ಬೆಂಗಳೂರು,ಜೂ,24,2020(www.justkannada.in): ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನೆಲೆ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದು ಪರೀಕ್ಷಾ ಕೇಂದ್ರವಲ್ಲ ಸುರಕ್ಷಾ ಕೇಂದ್ರ. ಧೈರ್ಯವಾಗಿ ಬಂದು ಪರೀಕ್ಷೆ ಬರೆದು ಹೋಗಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವೈಯಾಲಿಕಾವಲ್ ಎಜುಕೇಷನ್ ಸೊಸೈಟಿ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ನಾಳೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ ನೀಡಿದ್ದೇವೆ. ಒಂದು ಕೊಠಡಿಯಲ್ಲಿ 18 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ. ಪರೀಕ್ಷೆ ಬರುವಾಗ ಮಾಸ್ಕ್ ಸ್ಯಾನಿಟೈಸರ್ ಕಡ್ಡಾಯವಾಗಿದೆ. ವಿದ್ಯಾರ್ಥಿಗಳಿಗೆ ನಾವೇ ಮಾಸ್ಕ್ ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು.
ಪೋಷಕರು ವಿದ್ಯಾರ್ಥಿಗಳನ್ನ ಕರೆತಂದು ಬಿಟ್ಟುಹೋಗಿ. ಆದರೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಗುಂಪು ಸೇರದಂತೆ ಕ್ರಮ, ಪೋಷಕರಿಗೆ ಅರಿವು ಮೂಡಿಸಲಾಗುತ್ತದೆ. ಪರೀಕ್ಷಾ ವ್ಯವಸ್ಥೆ ಬಗ್ಗೆ ಪೋಷಕರು ವಿದ್ಯಾರ್ಥಿಗಳಲ್ಲಿ ಹೆದರಿಕೆ ಬೇಡ. ಕ್ಷೇತ್ರಶಿಕ್ಷಣಾಧಿಕಾರಿಗಳು ಹಲವು ಕ್ರಮಗಳನ್ನ ಕೈಗೊಂಡಿದ್ದಾರೆ. ಧೈರ್ಯವಾಗಿ ಬಂದು ಪರೀಕ್ಷೆ ಬರೆದು ಹೋಗಿ.ಇದು ಪರೀಕ್ಷಾ ಕೇಂದ್ರವಲ್ಲ ಸುರಕ್ಷಾ ಕೇಂದ್ರ ಎಂದು ಸಚಿವ ಸುರೇಶ್ ಕುಮಾರ್ ಅಭಯ ನೀಡಿದರು. ‘
ಬೆಂಗಳೂರಿನಲ್ಲಿ 1200 ಕೊರೋನಾ ಪ್ರಕರಣಗಳಿವೆ. ಆದರೆ ಅದರಲ್ಲಿ ರೋಗ ಲಕ್ಷಣ ಇಲ್ಲದವರೇ ಹೆಚ್ಚು. ವಿದ್ಯಾರ್ಥಿಗಳಲ್ಲಿ ಸೋಂಕಿರುವುದು ಖಚಿತವಾದರೇ ಪೂರಕ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
Key words: safety – students SSLC-Exam- Education Minister- Suresh Kumar.