ಪ್ರಾಮಾಣಿಕತೆ, ಮಾನವೀಯತೆಯನ್ನು ಮರೆಯದಿರಿ- ಜಸ್ಟೀಸ್ ಸಂತೋಷ್ ಹೆಗ್ಡೆ ಕರೆ

ಬೆಂಗಳೂರು, ಮಾರ್ಚ್, 25,2025 (www.justkannada.in):  ಮಾನವೀಯತೆ ಇರುವವರು ಮಾತ್ರ ಮನುಷ್ಯರಾಗಲು ಸಾಧ್ಯ. ಉಳಿದವರು ಕೇವಲ ಹೋಮೋಸೇಪಿಯನ್ಸ್ ಅಷ್ಟೆ. ಪ್ರಾಮಾಣಿಕತೆ, ಮಾನವೀಯತೆಯನ್ನು ಮೊದಲು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದು ಜಸ್ಟೀಸ್ ಸಂತೋಷ್ ಹೆಗ್ಡೆ ಕರೆ ನೀಡಿದರು.

ಜಯನಗರ ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಂತೋಷ್ ಹೆಗ್ಡೆ, ರಾಜಕೀಯ ಸೇವೆಯಾಗಬೇಕೆ ಹೊರತು, ವೃತ್ತಿಯಾಗಬಾರದು. ಲಂಚ ಕೊಟ್ಟು ಕೆಲಸಕ್ಕೆ ಸೇರಿದವ, ಮುಂದೆ ನಾನು ಕೊಟ್ಟು ಬಂದಿದ್ದೀನಿ, ಬಿಟ್ಟಿ ಬಂದಿಲ್ಲ ಅಂತ ಹೇಳದೇ ಇರುತ್ತಾನ? ದುಡ್ಡಿನಲ್ಲಿ ಮಿಲಿಯನೇರ್ ಆಗೋದು ಸಾಧನೆಯಲ್ಲ , ದುರಾಸೆ ಬಿಟ್ಟು ಸಾಮಾಜಿಕ ಮೌಲ್ಯಗಳಲ್ಲಿ ಶ್ರೀಮಂತರಾಗಬೇಕು ಎಂದರು.

ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟರದ್ದೇ ಸಿಂಹಪಾಲು. ಯಾರೊಬ್ಬರೂ ದೂರು ನೀಡಲು ಮುಂದೆ ಬರುವುದಿಲ್ಲವೆಂದರೆ ,ಅದರಲ್ಲಿ ಅವರದ್ದೂ ಪಾಲಿದೆ ಅಂತಲೇ ಅರ್ಥ ಎಂದು ಖಂಡಿಸಿದರು.

ಇದೇ ವೇಳೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದ ಸಂದರ್ಶನ ಮ್ಯಾಗಜಿನ್ ಮತ್ತು ಕ್ಯಾಂಪಸ್ ಪತ್ರಿಕೆ, ‘ದಿ ಎನ್. ಸಿ.ಜೆ ಟೈಮ್ಸ್’ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಎನ್ ಇ ಎಸ್ ಆಫ್ ಕರ್ನಾಟಕದ ಅಧ್ಯಕ್ಷ ಡಾ. ಹೆಚ್.ಎನ್. ಸುಬ್ರಹ್ಮಣ್ಯ, ಕಾರ್ಯದರ್ಶಿ ವಿ. ವೆಂಕಟಾಶಿವಾರೆಡ್ಡಿ, ಚೇರ್ಮನ್ ಡಾ. ವೆಂಕಟರಾಮರೆಡ್ಡಿ , ಪ್ರಾಂಶುಪಾಲೆ ಡಾ. ಸಿ. ವಿಜಯಲಕ್ಷ್ಮಿ, ಡಾ. ಜಯದೇವಪ್ಪ, ಪ್ರೊ. ಚೆಲುವಪ್ಪ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ವೈಶಾಲಿ ಎಚ್.ಬಿ. ಉಪಸ್ಥಿತರಿದ್ದರು.

Key words: honest, humanity, Justice, Santosh Hegde