಯ ಪ್ರವಾಸದಲ್ಲಿರುವ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಂಪಿಯ ವಿಜಯ ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡಿ ಕಲ್ಲಿನ ರಥವನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾರ್ಗದರ್ಶಿಗಳಿಂದ ಕೃಷ್ಣದೇವರಾಯ ಸಾಮ್ರಾಜ್ಯದ ಆಡಳಿತದ ವಿವರಗಳನ್ನು ಪಡೆದುಕೊಂಡರು. ಇದೇ ವೇಳೆ ಮಾತನಾಡಿದ ಸಚಿವ ಸೋಮಶೇಖರ್ , ಆಗಿನ ಕಾಲದ ವಾಸ್ತುಶಿಲ್ಪ ಸೇರಿದಂತೆ ಕಲೆಗಳಿಗೆ ಎಷ್ಟರಮಟ್ಟಿಗೆ ಪ್ರಾಮುಖ್ಯತೆ ಸಿಗುತ್ತಿತ್ತು ಎಂಬುದನ್ನು ಇಂಥ ದೇವಾಲಯಗಳನ್ನು ನೋಡಿದರೆ ನಮಗೆ ತಿಳಿಯುತ್ತದೆ. ಇಂಥ ಕಲ್ಲಿನ ರಥಗಳನ್ನು ನಿರ್ಮಿಸುವುದು ಸಾಮಾನ್ಯವಾದ ಕೆಲಸವೇನಲ್ಲ. ಹೀಗೆ ಅಭೂತಪೂರ್ವ ಕಲೆಗಳನ್ನು ಉಳಿಸಿ ನಮಗಾಗಿ ಬಿಟ್ಟು ಹೋದ ನಮ್ಮ ಪೂರ್ವಜರಿಗೆ ನನ್ನದೊಂದು ದೊಡ್ಡ ಸಲಾಂ ಎಂದು ತಿಳಿಸಿದರು.
ವಿಜಯನಗರದ ಕೃಷ್ಣದೇವರಾಯರ ಸಾಮ್ರಾಜ್ಯದ ಆಡಳಿತ ಸಂದರ್ಭದಲ್ಲಿ ಬೀದಿ ಬೀದಿಗಳಲ್ಲಿ ಮುತ್ತು, ರತ್ನ, ವಜ್ರ, ವೈಡೂರ್ಯಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹಾಗೂ ಆಗಿನ ಸಮೃದ್ಧ ಸಂಪತ್ತಿನ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಸಚಿವರು, ಸಂತಸ ವ್ಯಕ್ತಪಡಿಸಿದ್ದಲ್ಲದೆ, ಕರ್ನಾಟಕದ ಗತ ವೈಭವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಇಂಥ ಸಮೃದ್ಧ ರಾಜ್ಯವಾಗಿ ನಮ್ಮ ಕರ್ನಾಟಕವು ಮತ್ತೊಮ್ಮೆ ಹೊರಹೊಮ್ಮಬೇಕು. ನಮ್ಮ ನಾಡಿನ ಸಮಸ್ತ ಜನತೆ ಸಹ ಸಮೃದ್ಧಿಯನ್ನು ಹೊಂದಬೇಕು ಎಂಬ ಆಶಯವನ್ನು ಸಚಿವ ಎಸ್. ಟಿ. ಸೋಮಶೇಖರ್ ವ್ಯಕ್ತಪಡಿಸಿದರು.
OOO
KEY WORDS : S.T.SOMASHEKAR-HAMPI-KARNATAKA-BJP