ಜ.14 ರಂದು ದೇವಲಪುರದಲ್ಲಿ ಸಂಕ್ರಾಂತಿ ಸಂಭ್ರಮ: ಸಕಲ ಸಿದ್ದತೆಗೆ ಜಿಲ್ಲಾಧಿಕಾರಿ ಡಾ. ಕುಮಾರ ಸೂಚನೆ

ಮಂಡ್ಯ, ಜನವರಿ,6,2025 (www.justkannada.in): ಜಿಲ್ಲಾಡಳಿತ ಈ ಬಾರಿ ರೈತರ ಸುಗ್ಗಿ ಹಬ್ಬವನ್ನು ಜನವರಿ 14 ರಂದು ನಾಗಮಂಗಲದ ದೇವಲಾಪುರದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಚರಿಸಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಇಂದು ದೇವಲಪುರದ ಪಬ್ಲಿಕ್ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ ಆಚರಣೆಯ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಡಿಸಿ ಡಾ.ಕುಮಾರ,  ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಅಧಿಕಾರಿಗಳನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ ಎಂದರು.

ಮೆರವಣಿಗೆ: ಸಂಕ್ರಾಂತಿ ಸಂಭ್ರಮದ ಅಂಗವಾಗಿ ಜನವರಿ 14 ರಂದು ಮಧ್ಯಾಹ್ನ 2 ಗಂಟೆಗೆ  ಒಂದು ಕಿ.ಮೀಟರ್ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಅಲಂಕೃತ ಎತ್ತಿನಗಾಡಿಗಳು, ಪೂರ್ಣ ಕುಂಭ ಹೊತ್ತ ಮಹಿಳೆಯರು  ಸೇರಿದಂತೆ ವಿವಿಧ ಕಲಾತಂಡಗಳು ಭಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಿದೆ.

ಮೆರವಣಿಗೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲು ಕೃಷಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಮೆರವಣಿಗೆ ಸಮಿತಿ ರಚಿಸುವಂತೆ ತಿಳಿಸಿದರು.

ರಾಶಿ ಪೂಜೆ ಸಂಕ್ರಾಂತಿ ಹಬ್ಬದಲ್ಲಿ ರಾಗಿ ಸೇರಿದಂತೆ ಸಿರಿಧಾನ್ಯಗಳ ರಾಶಿ ಮಾಡಿ ಪೂಜೆ ಸಲ್ಲಿಸಲು ಸೂಕ್ತ ಸ್ಥಳವನ್ನು ಗುರುತಿಸಬೇಕು ಇದರೊಂದಿಗೆ ಬೆಲ್ಲದ ಪರಿಷೆ ಸಹ ಮಾಡುವಂತೆ ತಿಳಿಸಿದರು.

ವಿವಿಧ ಸ್ಪರ್ಧೆಗಳು ಕಾರ್ಯಕ್ರಮದ ಅಂಗವಾಗಿ ಕಬ್ಬಡಿ, ಕುಸ್ತಿ, ಹಗ್ಗ ಜಗ್ಗಾಟ, ವಾಲಿಬಾಲ್, ರಂಗೋಲಿ, ಹಾಲು ಕರೆಯುವ ಸ್ಪರ್ಧೆಗಳನ್ನು ಆಯೋಜಿಸುವಂತೆ ತಿಳಿಸಿದರು.

ದೇವಲಪುರದ ವ್ಯಾಪ್ತಿಗೆ ಬರುವ 5 ಗ್ರಾಮ ಪಂಚಾಯಿತಿ ಹಾಗೂ 64 ಗ್ರಾಮಗಳಲ್ಲಿ ಸ್ಪರ್ಧೆ ಆಯೋಜನೆಯ ಬಗ್ಗೆ ಹೆಚ್ಚಿನ ಅಟೋ ಪ್ರಚಾರ, ಕರ ಪತ್ರಗಳ ಮೂಲಕ ಪ್ರಚಾರ ಕೈಗೊಂಡು ಹೆಚ್ಚಿನ ಜನರು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಎಂದರು.

ಕಿಚ್ಚು ಹಾಯಿಸುವುದು ಸಂಕ್ರಾಂತಿಯ ಪ್ರಮುಖ ಆಕರ್ಷಣೆ ದನಗಳ ಕಿಚ್ಚು ಹಾಯಿಸುವುದು. ಗ್ರಾಮದ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಸಂಜೆ ಕಾರ್ಯಕ್ರಮ ಆಯೋಜಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.

ವಸ್ತು ಪ್ರದರ್ಶನ ಹಾಗೂ ಆಹಾರ ಮಳಿಗೆಗಳು ರೈತರಿಗೆ ಮಾಹಿತಿ ನೀಡಲು‌ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲು ವ್ಯವಸ್ಥೆ ಮಾಡಿಕೊಳ್ಳಿ. ವಿವಿಧ ಪ್ರಕಾರಗಳು ಶುಚಿ- ರುಚಿ ಆಹಾರ ಮಾರಾಟ ಮಾಡಲು ಆಹಾರ ಮಳಿಗೆಗಳನ್ನು ತೆರೆಯಲು ಯೋಜನೆ ರೂಪಿಸಿ ಎಂದರು.

ಉಚಿತ ಆರೋಗ್ಯ ಶಿಬಿರ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡುವುದರ ಜೊತೆಗೆ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ ಕಾರ್ಯನಿರ್ವಾಹಕ ಅಧಿಕಾರಿಗಳು  ಗ್ರಾಮ ಪಂಚಾಯತಿಗ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ, ಎಲ್ಲರ ಸಮನ್ವಯದೊಂದಿಗೆ ಕಾರ್ಯಕ್ರಮ ಆಯೋಜಿಸಬೇಕು. ಕಸ ಸಂಗ್ರಹಣೆ ವಾಹನಗಳ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳಿ. ವಾಹನಗಳ ಪಾರ್ಕಿಂಗ್ ಗೆ ಸೂಕ್ತ ಸ್ಥಳವನ್ನು ಗುರುತಿಸಿ ಸಮತಟ್ಟು ಮಾಡಿ, ದೇವಲಪುರ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಿ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್,  ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ ಬಿ.ವಿ ನಂದೀಶ್, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ: ಸುರೇಶ್ ಮತ್ತು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Sankranti celebrations, Devalpur, January 14, DC Dr. Kumar