ಪುಣೆ:ಮೇ-27:(www.justkannada.in) ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ನೆರವು ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ವಕೀಲ ಸಂಜೀವ್ ಪುನಲೇಕರ್, ಗೌರಿ ಹತ್ಯೆ ಹಂತಕನಿಗೂ ಹತ್ಯೆಗೆ ಬಳಸಿದ್ದ ಶಸ್ತ್ರಾಸ್ತ್ರ ಗಾನ್ನು ನಾಶಪಡಿಸುವಂತೆ ಸೂಚಿಸಿದ್ದ ಎಂಬ ಅಂಶ ಬಯಲಾಗಿದೆ.
ವಕೀಲ ಸಂಜೀವ್ ಪುನಲೇಕರ್ ಮತ್ತು ‘ಸನಾತನ ಸಂಸ್ಥಾ’ ಸಂಘಟನೆಯ ಸದಸ್ಯ ವಿಕ್ರಮ್ ಭಾವೆ ಅವರನ್ನು ಶನಿವಾರ ಬಂಧಿಸಿದ್ದ ಕೇಂದ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಪುಣೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಎನ್.ಸೋನಾವಾನೆ ಮುಂದೆ ಹಾಜರು ಪಡಿಸಿದ್ದರು. ಬಂಧಿತರಿಬ್ಬರೂ ಹಂತಕರ ಜತೆ ಸಂಪರ್ಕದಲ್ಲಿದ್ದು, ಕೆಲವು ಮಹತ್ವದ ಸಾಕ್ಷ್ಯಗಳನ್ನು ನಾಶಪಡಿಸಲು ನೆರವಾಗಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಈ ಇಬ್ಬರನ್ನು ಜೂನ್ 1ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿ ಪುಣೆ ನ್ಯಾಯಾಲಯ ಆದೇಶ ನೀಡಿದೆ.
ದಾಭೋಲ್ಕರ್ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವಂತೆ ಪ್ರಕರಣದ ಶೂಟರ್ಗಳಲ್ಲಿ ಒಬ್ಬನಾದ ಶರದ್ ಕಲಸ್ಕರ್ಗೆ ವಕೀಲ ಪುನಲೇಕರ್ ಸಲಹೆ ನೀಡಿದ್ದ. ಆ ಪ್ರಕಾರ ಹಂತಕರು ನಡೆದುಕೊಂಡು ತನಿಖೆ ದಾರಿ ತಪ್ಪಿಸಲು ಯತ್ನಿಸಿದ್ದಾರೆ ಎಂದು ಕೋರ್ಟ್ಗೆ ತಿಳಿಸಲಾಗಿದೆ.
ಭಾವೆ ಕೂಡ ದಾಭೋಲ್ಕರ್ ಹಂತಕರಿಗೆ ನೆರವು ನೀಡಿದ್ದ. 2008ರಲ್ಲಿ ನಡೆದ ಗಡ್ಕರಿ ರಂಗಾಯತನ್ ಸ್ಫೋಟ ಪ್ರಕರಣದಲ್ಲಿಯೂ ಈತ ಶಿಕ್ಷೆಗೆ ಗುರಿಯಾಗಿದ್ದು, ಜಾಮೀನು ಪಡೆದು ಹೊರ ಬಂದಿದ್ದ. ಮಾಲೇಗಾಂವ್ ಸ್ಫೋಟ ಪ್ರಕರಣ ಕುರಿತು ಈತ ಮರಾಠಿಯಲ್ಲಿ ಪುಸ್ತಕವೊಂದನ್ನು ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.