ಬೆಂಗಳೂರು:ಜೂ-30:(www.justkannada.in) ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಅಭಿನಯದ ‘ಬೆಲ್ ಬಾಟಂ’ ಸಿನಿಮಾ ರಾಜ್ಯದಲ್ಲಿ ಯಶಸ್ವಿ 100 ದಿನಗಳನ್ನು ಪೂರೈಸಿದ್ದು ಹಳೆ ವಿಚಾರ ಈಗ ಇದೇ ಚಿತ್ರ ಜಪಾನ್ ನಲ್ಲಿ ಕೂಡ ಪ್ರದರ್ಶನಗೊಳ್ಳುತ್ತಿದೆ ಎಂಬುದು ವಿಶೇಷ.
ಹೌದು. ಜಯತೀರ್ಥ ನಿರ್ದೇಶನ, ಸಂತೋಷ್ ಕುಮಾರ್ ನಿರ್ಮಾಣದ ‘ಬೆಲ್ ಬಾಟಂ’ ಚಿತ್ರ ಈಗ ಜಪಾನ್ ನಲ್ಲಿ ಸೌಂಡು ಮಾಡಲು ಸಜ್ಜಾಗಿದೆ. ‘ಸಾಮಾನ್ಯವಾಗಿ ಜಪಾನ್ನಲ್ಲಿ ತಮಿಳು ಚಿತ್ರಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಆದರೆ ಕನ್ನಡದಲ್ಲೂ ಉತ್ತಮ ಗುಣಮಟ್ಟದ ಸಿನಿಮಾಗಳು ನಿರ್ಮಾಣ ಆಗುತ್ತಿರುವುದರಿಂದ ಜಪಾನಿನ ವಿತರಕರು ಚಂದನವನದ ಕಡೆಗೆ ಗಮನ ಹರಿಸುತ್ತಿದ್ದಾರೆ. ‘ಕೆಜಿಎಫ್’ ಬಳಿಕ ಅಲ್ಲಿ ಪ್ರದರ್ಶನ ಕಾಣಲಿರುವ ಮತ್ತೊಂದು ಕನ್ನಡ ಸಿನಿಮಾ ‘ಬೆಲ್ ಬಾಟಂ’ ಎಂಬುದು ಹೆಮ್ಮೆಯ ವಿಚಾರ.
ಕೆಲವೇ ದಿನಗಳ ಹಿಂದೆ ಜಪಾನ್ ನಲ್ಲಿ ಚಿತ್ರ ಬಿಡುಗಡೆ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಸಂತೋಷ್ ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ಕೊನೇ ವಾರ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಚಿತ್ರ ಪ್ರದರ್ಶನ ಆಗಲಿದೆ. ಜಪಾನಿ ಭಾಷೆಗೆ ಡಬ್ ಮಾಡಬೇಕೋ ಅಥವಾ ಜಪಾನಿ ಸಬ್ಟೈಟಲ್ ಅಳವಡಿಸಿ ಬಿಡುಗಡೆ ಮಾಡಬೇಕೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆಯಂತೆ.
ಈ ಬಗ್ಗೆ ಜಯತೀರ್ಥ ಹೇಳುವ ಪ್ರಕಾರ, ಕನ್ನಡದ ಸಿನಿಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಾವು ಈ ಚಿತ್ರ ಮಾಡಿದ್ದೆವು. ಅದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.